ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಿ ಶಾಲೆ ಉಳಿಸುವ ಜವಬ್ದಾರಿ ಪೋಷಕರದ್ದು : ಸಿಪಿಐ ಗುರಣ್ಣ ಹೆಬ್ಬಾಳ್ಕರ್
“ಸರ್ಕಾರಿ ಶಾಲೆ ಅಭಿಮಾನ – ಸುಣ್ಣಬಣ್ಣ ಅಭಿಯಾನದ ಮತ್ತೊಂದು ಶಾಲೆಗೆ ಚಾಲನೆ ನೀಡಿದ ಸಿಪಿಐ ಗುರಣ್ಣ ಹೆಬ್ಬಾಳ್ಕರ್
ಹೊಸನಗರ : ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಿ ಶಾಲೆಗಳನ್ನು ಉಳಿಸುವ ಜವಾಬ್ದಾರಿ ಪ್ರತಿಯೊಬ್ಬ ಪೋಷಕರ ಮೇಲಿದೆ. ಸರ್ಕಾರಿ ಶಾಲೆಗಳಲ್ಲಿ ಅನೇಕ ಸೌಲಭ್ಯಗಳು ಲಭ್ಯವಾಗುತ್ತಿದ್ದು, ಇದರತ್ತ ಹೆಚ್ಚಿನ ಗಮನಹರಿಸಬೇಕೆಂದು ಸಿಪಿಐ ಗುರಣ್ಣ ಹೆಬ್ಬಾಳ್ಕರ್ ಹೇಳಿದರು.
ಪಟ್ಟಣದ ಮಾವಿನಕೊಪ್ಪ ಸರ್ಕಾರಿ ಶಾಲೆಯಲ್ಲಿ ಪೋಸ್ಟ್ ಮ್ಯಾನ್ ಸುದ್ದಿ ಬಳಗದ ವತಿಯಿಂದ ಆಯೋಜಿಸಲಾಗಿದ್ದ ಕನ್ನಡ ಶಾಲೆಯ ಅಭಿಮಾನ, ಸುಣ್ಣ ಬಣ್ಣದ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಾನವನ ಜೀವಿತದಲ್ಲಿ ಅತ್ಯಂತ ಪವಿತ್ರವಾದ ಸ್ಥಳ ಶಾಲೆಯಾಗಿದ್ದು. ಶಾಲೆಯಲ್ಲಿ ಕಲಿತ ಪಾಠ ಪ್ರವಚನಗಳು, ಬದುಕಿನ ದಿಕ್ಕನ್ನೇ ಬದಲಾಯಿಸುವಂತಹ ಅದ್ಭುತವಾದ ಶಕ್ತಿಯನ್ನು ಹೊಂದಿರುತ್ತದೆ,ಕನ್ನಡದ ಶಾಲೆಯ ಬಗ್ಗೆ ಅಭಿಮಾನವನ್ನು ಹೊಂದಿ ಅದರಲ್ಲೂ ಸರ್ಕಾರಿ ಶಾಲೆಗಳ ಬಗ್ಗೆ ಗಮನಹರಿಸಿ ಸುಣ್ಣ ಬಣ್ಣದ ಜೊತೆಗೆ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳ ಅಭಿವೃದ್ಧಿಗೆ ಸಹಕಾರ ನೀಡುತ್ತಿರುವ ಪೋಸ್ಟ್ ಮ್ಯಾನ್ ಬಳಗದ ಕನ್ನಡ ಶಾಲೆಯ ಅಭಿಮಾನ ಸುಣ್ಣ ಬಣ್ಣದ ಅಭಿಯಾನ ಕಾರ್ಯಕ್ರಮ ನಿರಂತರವಾಗಿರಲಿ ಹಾಗೆಯೇ ಅವರುಗಳು ಶೈಕ್ಷಣಿಕ ಅಭಿವೃದ್ಧಿಗೆ ಸಮಾಜಕ್ಕೆ ಸಹಕಾರ ನೀಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಮಲೆನಾಡು ವಾಯ್ಸ್ ಪತ್ರಿಕೆಯ ಸಂಪಾದಕ ನಗರ ರಾಘವೇಂದ್ರ ಮಾತನಾಡಿ ಸರ್ಕಾರಿ ಕನ್ನಡ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಆಗಲು ಮುಖ್ಯವಾಗಿ ಶಾಲೆಗಳ ಮೂಲ ಸೌಕರ್ಯ ಕೊರತೆಯೂ ಕಾರಣವಾಗಿದೆ. ಹಲವು ಕಡೆ ವಾಹನ ಸಂಪರ್ಕ ಇಲ್ಲದೇ ಕಿಮೀ ಗಟ್ಟಲೆ ನಡೆದುಕೊಂಡು ಶಾಲೆಗೆ ಬರುವ ಸ್ಥಿತಿ ಇದೆ. ಇದರಿಂದಾಗಿ ಮಕ್ಕಳ ಪಾಲಕರಿಗೆ ಜಾಗೃತಿ ಮೂಡಿಸುವ ಕಾರ್ಯ ಆಗಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರವು ಕಾರ್ಯ ಪ್ರವೃತ್ತವಾಗುವುದು ಮುಖ್ಯವಾಗಿದೆ ಎಂದರು.
ಈ ಸಂಧರ್ಭದಲ್ಲಿ ಪೋಸ್ಟ್ ಮ್ಯಾನ್ ನ್ಯೂಸ್ ಸಂಪಾದಕ ರಫ಼ಿ ರಿಪ್ಪನ್‌ಪೇಟೆ , ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾದ ವೆಂಕಟೇಶಮೂರ್ತಿ,ಪೋಸ್ಟ್ ಮ್ಯಾನ್ ಬಳಗದ ಉಮೇಶ್ ಜಾಗದ್ದೆ,ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷರಾದ ಗುರುರಾಜ್, ಮುಖ್ಯಶಿಕ್ಷಕರಾದ ಕುಬೇರಪ್ಪ ಇದ್ದರು.