Ripponpete | ಪಡಿತರ ದಾಸ್ತಾನುವಿನಲ್ಲಿ ಅವ್ಯವಹಾರ – ಅಂಗಡಿಯ ಪರವಾನಗಿ ಅಮಾನತ್ತುಗೊಳಿಸಿ ಆದೇಶ
ರಿಪ್ಪನ್‌ಪೇಟೆ : ಇಲ್ಲಿನ ಗ್ರಾಪಂ ಹಿಂಭಾಗದ ವಿಎಸ್ ಎಸ್ ಎನ್ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ದಾಸ್ತಾನುವಿನಲ್ಲಿ ಲೋಪ ಕಂಡು ಬಂದಿರುವ ಹಿನ್ನಲೆಯಲ್ಲಿ ಪ್ರಾಧಿಕಾರ ನಂ: 03/2017-18 ನ್ನು ವಿಚಾರಣೆಗೆ ಕಾಯ್ದಿರಿಸಿ, ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತ್ತುಪಡಿಸಿ ಜಿಲ್ಲಾ ಆಹಾರ ಉಪ ನಿರ್ದೇಶಕ ಆರ್ ಅವಿನ್ ಆದೇಶಿಸಿದ್ದಾರೆ.
ದಿನಾಂಕ 16-12-2023 ರಂದು ಜಿಲ್ಲಾ ಆಹಾರ ಉಪ ನಿರ್ದೇಶಕರು
ನ್ಯಾಯಬೆಲೆ ಅಂಗಡಿಗೆ ಖುದ್ದು ಭೇಟಿ ನೀಡಿ, ನ್ಯಾಯಬೆಲೆ ಅಂಗಡಿಯ ದಾಸ್ತಾನಿನ ಪರಿಶೀಲನೆ ನಡೆಸಲಾಗಿ ಭೌತಿಕ ದಾಸ್ತಾನಿಗೂ ಆನ್ ಲೈನ್ ದಾಸ್ತಾನಿಗೂ ವ್ಯತ್ಯಾಸವಿರುವುದು ಕಂಡುಬಂದಿರುತ್ತದೆ , ದರ ದಾಸ್ತಾನು ಫಲಕದಲ್ಲಿ ದಾಸ್ತಾನು ವಿವರ ನಮೂದಿಸಿರುವುದಿಲ್ಲ , ನ್ಯಾಯಬೆಲೆ ಅಂಗಡಿಯಲ್ಲಿ ಜಾಗೃತಿ ಸಮಿತಿ ಸದಸ್ಯರ ಪಟ್ಟಿ ಪ್ರದರ್ಶಿಸಿರುವುದಿಲ್ಲ, ನ್ಯಾಯಬೆಲೆ ಅಂಗಡಿಯಲ್ಲಿ ತನಿಖಾ ಪುಸ್ತಕ ಇಲ್ಲದೇ ಇರುವಂತಹ ನ್ಯೂನತೆಗಳು ಕಂಡುಬಂದಿರುತ್ತವೆ.
ವಿತರಣಾ ಪದ್ಧತಿ (ನಿಯಂತ್ರಣಾ) ಆದೇಶ -2016 ಕ್ಲಾಸ್ 4(3) ರಡಿ ಪಡೆದ ಪ್ರಾಧಿಕಾರ ಸಾಮಾನ್ಯ ಷರತ್ತು ಸಂಖ್ಯೆ: 5 7, 8, ಮತ್ತು 9, ಹಾಗೂ ಕ್ಲಾಸ್ 14, 16 ಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಂಡು ಬಂದಿರುವುದರಿಂದ ನಿಯಮಾನುಸಾರ ಸದರಿ ನ್ಯಾಯಬೆಲೆ ಅಂಗಡಿ ಪ್ರಾಧಿಕಾರವನ್ನು ಅಮಾನತ್ತುಪಡಿಸಿದ್ದಾರೆ.
ನ್ಯಾಯಬೆಲೆ ಲೈಸೆನ್ಸ್ ಅಮಾನತಾಗಿರುವ ಹಿನ್ನಲೆಯಲ್ಲಿ ಪಡಿತರ ಚೀಟಿದಾರರ ಹಿತದೃಷ್ಟಿಯಿಂದ ಸಮೀಪದ ನ್ಯಾಯಬೆಲೆ ಅಂಗಡಿಗೆ ಕೂಡಲೇ ಪರ್ಯಾಯ ವ್ಯವಸ್ಥೆ ಮಾಡಿ ವರದಿ ಸಲ್ಲಿಸಲು ತಹಶೀಲ್ದಾರ್, ಹೊಸನಗರ ತಾಲ್ಲೂಕು ಇವರಿಗೆ ಸೂಚಿಸಿದೆ.