ನಗರ ವಲಯ ಅರಣ್ಯ ಇಲಾಖೆಯಿಂದ ಭರ್ಜರಿ ಕಾರ್ಯಾಚರಣೆ:
ಶ್ರೀಗಂಧದ ತುಂಡುಗಳ ಸಹಿತ ನಾಲ್ವರು ಆರೋಪಿಗಳ ಬಂಧನ.
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಗರ ವಲಯ ವ್ಯಾಪ್ತಿಯ ಹುಂಚ ಹೋಬಳಿ ತೊಗರೆ ಗ್ರಾಮದ ಸರ್ವೆ ನಂಬರ್ 97ರ ಅರಣ್ಯ ಪ್ರದೇಶದಲ್ಲಿ ಬೆಲೆಬಾಳುವ ಶ್ರೀಗಂಧದ ಮರಗಳನ್ನು ಕಡಿತಲೆ ಮಾಡಿ ಸಾಗಾಣಿಕೆಗೆ ಯತ್ನಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಮಾಲು ಸಮೇತ ಬಂಧಿಸಿ,ಕೃತ್ಯಕ್ಕೆ ಬಳಸಿದ್ದ ಒಂದು ಬೈಕ್ ವಶಪಡಿಸಿಕೊಂಡಿದ್ದಾರೆ.
ಆರೋಪಿಗಳಾದ ನಿವಣೆ ವಾಸಿ ಪರಮೇಶ್ವರಪ್ಪ, ಮಾಣಿ ಗ್ರಾಮದ ಎಂ ಕೆ ಹರೀಶ, ನಾಗರ ಕೊಡುಗೆ ವಾಸಿಗಳಾದ ಚಿದಾನಂದ ಮತ್ತು ಅರುಣ್ ಕುಮಾರ್ ಎಂಬುವರನ್ನು ಬಂಧಿಸಿದ್ದಾರೆ.
ಕರ್ನಾಟಕ ಅರಣ್ಯ ಕಾಯ್ದೆ 1963ರ ಕಲಂ 24 (ಇ), 62, 84, 86, 87,71(ಎ) ಮತ್ತು ಕರ್ನಾಟಕ ಅರಣ್ಯ ನಿಯಮ 144, 165 ರ ಉಲ್ಲಂಘನೆ ಆಗಿರುವುದರಿಂದ ಆರೋಪಿಗಳನ್ನು ದಸ್ತಗಿರಿ ಮಾಡಿ ಪ್ರಕರಣ ದಾಖಲಿಸಲಾಗಿದೆ.
ಈ ದಾಳಿಯಲ್ಲಿ ಅಂದಾಜು ರೂ.30,000 ಮೌಲ್ಯದ 2 ಕೆ.ಜಿ ಪರಿವರ್ತಿತ ಗಂಧ ಹಾಗೂ 21.690 ತಿಪ್ಪೆ ಸಹಿತ ನಾಲ್ಕು ಶ್ರೀಗಂಧದ ತುಂಡುಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ ಒಂದು ಬಜಾಜ್ ಸಿಟಿ 100 ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ಈ ಕಾರ್ಯಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಸಂಜಯ್ ರವರ ಮಾರ್ಗದರ್ಶನದಲ್ಲಿ ಡಿ ಆರ್ ಎಫ್ ಓ ನರೇಂದ್ರ,ಪ್ರವೀಣ್, ಅಮೃತ್ ಸುಂಕೋಡ್, ಸತೀಶ್, ಯುವರಾಜ್, ಹಾಲೇಶ್ ಹಾಗೂ ಸಿಬ್ಬಂದಿಗಳಿದ್ದರು.