ನಿವೇಶನ ಖರೀದಿಸುವಾಗ ಇರಲಿ ಎಚ್ಚರ ! ನಕಲಿ ದಾಖಲೆ ಸೃಷ್ಟಿಸಿ ಮೋಸಗೈಯುವ ದಂಧೆಕೋರರ ಬಗ್ಗೆ ಹುಷಾರ್..
ಶಿವಮೊಗ್ಗ: ಕನಸಿನ ಮನೆ ನಿರ್ಮಿಸಬೇಕೆಂಬ ಮಹತ್ವಾಕಾಂಕ್ಷೆಯಿಂದ ತರಾತುರಿಯಲ್ಲಿ ಸೈಟ್ ಖರೀದಿಸಿ, ಕೊನೆಗೆ ಅವೆಲ್ಲವೂ ನಕಲಿ ದಾಖಲೆಗಳೆಂದು ತಿಳಿದು ಮೋಸ ಹೋಗುತ್ತಿರುವ ಹಲವು ಘಟನೆಗಳು ಜಿಲ್ಲೆಯಲ್ಲಿ ನಡೆಯುತ್ತಿವೆ.
ನಿವೇಶನ ಖರೀದಿಯಲ್ಲಿ ನಕಲಿ ದಾಖಲೆಗಳ ಹಾವಳಿ ಹೆಚ್ಚಾಗಿದೆ. ಕಡಿಮೆ ದರದಲ್ಲಿ ನಗರದ ಹೃದಯ ಭಾಗದಲ್ಲಿ ನಿವೇಶನ ಸಿಗುತ್ತದೆಂಬ ಆಸೆಯಿಂದ ಜನರು ಯಾರದೋ ಬಳಿ ನಿವೇಶನ ಖರೀದಿಸಿ ಪೇಚಿಗೆ ಬೀಳುತ್ತಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ 2021ರಿಂದ 2023ರ ವರೆಗೆ ನಿವೇಶನ ಖರೀದಿಸಿ ಮೋಸ ಹೋದ ಒಟ್ಟು ಎಂಟು ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ ಬಹುಪಾಲು ನಕಲಿ ದಾಖಲೆ ಸೃಷ್ಟಿ, ಹಣ ಪಡೆದು ನಿವೇಶನ ನೀಡದೇ ಮೋಸ ಮಾಡಿರುವ ಪ್ರಕರಣಗಳೇ ಹೆಚ್ಚು.
ದಾಖಲೆಗಳು ಸರಿ ಇಲ್ಲದಿದ್ದರೂ ಬ್ಯಾಂಕ್ ಸಾಲ ಮತ್ತು ಲೀಗಲ್ ಓಪಿನಿಯನ್ ಕೂಡ ಸಿಗುತ್ತಿದ್ದು, ಇದರಿಂದ ಬಡವರು ಮೋಸ ಹೋಗುತ್ತಿದ್ದಾರೆ. ಇದು ಕೆಲವು ಪ್ರಕರಣಗಳಲ್ಲಿ ರುಜುವಾತು ಸಹ ಆಗಿದೆ.
ಕಡಿಮೆ ದರದಲ್ಲಿ ನಗರದ ಹೃದಯ ಭಾಗದಲ್ಲಿ ನಿವೇಶನ ಸಿಗುತ್ತದೆಂಬ ಆಸೆಯಿಂದ ಜನರು ಯಾರದೋ ಬಳಿ ನಿವೇಶನ ಖರೀದಿಸಿ ಪೇಚಿಗೆ ಬೀಳುತ್ತಿದ್ದಾರೆ. ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲೇ ಇಂತಹ ದಂಧೆ ಎಗ್ಗಿಲ್ಲದೇ ನಡೆಯುತ್ತಿದ್ದು, ಜನರು ಜಾಗರೂಕತೆ ವಹಿಸಬೇಕಿದೆ. ಇಲ್ಲದಿದ್ದರೆ, ಜೀವನಪರ್ಯಂತ ದುಡಿದ ಹಣ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತಾಗುವುದು ನಿಶ್ಚಯ.
ಶಿವಮೊಗ್ಗ ಜಿಲ್ಲೆಯಲ್ಲಿ 2021ರಿಂದ 2023ರ ವರೆಗೆ ನಿವೇಶನ ಖರೀದಿಸಿ ಮೋಸ ಹೋದ ಒಟ್ಟು ಎಂಟು ಪ್ರಕರಣಗಳು ದಾಖಲಾಗಿವೆ. ಅದರಲ್ಲಿ ಬಹುಪಾಲು ನಕಲಿ ದಾಖಲೆ ಸೃಷ್ಟಿ, ಹಣ ಪಡೆದು ನಿವೇಶನ ನೀಡದೇ ಮೋಸ ಮಾಡಿರುವ ಪ್ರಕರಣಗಳೇ ಇವೆ. ಸಾರ್ವಜನಿಕರಲ್ಲಿ ಆಸ್ತಿ, ನಿವೇಶನ ಖರೀದಿ ಬಗ್ಗೆ ಮಾಹಿತಿ ಕೊರತೆಯಿಂದಾಗಿ ಹಲವರು ಮೋಸ ಹೋಗುತ್ತಿದ್ದಾರೆ. ಹೀಗಾಗಿ, ಕೊಳ್ಳುವವರು ಜಾಗರೂಕರಾಗಿರಬೇಕು.
ಮಾರಾಟಗಾರರ ಮೋಸದ ಜಾಲವು ಕೊಳ್ಳುವವರನ್ನು ನಿರಂತರ ಮೋಸ ಮಾಡುತ್ತಲೇ ಬರುತ್ತಿದ್ದು, ಗ್ರಾಹಕರು ಎಚ್ಚರ ವಹಿಸಬೇಕು. ಇದರೊಂದಿಗೆ, ಉಪ ನೋಂದಣಾಧಿಕಾರಿ, ಸ್ಥಳೀಯ ಸಂಸ್ಥೆಗಳು ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕಿದೆ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.
ಟೈಟಲ್ ಡೀಡ್ಸ್
ಕೊಳ್ಳುವವರು ಮೊಟ್ಟಮೊದಲು ಖರೀದಿ ಉದ್ದೇಶದ ಜಮೀನಿನ ಹಕ್ಕುಪತ್ರ (ಟೈಟಲ್ ಡೀಡ್) ಅನ್ನು ಗಮನಿಸಲೇಬೇಕು. ಅದರಲ್ಲಿ ಪ್ರಮುಖವಾಗಿ ಖರೀದಿಸಲು ಉದ್ದೇಶಿಸಿರುವ ಜಮೀನು ಮಾರಾಟಗಾರನ ಹೆಸರಲ್ಲಿ ನೋಂದಣಿಯಾಗಿದೆಯೇ? ಆತನಿಗೆ ಮಾರಾಟದ ಹಕ್ಕು ಇದೆಯೇ? ಇತ್ಯಾದಿಗಳನ್ನು ಕಡ್ಡಾಯವಾಗಿ ಪರಿಶೀಲಿಸಲೇಬೇಕು. ಅದಕ್ಕೆ ಸುಲಭ ಮಾರ್ಗ ವಕೀಲರಿಂದ ಕಾನೂನು ಸಲಹೆ ಪಡೆಯುವುದು. ಖರೀದಿಸುವ ಆಸ್ತಿ ಸಂಬಂಧಿತ ಮೂಲ ಒಪ್ಪಂದವನ್ನು ಪಡೆದುಕೊಳ್ಳಬೇಕು. ಅದಕ್ಕೆ ಸಂಬಂಧಿಸಿ ಈ ಹಿಂದಿನ ದಸ್ತಾವೇಜುಗಳನ್ನೂ ಕೇಳಬಹುದು. ಕೆಲವು ಬಾರಿ ಒಬ್ಬರಿಗಿಂತ ಹೆಚ್ಚಿನವರು ಆಸ್ತಿ ಒಡೆತನ ಹೊಂದಿರುತ್ತಾರೆ. ಹಾಗಿದ್ದಲ್ಲಿ ಆಸ್ತಿ ನೋಂದಣಿಗೆ ಮುನ್ನ ಅವರಿಂದ ರಿಲೀಸ್ ಪ್ರಮಾಣಪತ್ರ ಪಡೆದುಕೊಳ್ಳುವುದು ಅತ್ಯಗತ್ಯ.
ಕ್ರಯ ಪತ್ರದ ಬಗ್ಗೆಯೂ ಇರಲಿ ಎಚ್ಚರ
ಕನ್‌ವೇಯನ್ಸ್ ಅಥವಾ ಸೇಲ್ ಡೀಡ್ (ಕ್ರಯ ಪತ್ರ) ಆಸ್ತಿ/ ನಿವೇಶನ ಮಾರಾಟದ ದಾಖಲೆಯ ಪತ್ರವಾಗಿರುತ್ತದೆ. ಇಲ್ಲಿ’ಕನ್‌ವೇಯನ್ಸ್’ ಎಂದರೆ ಆಸ್ತಿ ಒಡೆತನವನ್ನು ಮಾರಾಟಗಾರ ಖರೀದಿದಾರನಿಗೆ ಹಸ್ತಾಂತರಿಸುತ್ತಿದ್ದಾರೆ ಎಂದರ್ಥ. ಈ ಕ್ರಯಪತ್ರದ ಮೂಲಕ ಆ ಆಸ್ತಿಯು ಯಾವ ಸೊಸೈಟಿ, ಬಿಲ್ಡರ್ ಅಥವಾ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಂಬಂಧಿಸಿದೆ ಎನ್ನುವುದನ್ನು ತಿಳಿದುಕೊಳ್ಳಲು ಅನುಕೂಲವಾಗುತ್ತದೆ.
ತೆರಿಗೆ ಪಾವತಿ ರಸೀದಿ
ಸ್ಥಳೀಯ ಸಂಸ್ಥೆಗಳಿಗೆ (ಮಹಾನಗರ ಪಾಲಿಕೆ) ಆಸ್ತಿ ತೆರಿಗೆ ಪಾವತಿ ಮಾಡಿರುವ ದೃಢೀಕೃತ ರಸೀದಿಗಳನ್ನು ಸಂಗ್ರಹಿಸಬೇಕಾಗುತ್ತದೆ. ಇದರೊಂದಿಗೆ ಸಮಯಕ್ಕೆ ಸರಿಯಾಗಿ ತೆರಿಗೆ ಪಾವತಿಸಲಾಗಿದೆಯೇ? ಬಾಕಿ ಇದೆಯೇ? ಈ ವಿಚಾರ ಅರಿತುಕೊಳ್ಳಬೇಕು.
ಋುಣಭಾರ ಪ್ರಮಾಣಪತ್ರ
ಗ್ರಾಹಕರು ಆಸ್ತಿ, ನಿವೇಶನ, ಮನೆಯನ್ನು ಮಾರಾಟಗಾರರಿಂದ ಖರೀದಿಸಬೇಕಾದರೆ, ಅದಕ್ಕೆ ಸಂಬಂಧಿಸಿದ ಯಾವುದೇ ಶುಲ್ಕಗಳು ಬಾಕಿ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕಾಗುತ್ತದೆ. ಈ ಹಿಂದೆ ಆಸ್ತಿ ನೋಂದಣಿ ಆಗಿದ್ದು ಯಾವುದೇ ಶುಲ್ಕ ಬಾಕಿ ಇಲ್ಲಎನ್ನುವುದನ್ನು ಉಪ ನೋಂದಣಾಧಿಕಾರಿಯಿಂದ ‘ಎನ್‌ಕಮ್‌ಬ್ರಾನ್ಸ್ ಸರ್ಟಿಫಿಕೇಟ್’ ಪಡೆಯಬೇಕು. ಗ್ರಾಹಕರು 13 ವರ್ಷಗಳ ಹಿಂದಿನ ಋುಣಭಾರ ಪ್ರಮಾಣಪತ್ರ ಕೇಳಬಹುದಾಗಿದೆ. ಅಥವಾ 30 ವರ್ಷಗಳ ಎನ್‌ಕಮ್‌ಬ್ರಾನ್ಸ್ ಸರ್ಟಿಫಿಕೇಟ್‌ಗೆ ಬೇಡಿಕೆ ಇಡಬಹುದು.
ಕೊಳ್ಳುವವರೇ ಎಚ್ಚರ
* ಆಸ್ತಿ, ನಿವೇಶನ, ವಾಣಿಜ್ಯ ಸಂಕೀರ್ಣ, ಮನೆ ಖರೀದಿಸಬೇಕಾದರೆ ದಾಖಲೆಗಳನ್ನು ಸಮಗ್ರವಾಗಿ ಪರಿಶೀಲಿಸಬೇಕು. ಇದು ಸಂಭಾವ್ಯ ಕಾನೂನು ತೊಡಕುಗಳನ್ನು ನಿವಾರಿಸಲು ಸಹಕಾರಿಯಾಗುತ್ತದೆ.
* ಖರೀದಿಸಲು ಉದ್ದೇಶಿಸಿದ ಜಮೀನಿನ ಮೇಲೆ ಸಾಲ ಪಡೆದಿದ್ದಾರೆಯೇ ಎನ್ನುವುದನ್ನು ಅರಿತುಕೊಳ್ಳುವುದು ಅನಿವಾರ್ಯ. ಒಂದುವೇಳೆ, ಸಾಲ ಪಡೆದಿದ್ದರೂ ಅದು ತೀರುವಳಿ ಆಗಿದೆಯೇ ಅರಿತುಕೊಂಡು ಅದಕ್ಕೆ ಬ್ಯಾಂಕಿನಿಂದ ರಿಲೀಸ್ ಸರ್ಟಿಫಿಕೇಟ್ ಪಡೆಯಬೇಕು.
* ಜಮೀನನ್ನು ನೋಂದಾಯಿತ ಸರ್ವೇಯರ್‌ಗಳಿಂದ ಅಳತೆ ಮಾಡಿಸಬೇಕು. ಗಡಿಯಂಚು, ನಿವೇಶನ ಅಳತೆಯನ್ನು ಒಮ್ಮೆ ಪರಿಶೀಲಿಸಬೇಕು. ಸರ್ವೆ ಇಲಾಖೆಯಿಂದ ಸರ್ವೆ ನಕ್ಷೆ ಪಡೆಯಬೇಕು. ಆ ಮೂಲಕ ನಿಖರತೆ ಅರಿಯಬೇಕು.
* ಅನಿವಾಸಿ ಭಾರತೀಯರು ಸಂಬಂಧಪಟ್ಟವರಿಗೆ ಪವರ್ ಆಫ್ ಅಟಾರ್ನಿ ನೀಡುವ ಮೂಲಕ ಮೂರನೇ ವ್ಯಕ್ತಿಗೆ ಆಸ್ತಿ ಮಾರಾಟ ಮಾಡಬಹುದು. ಇಂತಹ ಸಂದರ್ಭದಲ್ಲಿಪವರ್ ಆಫ್ ಅಟಾರ್ನಿಯು ಭಾರತೀಯ ರಾಯಭಾರ ಕಚೇರಿಯಿಂದ ಸಹಿ ಮತ್ತು ಮುದ್ರೆಯನ್ನು ಹೊಂದಿರಬೇಕು.
* ಮುದ್ರಾಂಕ ಶುಲ್ಕ ಪಾವತಿ ಬಳಿಕವೇ ಭೂ ದಾಖಲೆಗಳು ಅಧಿಕೃತ ಮಾನ್ಯತೆ ಪಡೆಯುತ್ತವೆ.
* ರಿಜಿಸ್ಟ್ರಾರ್ ಕಚೇರಿಗಳಲ್ಲಿಮಾಡಲಾಗುವ ನೋಂದಣಿ ಆಸ್ತಿ ಹಕ್ಕಿನ ದಾಖಲೆ ಆಗಿರುತ್ತದೆ. ನೋಂದಣಿಗೆ ಮುನ್ನ ಸ್ಟ್ಯಾಂಪ್ ಪೇಪರ್ ಮೇಲೆ ಕರಡುಪ್ರತಿ ಸಿದ್ಧಪಡಿಸಬೇಕು. ನಾಲ್ಕು ತಿಂಗಳೊಳಗೆ ನೋಂದಣಿಯಾಗುತ್ತದೆ.
* ಸ್ಥಿರಾಸ್ತಿ ಖರೀದಿದಾರನ ಹೆಸರು ಗ್ರಾಮ ಪಂಚಾಯಿತಿ ಕಚೇರಿ ಅಥವಾ ಸ್ಥಳೀಯ ಸಂಸ್ಥೆಗಳಲ್ಲಿನಮೂದಾದರೆ ಮಾತ್ರ ನೋಂದಣಿ ಪ್ರಕ್ರಿಯೆ ಪೂರ್ಣಗೊಳ್ಳಲು ಸಾಧ್ಯ.
* ಒಂದೇ ಬಗೆಯ ಹೆಸರುಗಳಿರುವ ನಿವೇಶನಗಳ ವಿಚಾರದಲ್ಲೂಮೋಸಗಳು ನಡೆಯುತ್ತಿವೆ. ಇದರ ಬಗ್ಗೆಯೂ ಗ್ರಾಹಕರು ನಿಗಾ ವಹಿಸಬೇಕು.
* ಗ್ರಾಪಂ ವ್ಯಾಪ್ತಿಯ ಲೇಔಟ್‌ಗಳು ನಗರ ಸ್ಥಳೀಯ ಸಂಸ್ಥೆಗಳಿಗೆ ವರ್ಗಾವಣೆ ಆಗಬೇಕಾದರೆ, ಜಿಲ್ಲಾಧಿಕಾರಿಗಳಿಂದ ಭೂಪರಿವರ್ತನೆಗೊಂಡಿರಬೇಕು. ಆ ಕುರಿತಾದ ದಾಖಲೆಗಳನ್ನು ಸಹ ಪರಿಶೀಲಿಸಬೇಕು.
ನಿವೇಶನ, ಆಸ್ತಿ, ಮನೆಗಳನ್ನು ಖರೀದಿಸಬೇಕಾದರೆ ಕೊಳ್ಳುವವರು ಜಾಗರೂಕತೆ ವಹಿಸಬೇಕು. ಸಾಧ್ಯವಾದರೆ, 2-3 ಕಡೆ ಲೀಗಲ್ ಓಪಿನಿಯನ್ ಪಡೆಯುವುದು ಉತ್ತಮ. ಭೂ ಒತ್ತುವರಿ ಮಾಡಿದ್ದರೆ ಪೊಲೀಸ್ ಇಲಾಖೆ ಗಮನಕ್ಕೆ ತನ್ನಿ. ಅಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಕಡಿಮೆ ಬೆಲೆಯಲ್ಲಿ ನಿವೇಶನ, ಮನೆಗಳು ಸಿಗುತ್ತದೆಂದು ತರಾತುರಿ ಮಾಡಬಾರದು ಎಂಬುವುದೆ ನಮ್ಮ ಕಳಕಳಿ…..