ಜಿಂಕೆ ಚರ್ಮ ,ಕೊಂಬು ಮಾರಾಟಕ್ಕೆ ಯತ್ನ – ಸಾಗರ ಮೂಲದ ವ್ಯಕ್ತಿ ಬಂಧನ
ಜಿಂಕೆ ಚರ್ಮ, ಕೊಂಬುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಶಿವಮೊಗ್ಗ ಮೂಲದ ಆರೋಪಿಯನ್ನು ಬೆಂಗಳೂರು ಮಹದೇವಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಚಂದ್ರಶೇಖರಪ್ಪ ಗೌಡ (43) ಎಂಬಾತನನ್ನು ಬಂಧಿಸಲಾಗಿದೆ.
ಆರೋಪಿಯಿಂದ ಒಂದು ಜಿಂಕೆ ಚರ್ಮ, 12 ಜಿಂಕೆ ಕೊಂಬುಗಳು ಹಾಗೂ 2 ಕಾಡೆಮ್ಮೆ ಕೊಂಬುಗಳನ್ನು ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಮಹದೇವಪುರ ಠಾಣಾ ವ್ಯಾಪ್ತಿಯಲ್ಲಿ ಅಪರಿಚಿತ ವ್ಯಕ್ತಿ ಜಿಂಕೆ ಚರ್ಮ ಮಾರಾಟಕ್ಕೆ ಯತ್ನಿಸುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.
ಆರೋಪಿ ಚಂದ್ರಶೇಖರಪ್ಪ ಗೌಡ ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಜಿಂಕೆಚರ್ಮ, ಕೊಂಬುಗಳ ಮಾರಾಟಕ್ಕೆ ಮುಂದಾಗಿದ್ದ. ಈತನಿಗೆ ಯಾರು ಇವುಗಳನ್ನು ನೀಡಿದ್ದಾರೆ? ಎಲ್ಲಿಂದ ಇವುಗಳನ್ನು ತಂದಿದ್ದ? ಯಾರಿಗೆ ಮಾರಾಟ ಮಾಡಲು ಬಂದಿದ್ದ ಎಂಬುದು ಸೇರಿದಂತೆ ಹೆಚ್ಚಿನ ಮಾಹಿತಿಗಾಗಿ ಆರೋಪಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.