Sagara | ನಿವೃತ್ತ ಮೆಸ್ಕಾಂ ಇಂಜಿನಿಯರ್ ಮನೆಗೆ ನುಗ್ಗಿ 9ಲಕ್ಷ ರೂ. ಮೌಲ್ಯದ ನಗನಗದು ದೋಚಿದ ಕಳ್ಳರು
ಸಾಗರ : ಪಟ್ಟಣದ ವಿಜಯನಗರದ ಬಾಪಟ್ ಕಲ್ಯಾಣ ಮಂಟಪ ಹಿಂಭಾಗದ ರಸ್ತೆಯ ನಿವೃತ್ತ ಮೆಸ್ಕಾಂ ಇಂಜಿನಿಯರ್ ನಾಗರಾಜ್ ಎಂಬುವವರ ಮನೆಗೆ ನುಗ್ಗಿರುವ ಕಳ್ಳರು ಸುಮಾರು 9 ಲಕ್ಷ ರೂ. ಮೌಲ್ಯದ ನಗನಾಣ್ಯ ದೋಚಿರುವ ಘಟನೆಗೆ ಸಂಬಂಧಪಟ್ಟಂತೆ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿವೃತ್ತ ಮೆಸ್ಕಾಂ ಇಂಜಿನೀಯರ್ ನಾಗರಾಜ್ ಮತ್ತವರ ಕುಟುಂಬ ಕಾರ್ಯಕ್ರಮ ನಿಮಿತ್ತ ನ. 24ರಂದು ಸಿದ್ದಾಪುರ ಸಮೀಪದ ಕೊಂಟನಾಳ ಗ್ರಾಮಕ್ಕೆ ಹೋಗಿದ್ದರು. 27ರಂದು ಬೆಳಿಗ್ಗೆ ನಾಗರಾಜ್ ಮತ್ತವರ ಕುಟುಂಬ ಮನೆಗೆ ಬಂದು ನೋಡಿದಾಗ ಬಾಗಿಲು ಒಡೆದು ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.
ಮನೆಯ ಮೊದಲನೇ ಬೆಡ್‌ರೂಮ್‌ನಲ್ಲಿದ್ದ ಎರಡು ಗಾಡ್ರೇಜ್ ಬೀರುವಿನ ಬಾಗಿಲು ಒಡೆದು 25 ಸಾವಿರ ರೂ. ನಗದು ಸೇರಿದಂತೆ ಬೆಳ್ಳಿ ಮತ್ತು ಹಿತ್ತಾಳೆ ವಸ್ತುಗಳು, ಎರಡನೇ ಬೆಡ್‌ರೂಮ್‌ನಲ್ಲಿದ್ದ ಗಾಡ್ರೇಜ್ ಬೀಗ ಒಡೆದು ಬಂಗಾರದ ಆಭರಣಗಳನ್ನು ದೋಚಲಾಗಿದೆ.
ಕಳ್ಳರು 210 ಗ್ರಾಂ ಬಂಗಾರ, 390 ಗ್ರಾಂ ಬೆಳ್ಳಿ, 1450 ಗ್ರಾಂ ಹಿತ್ತಾಳೆ ಪಾತ್ರೆಗಳು, 36 ಸಾವಿರ ರೂ. ಬೆಲೆಯ ರೇಷ್ಮೆ ಸೀರೆಗಳು, 25 ಸಾವಿರ ರೂ. ನಗದು ಸೇರಿದಂತೆ 9,18,575 ರೂ. ನಗನಾಣ್ಯ ದೋಚಿ ಕಳ್ಳರು ಪರಾರಿಯಾಗಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೇಟೆ ಠಾಣೆ ಪೊಲೀಸರು ಕಳ್ಳರ ಪತ್ತೆಗಾಗಿ ಬಲೆ ಬೀಸಿದ್ದಾರೆ.