ವಿಸಿ ನಾಲೆಗೆ ಉರುಳಿದ ಕಾರು – ಐವರು ಜಲಸಮಾಧಿ|accident

ವಿಸಿ ನಾಲೆಗೆ ಉರುಳಿದ ಕಾರು – ಐವರು ಜಲಸಮಾಧಿ

ಮಂಡ್ಯ ತಾಲ್ಲೂಕಿನ ಪಾಂಡವಪುರದಲ್ಲಿರುವ ವಿಸಿ ನಾಲೆಗೆ ಬಿದ್ದ ಕಾರೊಂದರಲ್ಲಿ ಶಿವಮೊಗ್ಗದ ಐವರು ಸಾವನ್ನಪ್ಪಿದ್ದಾರೆ.

ದುರಂತದಲ್ಲಿ ಮೃತಪಟ್ಟವರನ್ನು ಭದ್ರಾವತಿ ಮೂಲದ ಚಂದ್ರಪ್ಪ(61), ಕೃಷ್ಣಪ್ಪ (60), ಧನಂಜಯ್ಯ (55), ಬಾಬು ಮತ್ತು ಜಯಣ್ಣ ಎಂದು ಗುರುತಿಸಲಾಗಿದೆ. ಮೈಸೂರಿನಿಂದ ಭದ್ರಾವತಿಗೆ ವಾಪಸ್ ಹೋಗುವಾಗ ಘಟನೆ ನಡೆದಿದೆ‌. ಮೃತರು ಗುಂಗರಹಳ್ಳಿ, ನೊಣವಿನಕೆರೆ, ತಿಪಟೂರು ಮೂಲದರಾಗಿದ್ದು, ಭದ್ರಾವತಿಯಲ್ಲಿ ವಾಸವಾಗಿದ್ದರು ಎಂದು ತಿಳಿದುಬಂದಿದೆ.

ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಚಂದ್ರಪ್ಪಗೆ ಸೇರಿದ (ಕೆಎ -14, ಎ 2457) ಬಿಳಿ ಬಣ್ಣದ ಕಾರು ವೇಗವಾಗಿ ಚಲಿಸುತ್ತಿದ್ದ ವೇಳೆ ತಿರುವಿನಲ್ಲಿ ತಡೆಗೋಡೆಗೆ ಡಿಕ್ಕಿ ಹೊಡೆದು ನಾಲೆಗೆ ಬಿದ್ದಿದೆ. ನಾಲೆಯಲ್ಲಿ ನೀರು ಹೆಚ್ಚಿನ ಪ್ರಮಾಣದಲ್ಲಿದ್ದರಿಂದ ಕಾರಿನಲ್ಲಿದ್ದವರು ಪ್ರಾಣಪಾಯದಿಂದ ಪಾರಾಗಲು ಸಾಧ್ಯವಾಗಿಲ್ಲ. ಕೆ ಆರ್ ಎಸ್ ಜಲಾಶಯದಿಂದ ನಾಲೆಗಳಿಗೆ ನಿನ್ನೆಯಿಂದ ನೀರು ಬಿಡುಗಡೆ ಮಾಡಿದ್ದರಿಂದ ನಾಲೆಯಲ್ಲಿ ಹೆಚ್ಚಿನ ಪ್ರಮಾಣದ ನೀರು ಹರಿಯುತ್ತಿತ್ತು.

ಘಟನೆ ವಿವರ: 

ಐದು ಮಂದಿ ಪುರುಷರು ಪ್ರಯಾಣಿಸುತ್ತಿದ್ದ ಕಾರು ಸಾಯಂಕಾಲ 4.45ರ ಸುಮಾರಿಗೆ ತಡೆಗೋಡೆಗೆ ಡಿಕ್ಕಿ ಹೊಡೆದು ವಿಶ್ವೇಶ್ವರಯ್ಯ ನಾಲೆಯ ನೀರಿನೊಳಗೆ ಬಿದ್ದಿದೆ. ನಾಲೆಯಲ್ಲಿ ಕಾರು ಮುಳುಗುತ್ತಿದ್ದ ದೃಶ್ಯವನ್ನು ಸ್ಥಳೀಯರು ವೀಕ್ಷಿಸಿ ಜೋರಾಗಿ ಕಿರುಚಿ, ರಕ್ಷಿಸಲು ಬರುವಷ್ಟರಲ್ಲಿ ಕಾರು ನೀರಿನಲ್ಲಿ ಮುಳುಗಿದೆ. ವಿಷಯ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಭೇಟಿ ಅಗ್ನಿಶಾಮಕ ದಳ ಹಾಗೂ ನುರಿತ ಈಜುಗಾರರ ಸಹಾಯದಿಂದ ನಾಲೆ ನೀರಿನೊಳಗೆ ಮುಳುಗಿದ್ದವರನ್ನು ಮತ್ತು ಕಾರು ಮೇಲೆತ್ತಲು ಕಾರ್ಯಾಚರಣೆ ನಡೆಸಿದರು. ಕ್ರೇನ್ ಮೂಲಕ 8.15ರ ಸುಮಾರಿಗೆ ಕಾರನ್ನು ಮೇಲಕ್ಕೆ ಎತ್ತಲಾಯಿತು. ಆಗ ಐವರ ಶವಗಳು ಕಾರಿನಲ್ಲಿರುವುದು ಕಂಡುಬಂದಿದೆ.


ನಾಲೆಯ ತಿರುವಿನಲ್ಲಿ ಎದುರುಗಡೆಯಿಂದ ಬಂದ ಬೈಕ್​ಗೆ ಡಿಕ್ಕಿ ಹೊಡೆಯಲು ತಪ್ಪಿಸುವ ಪ್ರಯತ್ನ ಮಾಡಿದ್ದರಿಂದ ಕಾರು ನಾಲೆಯೊಳಗೆ ಉರುಳಿ ಬಿದ್ದಿದೆ ಎಂದು ಹೇಳಲಾಗಿದೆ. ಜಿಲ್ಲಾಧಿಕಾರಿ ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಯತೀಶ್, ಉಪವಿಭಾಗಾಧಿಕಾರಿ ನಂದೀಶ್, ತಹಶೀಲ್ದಾರ್ ಸಂತೋಷ್ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು.
ವಿಶ್ವೇಶ್ವರಯ್ಯ ನಾಲೆ ಬನಘಟ್ಟ ಸೇತುವೆ ತುಂಬಾ ಹಳೇಯದಾಗಿದ್ದು, ತಕ್ಷಣ ತಿರುವು ಇರುವುದರಿಂದ ಅನೇಕ ಬಾರಿ ಅಪಘಾತ ಸಂಭವಿಸಿದೆ. ಕಳೆದ ಎರಡು ದಿನದ ಹಿಂದೆ ಲಾರಿ ಉರುಳಿ ಬಿದ್ದಿತ್ತು. ನಂತರ ಕಾರು ಉರುಳಿ ಬಿದ್ದಿದೆ. ಈ ಸೇತುವೆ ಬಳಿ ನಾಮಫಲಕ ಹಾಕಿಲ್ಲ, ತಕ್ಷಣವೇ ಸಂಬಂಧಪಟ್ಟವರು ಇತ್ತ ಗಮನಹರಿಸಬೇಕು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *