ಭದ್ರಾವತಿ : ಚಿಕ್ಕಮ್ಮನ ಕೊರಳಿಗೆ ಟವಲ್ ಬಿಗಿದು ಮಾಂಗಲ್ಯ ಸರ ಕದ್ದಿದ್ದ ಆರೋಪಿಯನ್ನ ಕೇವಲ 24ಗಂಟೆಯೊಳಗೆ ಬಂಧಿಸುವಲ್ಲಿ ನ್ಯೂಟೌನ್ ಪೊಲೀಸರುಯಶಸ್ವಿಯಾಗಿದ್ದಾರೆ.
ಆತನಿಂದ 4,50,000/- ರು. ಮೌಲ್ಯದ 88 ಗ್ರಾಂ ತೂಕದ ಬಂಗಾರದ ಮಾಂಗಲ್ಯ ಸರವನ್ನು ವಶಪಡಿಸಿಕೊಳ್ಳಲಾಗಿದೆ.
ಭದ್ರಾವತಿ ನ್ಯೂಟೌನ್ ವ್ಯಾಪ್ತಿಯ, ಕಡದಕಟ್ಟೆಯಲ್ಲಿ, ಕಳೆದ 18 ವರ್ಷಗಳಿಂದ, ವಿಧವೆಯೊಬ್ಬರು, ತಮ್ಮ ಮಕ್ಕಳೊಂದಿಗೆ ವಾಸವಾಗಿದ್ದಾರೆ. ದಿನಾಂಕ 6-11-2023ರಂದು ಬೆಳಿಗ್ಗೆ 10-30ಗಂಟೆಯಲ್ಲಿ, ಈಕೆಯ ಮಕ್ಕಳು ಜಮೀನಿಗೆ ಹೋಗಿದ್ದಾಗ, ಈಕೆಯ ಮೃತ ಗಂಡನ, ಅಣ್ಣನ ಮಗನಾದ ನಾಗರಾಜ ಮನೆಗೆ ಬಂದಿದ್ದಾನೆ. ಹಾಗೆ ಬಂದವನು, ತಿಂಡಿ ತಿನ್ನುತ್ತಿದ್ದ ಮಹಿಳೆಯ ಹಿಂಬದಿಯಲ್ಲಿದ್ದ ಮಂಚದ ಮೇಲೆ ಕುಳಿತುಕೊಂಡು, ಟವಲ್‌ನಿಂದ ಕುತ್ತಿಗೆಗೆ ಬಿಗಿದು, ಮಾಂಗಲ್ಯ ಸರವನ್ನು ಕಿತ್ತುಕೊಂಡಿದ್ದಾನೆ. ಆ ಸಮಯದಲ್ಲಿ, ಬೈಕ್‌ನ ಶಬ್ದ ಕೇಳಿ ಬಂದಿದ್ದರಿಂದ, ಸರದ ಸಮೇತ, ಹಿಂದಿನ ಬಾಗಿಲಿನ ಮೂಲಕ ಓಡಿ ಹೋಗಿದ್ದಾನೆ.
ಈ ಸಂಬಂಧ ಮಹಿಳೆಯು ನ್ಯೂಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.ಆರೋಪಿಯ ಮಾಹಿತಿ ಸಿಕ್ಕ ಪೊಲೀಸರು ಆತನನ್ನ ಟ್ರೇಸ್ ಮಾಡಲು ಆರಂಭಿಸಿದ್ದರು.
ಪರಿಣಾಮ ಪ್ರಕರಣ ದಾಖಲಾದ 24 ಗಂಟೆಯ ಒಳಗೆ ಆರೋಪಿ ನ್ಯೂಟೌನ್ ಪೊಲೀಸ್ ಸ್ಟೇಷನ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಮಳವಳ್ಳಿ ತಾಲ್ಲೂಕಿನ ಕುರುಬನಪುರ ಗ್ರಾಮದಲ್ಲಿ ಆರೋಪಿಯನ್ನ ಬಂಧಿಸಿದ ಪೊಲೀಸರು ಆತನನ್ನ ನ್ಯಾಯಾಂಗಬಂಧನಕ್ಕೆ ಒಪ್ಪಿಸಿದ್ದಾರೆ.
ಶಿವಮೊಗ್ಗ ಜಿಲ್ಲೆ ಎಸ್ಪಿ ಜಿ.ಕೆ. ಮಿಥುನ್‌ಕುಮಾರ್, ಅಡಿಷನಲ್ ಎಸ್ಪಿ ಅನಿಲ್‌ಕುಮಾರ್ ಎಸ್. ಬೂಮರೆಡ್ಡಿ ಮತ್ತು ಭದ್ರಾವತಿ ಉಪವಿಭಾಗದ ಡಿವೈಎಸ್ಪಿ ಕೆ.ಆರ್. ನಾಗರಾಜ್ ರವರುಗಳ ಮಾರ್ಗದರ್ಶನ, ಭದ್ರಾವತಿ ನಗರ ಸರ್ಕಲ್ ಪೊಲೀಸ್ ಇನ್ಸ್‌ಪೆಕ್ಟರ್ ಜೆ. ಶ್ರೀಶೈಲಕುಮಾರ್ ರವರ ಸಾರಥ್ಯದಲ್ಲಿ ನಡೆದ ಕಾರ್ಯಾಚರಣೆಯಲ್ಲಿ, ಸಬ್‌ಇನ್ಸ್‌ಪೆಕ್ಟರ್ ಟಿ. ರಮೇಶ್ ಹಾಗೂ ಸಿಬ್ಬಂದಿಯವರಾದ ನವೀನ್, ಮಲ್ಲಿಕಾರ್ಜುನ, ರಾಕೇಶ್, ಗಿರೀಶ್ ಮತ್ತು ವಿನೋದ್ ಪಾಲ್ಗೊಂಡಿದ್ದರು.