ಅರಸಾಳು ಮಾಲ್ಗುಡಿಯಲ್ಲಿ ಆಟೋ ರಾಜ ಶಂಕರ್ ನಾಗ್ ಹುಟ್ಟುಹಬ್ಬ ಆಚರಣೆ|shankarnag

ಕನ್ನಡ ಚಲನಚಿತ್ರ ರಂಗದ ಪ್ರತಿಭಾವಂತ ನಟ ಹಾಗೂ ನಿರ್ದೇಶಕ ದಿ|| ಶಂಕರ್ ನಾಗ್ ರವರ 66 ನೇ ಹುಟ್ಟುಹಬ್ಬ ಕಾರ್ಯಕ್ರಮವನ್ನು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಅರಸಾಳು ಗ್ರಾಮದ ಮಾಲ್ಗುಡಿ ಡೇಸ್ ಆವರಣದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು.
ಅರಸಾಳು ಮಾಲ್ಗುಡಿ ಡೇಸ್ ರೈಲ್ವೆ ನಿಲ್ದಾಣದ ಆವರಣದಲ್ಲಿ ಶಂಕರ್ ನಾಗ್ ಹುಟ್ಟು ಹಬ್ಬ ಆಚರಣೆ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು,  ಕನ್ನಡಾಭಿಮಾನಿಗಳು ಹಾಗೂ ಶಂಕರ್ ನಾಗ್ ಅಭಿಮಾನಿಗಳು ಶಂಕರ್ ನಾಗ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ನಂತರ ಕೇಕ್ ಕತ್ತರಿಸಿ ಸಂಭ್ರಮಿಸಿದರು.
ಈ ಸಂಧರ್ಭದಲ್ಲಿ ಶಂಕರ್ ನಾಗ್ ಅಭಿಮಾನಿ ಸಂಘದ ಅಧ್ಯಕ್ಷ ಸತೀಶ್ ಹೆಗಡೆ,ಕುಮಧ್ವತಿ ಕನ್ನಡ ಸಂಘದ ಅಧ್ಯಕ್ಷ ಲೋಕೇಶ್ ಪ್ರಮುಖರಾದ ನಾಗೇಂದ್ರ , ಜಯರಾಜ್ ,ಪಿಯೂಸ್ ರೋಡ್ರಿಗಸ್ ದಿನೇಶ್ ,ಅರುಣ್ ಕುಮಾರ್ ,ಸಾಧಿಕ್ ,ಕಗ್ಗಲಿ ಲಿಂಗಪ್ಪ, ಡ್ಯಾನಿ ,ರಾಜೋಜಿರಾವ್ , ನಾಗರಾಜ್ ಟೈಲರ್ ಹಾಗೂ ಇನ್ನಿತರರಿದ್ದರು.


ಮಾಲ್ಗುಡಿ ಡೇಸ್ ಹಾಗೂ ಶಂಕರಣ್ಣ

ಸದಾ ಲವಲವಿಕೆಯ ವ್ಯಕ್ತಿಯಾಗಿದ್ದ ಶಂಕರ್ ನಾಗ್ ನಿರ್ದೇಶಿಸಿ, ನಟಿಸಿದ್ದ ಕಾದಂಬರಿಕಾರ ಆರ್ ಕೆ ನಾರಾಯಣ್ ಅವರ ಸಣ್ಣ ಕಥೆ ಮಾಲ್ಗುಡಿ ಡೇಸ್ ಟಿವಿ ಸೀರಿಯಲ್ ಮರೆಯಲು ಸಾಧ್ಯವಿದೆಯೇ? ಶಂಕರ್ ನಾಗ್ ಅವರು ದಣಿವಿಲ್ಲದೇ ದುಡಿಯುವ ವ್ಯಕ್ತಿಯಾಗಿದ್ದರು. ಯಾವುದೇ ಹಮ್ಮು ಬಿಮ್ಮುಗಳಿಲ್ಲದ ಸ್ನೇಹಜೀವಿಯಾಗಿದ್ದರು. ಜಾಗತೀಕರಣ ಕಾಲಿಟ್ಟ ವೇಳೆಯಲ್ಲಿಯೇ ಶಂಕರ್ ನಾಗ್  ರಂಗಭೂಮಿ ಮತ್ತು ಟೆಲಿವಿಷನ್ ಮಾಧ್ಯಮವನ್ನು ಸಮರ್ಪಕವಾಗಿ ಬಳಸಿಕೊಂಡಿದ್ದರು.  ಅದಕ್ಕೊಂದು ಉತ್ತಮ ಉದಾಹರಣೆ ಮಾಲ್ಗುಡಿ ಡೇಸ್ ಧಾರಾವಾಹಿ!
ಅರಸಾಳಿನ ಮಾಲ್ಗುಡಿ ಡೇಸ್ ಗೂ ಶಂಕರಣ್ಣ ನಿಗೂ ಅವಿನಭಾವ ಸಂಬಂಧ , ಅಂದು ಭಾರತದಲ್ಲಿ ಇದ್ದ ಏಕೈಕ ಟೆಲಿವಿಷನ್ ದೂರದರ್ಶನ ಮಾತ್ರ. ಅಂತೂ ದೂರದರ್ಶನ ಕೊಟ್ಟ ಆಫರ್ ಅನ್ನು ಸ್ವೀಕರಿಸಿದ್ದ ಶಂಕರ್ ನಾಗ್ ಮಾಲ್ಗುಡಿ ಡೇಸ್ ಎಂಬ ಅತ್ಯದ್ಭುತ ಟಿವಿ ಧಾರಾವಾಹಿಯನ್ನು ನಿರ್ದೇಶಿಸಿದ್ದರು. ಈ ಸರಣಿಯಲ್ಲಿ ಡಾ.ವಿಷ್ಣುವರ್ಧನ್, ಅನಂತ್ ನಾಗ್ ಕೂಡಾ ನಟಿಸಿದ್ದರು. ಅಷ್ಟೇ ಅಲ್ಲ ಮಾಸ್ಟರ್ ಮಂಜುನಾಥ್ ಪಾತ್ರವಂತು ಇಂದಿಗೂ ಕಣ್ಣಿಗೆ ಕಟ್ಟುವಂತಿದೆ. ಮಾಲ್ಗುಡಿ ಡೇಸ್ ಚಿತ್ರೀಕರಣ ನಡೆದಿದ್ದು ಶಿವಮೊಗ್ಗ ಜಿಲ್ಲೆಯ ಅರಸಾಳು ,ಆಗುಂಬೆ ಹಾಗೂ ಇನ್ನಿತರರ ಪ್ರದೇಶಗಳಲ್ಲಿ. ಈ ಧಾರಾವಾಹಿ ಭಾರತೀಯ ಟೆಲಿವಿಷನ್ ನಲ್ಲಿ ಇತಿಹಾಸವನ್ನೇ ನಿರ್ಮಿಸಿದ್ದು ಶಂಕರ್ ನಾಗ್ ಅವರ ಪ್ರತಿಭೆಗೆ ಸಂದ ಗೌರವವಾಗಿದೆ.

Leave a Reply

Your email address will not be published. Required fields are marked *