ಗ್ಯಾರಂಟಿ ಯೋಜನೆಗೆ ಹಣ ಹೊಂದಿಸಲು ಕೆಂಪು ಬಸ್‌ಗಳಲ್ಲಿ ಪುರುಷರಿಗೆ ಡಬಲ್ ಚಾರ್ಜ್ ; ಸಂಸದ ಬಿವೈಆರ್ ಗಂಭೀರ ಆರೋಪ
ರಿಪ್ಪನ್‌ಪೇಟೆ: ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಗ್ಯಾರಂಟಿ ಯೋಜನೆಯನ್ನು ಘೋಷಿಸಿದ್ದು ಸಾಗರ, ಹೊಸನಗರ, ತೀರ್ಥಹಳ್ಳಿ, ಶಿಕಾರಿಪುರ, ಸೊರಬ ತಾಲ್ಲೂಕು ಸೇರಿದಂತೆ 4700 ಗ್ರಾಮಗಳಿಗೆ ಕೆಂಪು ಬಸ್‌ಗಳೇ ಇಲ್ಲದಿದ್ದು ಸರ್ಕಾರದ ಗ್ಯಾರಂಟಿ ಯೋಜನೆಯ ಸೌಲಭ್ಯದಿಂದ ವಂಚಿತರನ್ನಾಗಿಸಿರುವ ಕೆಂಪು ಬಸ್‌ಗಳಲ್ಲಿ ಸಂಚರಿಸುವ ಪುರುಷರಿಂದ ಡಬಲ್ ಚಾರ್ಜ್ ವಸೂಲಿ ಮಾಡುವುದರೊಂದಿಗೆ ಹಣ ಹೊಂದಿಸುವ ಕಾರ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಗಂಭೀರವಾಗಿ ಆರೋಪಿಸಿದರು.
ರಿಪ್ಪನ್‌ಪೇಟೆ ಸಮೀಪದ ನೆವಟೂರು ಗ್ರಾಮದ ದೇವೇಂದ್ರಪ್ಪಗೌಡರ ಮನೆಯ ಆವರಣದಲ್ಲಿ ಆಯೋಜಿಸಲಾದ ಬಾಳೂರು ಮತ್ತು ಕೆಂಚನಾಲ ಬೂತ್ ಗಳ ಬಿಜೆಪಿ ಕಾರ್ಯಕರ್ತರ ಭೇಟಿ ಕಾರ್ಯಕ್ರಮದ ಭಾಗವಹಿಸಿ ಮಾತನಾಡಿ, ಬಿ.ಜೆ.ಪಿ. ತತ್ವ ಸಿದ್ದಾಂತದ ಚೌಕಟ್ಟಿನಡಿಯಲ್ಲಿ ಕಾರ್ಯನಿರ್ವಹಿಸುತ್ತಾ ಬಂದಿರುವ ಶಿಸ್ತಿನ ಪಕ್ಷವಾಗಿದ್ದು ಕಾರ್ಯಕರ್ತರ ಪರಿಶ್ರಮದಲ್ಲಿ ಪಕ್ಷವನ್ನು ಕಟ್ಟಿ ಬೆಳೆಸುವುದರೊಂದಿಗೆ ನಮ್ಮ ನಾಯಕರುಗಳು ತಪಸ್ಸು ಮಾಡಿದ್ದಾರೆಂದರು. ಕೇಂದ್ರದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 70 ಜನ ಬಿಜೆಪಿ ಸದಸ್ಯರಿದ್ದ ರಾಜ್ಯಸಭೆಯಲ್ಲಿ 120 ವಿಶ್ವಾಸ ಮತಗಳ ಮೂಲಕ ಕಾಶ್ಮೀರದಲ್ಲಿ ಸಮಸ್ಯೆಗೆ ಪರಿಹಾರ ಕಂಡಕೊಂಡಿರುವುದು ಮತ್ತು ಕರೋನಾ ಸಂಕಷ್ಟ ಪರಿಸ್ಥಿಯನ್ನು ಸಮರ್ಥವಾಗಿ ಎದುರಿಸಿರುವುದು ಸೇರಿದಂತೆ 5 ದಶಕದ ಹೋರಾಟದಿಂದಾಗಿ ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರವನ್ನು ನಿರ್ಮಿಸುವ ಮೂಲಕ ಬರುವ ಜನವರಿ 26 ರಂದು ಲೋಕಾರ್ಪಣೆ ಮಾಡಲಾಗುತ್ತಿರುವುದು ದೇಶಕ್ಕೆ ಹೆಮ್ಮೆಯ ವಿಷಯವೆಂದ ಅವರು, ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ರೈತರ ಪಂಪ್‌ಸೆಟ್‌ಗೆ ಉಚಿತ ವಿದ್ಯುತ್ ಯೋಜನೆ ಜಾರಿಗೊಳಿಸಿದ್ದು ಇಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಯಡಿ 200 ಯೂನಿಟ್ ಉಚಿತ ವಿದ್ಯುತ್ ಈಗ ದುಪ್ಪಟ್ಟು ಹಣ ವಸೂಲಿ ಮಾಡುವ ಮೂಲಕ ಪವರ್ ಕಟ್ ಮಾಡುವುದರಿಂದಾಗಿ ಮಳೆಯಿಲ್ಲದೆ ರೈತರು ತಮ್ಮ ಜಮೀನಿಗೆ ನೀರು ಹರಿಸಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಕಳವಳ ವ್ಯಕ್ತಪಡಿಸಿ, ಇಂದಿನ ರಾಜ್ಯಸರ್ಕಾರ ರೈತರ ಕಂದಾಯ ಜಮೀನಿಗೆ ಉಪಸಮಿತಿಯನ್ನು ರಚಿಸುವ ಮೂಲಕ ಅರಣ್ಯ ಕಾಯ್ದೆಯನ್ವಯ ಕ್ರಿಮಿನಲ್ ಕೇಸ್ ದಾಖಲಿಸುವ ಕರಾಳ ಕಾಯ್ದೆಯನ್ನು ಜಾರಿಗೊಳಿಸುವುದಾಗಿ ಅರಣ್ಯ ಸಚಿವ ಈಶ್ವರ ಖಂಡ್ರೆ ಮತ್ತು ಕಂದಾಯ ಸಚಿವ ಕೃಷ್ಣಬೈರೇಗೌಡರು ಹೇಳಿಕೆ ನೀಡಿರುವುದು ಸರ್ಕಾರದ ಮಂತ್ರಿಗಳಿಗೆ ಬುದ್ದಿ ಭ್ರಮಣೆಯಾದಂತಾಗಿದೆಂದು ಅರೋಪಿಸಿ, ಬರದ ನಿರ್ವಹಣೆಯಲ್ಲಿ ವಿಫಲಗೊಂಡಿರುವ ರಾಜ್ಯ ಸರ್ಕಾರ ಕೇಂದ್ರದ ಕಡೆ ಬೆರಳು ಮಾಡುತ್ತಾ ರೈತನಾಗರೀಕರನ್ನು ಬೀದಿಗೆ ಬೀಳುವಂತೆ ಮಾಡಿದೆ ಟೀಕಿಸಿದರು.
ತಾಳಗುಪ್ಪ-ಶಿರಸಿ ರೈಲ್ವೆ ಸಂಪರ್ಕದ ಯೋಜನೆಗೆ ಸರ್ವೆ ಮೈಸೂರು-ಬೆಂಗಳೂರು ಶಿವಮೊಗ್ಗ ಸಾಗರ ತಾಳಗುಪ್ಪ ರೈಲ್ವೆ ಸಂಪರ್ಕವನ್ನು ಶಿರಸಿಯವರೆಗೂ ಮುಂದುವರಿಸುವ ಮೂಲಕ ಕೊಂಕಣ ರೈಲ್ವೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದಾಗಿ ಈಗಾಗಲೇ ಕೇಂದ್ರದ ರೈಲ್ವೆ ಇಲಾಖೆಯವರಿಂದ ಸರ್ವೆ ಕಾರ್ಯ ಮುಗಿಸಲಾಗಿದ್ದು ಅನುದಾನ ಸಹ ಬಿಡುಗಡೆಯಾಗಿದೆ ಶೀಘ್ರದಲ್ಲಿಯೇ ಟೆಂಡರ್ ಪ್ರಕ್ರಿಯೆ ನಡೆಯಲಿದೆ. ಇನ್ನೂ 25 ಸಾವಿರ ಕಿ.ಮೀ.ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮಾಡಲಾಗಿದೆ ಎಂದ ಅವರು, ರಾಜ್ಯದಲ್ಲಿನ ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಜಾತಿ ಬೇದಭಾವನೆ ಮಾಡದೇ ಶಿವಮೊಗ್ಗ ಜಿಲ್ಲೆಯಲ್ಲಿನ ಎಲ್ಲಾ ಸಮುದಾಯದವರ ಬೇಡಿಕೆಗನುಗುಣವಾಗಿ 600 ಸಮುದಾಯ ಭವನಗಳ ನಿರ್ಮಾಣಕ್ಕೆ ಅನುದಾನವನ್ನು ಬಿಡುಗಡೆಗೊಳಿಸಲಾಗಿದ್ದು ಈಗಿನ ಸರ್ಕಾರ 300 ಸಮುದಾಯ ಭವನದ ಹಣವನ್ನು ತಡೆಹಿಡಿಯುವ ಮೂಲಕ ಅಭಿವೃದ್ದಿಗೆ ತಡೆಮಾಡಿದ್ದಾರೆಂದರು.
ಮುಂದಿನ ಜನವರಿಯಲ್ಲಿ ಜಿಲ್ಲಾ, ತಾಲ್ಲೂಕು ಪಂಚಾಯ್ತಿ ಚುನಾವಣೆಗಳು ಸಮೀಪಿಸುತ್ತಿದ್ದು ನಂತರ ಎಂಪಿ ಚುನಾವಣೆ ನಡೆಯುವುದು ಆ ಕಾರಣದಿಂದ ನಮ್ಮ ಕಾರ್ಯಕರ್ತರು ಚುನಾವಣೆಗೆ ಸನ್ನದ್ದರಾಗುವುದರೊಂದಿಗೆ ಪಕ್ಷದ ಗೆಲುವಿಗೆ ಶ್ರಮಿಸುವ ನಿಟ್ಟಿನ ಸಂಘಟನೆಯಾಗಬೇಕು ಮತ್ತು ರಾಜ್ಯ ಸರ್ಕಾರದ ಜನವಿರೋಧಿ ಯೋಜನೆಗಳ ಬಗ್ಗೆ ಮತದಾರರಲ್ಲಿ ಮನವರಿಕೆ ಮಾಡುವಂತೆ ಮನವಿ ಮಾಡಿದರು. ಜಿಲ್ಲೆಯ ಸವಾಂಗೀಣ ಅಭಿವೃದ್ಧಿಗಾಗಿ ಬಿ.ವೈ.ರಾಘವೇಂದ್ರರನ್ನು ದೇಶದ ಸುಭದ್ರತೆಗಾಗಿ ಮೋದಿಜೀ ಕೈ ಬಲಪಡಿಸಲು ಬಿಜೆಪಿ ಬೆಂಬಲಿಸಿ ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದರು.
ಬಾಳೂರು ಬಿಜೆಪಿ ಬೂತ್ ಸಮಿತಿಯ ಅಧ್ಯಕ್ಷ ಗಣಪತಿ ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ.ಮೇಘರಾಜ್, ತಾಲ್ಲೂಕು ಅಧ್ಯಕ್ಷ ಗಣಪತಿ ಬಿಳಗೋಡು, ಪಕ್ಷದ ಮುಖಂಡರಾದ ಬಿ.ಯುವರಾಜ್‌ಗೌಡ ಚಿಕ್ಕಮಣತಿ, ಎನ್.ಆರ್.ದೇವಾನಂದ, ಎ.ವಿ.ಮಲ್ಲಿಕಾರ್ಜುನ, ಆರ್.ಟಿ.ಗೋಪಾಲ, ಜಿ.ಪಂ.ಮಾಜಿ ಸದಸ್ಯ ಸುರೇಶ್ ಸ್ವಾಮಿರಾವ್, ಎ.ಟಿ.ನಾಗರತ್ನ, ತಾ.ಪಂ.ಮಾಜಿ ಸದಸ್ಯೆ ಸರಸ್ವತಿ ಗಣಪತಿ, ಕೆಂಚನಾಲ ಬೂತ್ ಸಮಿತಿಯ ಅಧ್ಯಕ್ಷ ಪರಮೇಶ್, ಹಾಲಪ್ಪ ಚಿಕ್ಕಮಣತಿ, ದೇವೇಂದ್ರಪ್ಪಗೌಡ ನೆವಟೂರು, ಕಗ್ಗಲಿ ಲಿಂಗಪ್ಪ, ಗಿರೀಶ್‌ಜಂಬಳ್ಳಿ, ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷೆ ಮಂಜುಳಾ ಕೇತಾರ್ಜಿರಾವ್, ಲೀಲಾ ಉಮಾಶಂಕರ, ಇನ್ನಿತರ ಹಲವರು ಹಾಜರಿದ್ದರು.