ಶಿವಮೊಗ್ಗ ಜಿಲ್ಲಾಡಳಿತ ಒಂದು ತಿಂಗಳವರೆಗೆ ಶಿವಮೊಗ್ಗದ ರಾಗಿ ಗುಡ್ಡ ಪ್ರವೇಶ ನಿರ್ಬಂಧ ವಿಧಿಸಿರುವುದನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಲಾಗುವುದು ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ತಿಳಿಸಿದರು.
ಬುಧವಾರ ದಾವಣಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗದ ರಾಗಿಗುಡ್ಡಕ್ಕೆ ಪ್ರವೇಶ ಮಾಡದಂತೆ ಪ್ರತಿಬಂಧಕಾಜ್ಞೆ ಹೊರಡಿಸಿರುವುದು ಅತ್ಯಂತ ಖಂಡನೀಯ.
ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ನೀತಿಯ ಸ್ಪಷ್ಟ ಉದಾಹರಣೆ ಎಂದು ದೂರಿದರು.
ಉಡುಪಿಯಿಂದ ಶಿವಮೊಗ್ಗಕ್ಕೆ ಬಸ್ ನಲ್ಲಿ ಬರುತ್ತಿದ್ದಾಗ ಮಾಸ್ತಿಕಟ್ಟೆ ಬಳಿ ತಡರಾತ್ರಿ ಎರಡು ಗಂಟೆಯಲ್ಲಿ ಬಸ್ ತಡೆಗಟ್ಟಿ, ಪೊಲೀಸರು ನೋಟಿಸ್ ನೀಡಿದ್ದಾರೆ. ನಾನೇನು ಶಿವಮೊಗ್ಗದಲ್ಲಿ ಭಯೋತ್ಪಾದಕ ಕೃತ್ಯಗಳ ನಡೆಸಲು ಹೋಗುತ್ತಿರಲಿಲ್ಲ. ಗಲಭೆಯಿಂದ ಭಯಗೊಂಡಿರುವ ಹಿಂದೂ ಸಮಾಜದವರಿಗೆ ಸಾಂತ್ವನ ಹೇಳಿ, ಆತ್ಮವಿಶ್ವಾಸ ತುಂಬಲು ತೆರಳುತ್ತಿದ್ದಾಗಿ ತಿಳಿಸಿದರು.
ಬೆಂಗಳೂರು, ಕೊಯಮತ್ತೂರು ನಲ್ಲಿ ಬಾಂಬ್ ಸ್ಫೋಟದ ಮೂಲಕ ನೂರಾರು ಜನರ ಮಾರಣಹೋಮಕ್ಕೆ ಕಾರಣವಾದ ಮದನಿಗೆ ತಂದೆ- ತಾಯಿ ನೋಡಲು, ಮದುವೆಯಲ್ಲಿ ಭಾಗವಹಿಸಲು ಜಾಮೀನು ಆಧಾರದ ಮೇಲೆ ಅವಕಾಶ ನೀಡಲಾಗುತ್ತದೆ. ಸಾಂತ್ವನ ಹೇಳಲಿಕ್ಕೆ ಮುಂದಾದ ತಮಗೆ ಅವಕಾಶ ನೀಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಗಿ ಗುಡ್ಡದ ಸಂತ್ರಸ್ಥ ಹಿಂದುಗಳಿಗೆ ಸಾಂತ್ವನ ಹೇಳುವುದು ನನ್ನ ಉದ್ದೇಶ. ನಾವು ಯಾವುದೇ ಗಲಾಟೆ, ಧೋಂಬಿ ಮಾಡಲು ಹೋಗಲು ಅಲ್ಲಿಗೆ ತೆರಳುತ್ತಿರಲಿಲ್ಲ. ಸಾಂತ್ವನ ಹೇಳುವ ಸಲುವಾಗಿ ಅಲ್ಲಿಗೆ ಹೋಗುತ್ತಿದ್ದೆ. ಆದರೆ ನನ್ನನ್ನು ತಡೆದು ಪೊಲೀಸರು ದೌರ್ಜನ್ಯ ಮಾಡಿದ್ದಾರೆ ಎಂದು ತಿಳಿಸಿದರು.
ಸಿದ್ದರಾಮಯ್ಯ ಸರ್ಕಾರ ಹಿಂದು ಧರ್ಮದ ವಿರೋಧಿ ಸರ್ಕಾರ, ರಾಗಿ ಗುಡ್ಡದ ಘಟನೆಗೆ ಯಾರು ಕಾರಣ ಎಂದು ತನಿಖೆಯಿಂದ ಹೊರ ಬರಬೇಕಾಗಿದೆ. ಸಿದ್ದರಾಮಯ್ಯ ಕೂಡ ಹಿಂದು ವಿರೋಧಿಗಳ ಕುಮ್ಮಕ್ಕಿನಿಂದ ಇಂತಹ ಘಟನೆ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಬಿಜೆಪಿ ಮುಖಂಡರಿಗೆ ಈಗ ಹಿಂದೂ, ಹಿಂದುತ್ವವೇ ಬೇಕಾಗಿಲ್ಲ. ಹಿಂದೂ ಸಮಾಜದ ವಿಷಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಬೇರೆ ಬೇರೆ ಅಲ್ಲವೇ ಅಲ್ಲ. ಎರಡೂ ಒಂದೇ. ನಮ್ಮ ರಕ್ಷಣೆಗೆ ಸರ್ಕಾರ, ಬಿಜೆಪಿ ಬರುತ್ತದೆ ಎಂದು ಭಾವಿಸದೆ ಹಿಂದುಗಳೇ ತಮ್ಮ ರಕ್ಷಣೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.