ರಿಪ್ಪನ್ ಪೇಟೆ ಪಟ್ಟಣದಲ್ಲಿ ಸಡಗರ ಸಂಭ್ರಮದಿಂದ 77ನೇ ಸ್ವಾತಂತ್ರ್ಯೋತ್ಸವ ಆಚರಣೆ-ಸಾವಿರಾರು ವಿದ್ಯಾರ್ಥಿಗಳಿಂದ ಭಾರತ ಮಾತೆಗೆ ಜೈಕಾರ
ರಿಪ್ಪನ್‌ಪೇಟೆ: ಪಟ್ಟಣದ ವಿವಿಧೆಡೆಗಳಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಇಂದು ಸ್ವಾತಂತ್ರ್ಯ ದಿನಾಚರಣೆಯನ್ನು ಸಡಗರ ಸಂಭ್ರಮದಿಂದ ಆಚರಿಸಿದರು.
ಪಟ್ಟಣದ ಗ್ರಾಮ ಪಂಚಾಯತಿ, ನಾಡಕಛೇರಿ, ಪೊಲೀಸ್ ಠಾಣೆ, ಪ್ರಾಥಮಿಕ ಆರೋಗ್ಯ ಕೇಂದ್ರ, ರೈತಸಂಪರ್ಕ ಕೇಂದ್ರ, ಸರ್ಕಾರಿ ಬಿಸಿಎಂ ವಸತಿ ನಿಲಯ, ಪ್ರಥಮದರ್ಜೆ, ಪದವಿಪೂರ್ವ ಕಾಲೇಜು, ಪ್ರೌಢಶಾಲೆ, ಸರ್ಕಾರಿ ಮತ್ತು ಖಾಸಗಿ ಪ್ರಾಥಮಿಕ ಹಿರಿಯ, ಕಿರಿಯ ಶಾಲೆ, ಮೆಸ್ಕಾಂ, ಪಶುವೈದ್ಯಕೀಯ ಆಸ್ಪತ್ರೆ, ಬ್ಯಾಂಕ್‌ಗಳು, ಅರಣ್ಯ ಇಲಾಖೆ, ಮೊಹಿಯುದ್ದೀನ್ ಜುಮ್ಮಾ ಮಸೀದಿ,ಗುಡ್ ಶೆಫರ್ಡ್ ಚರ್ಚ್ ಇನ್ನಿತರೆಡೆಗಳಲ್ಲಿ, ಸಡಗರ ಹಾಗೂ ಸಂಭ್ರಮದಿಂದ 77ನೇಯ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು.
ಶಾಲಾ-ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಭಾರತಮಾತೆಯ ಭಾವಚಿತ್ರದೊಂದಿಗೆ ಪಥಸಂಚಲನ ನಡೆಸಿ, ದೇಶಾಭಿಮಾನದ ಘೋಷಣೆಗಳನ್ನು ಕೂಗುತ್ತ ಸಂಭ್ರಮಿಸಿದರು.
ನಂತರ ಚಿನ್ನ್ನೆಗೌಡ ಕ್ರೀಡಾಂಗಣದಲ್ಲಿ ಸಮಾವೇಶಗೊಂಡು ಗ್ರಾಮ ಪಂಚಾಯತಿ ಅಧ್ಯಕ್ಷೆ ಧನಲಕ್ಷ್ಮಿ ಧ್ವಜಾರೋಹಣ ನೆರವೇರಿಸಿದರು.
ಗ್ರಾಮಾಡಳಿತದಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಮಹತ್ವದ ಬಗ್ಗೆ ಜುಮ್ಮಾ ಮಸೀದಿಯ ಧರ್ಮಗುರು ಮುನೀರ್ ಸಖಾಫಿ ಮತ್ತು ಗ್ರಾಪಂ ಸದಸ್ಯ ಪಿ ರಮೇಶ್ ಮಾತನಾಡಿದರು.
ಗ್ರಾಮ ಪಂಚಾಯತಿ ಅಧ್ಯಕ್ಷೆ ಧನಲಕ್ಷ್ಮಿ, ಉಪಾಧ್ಯಕೆ ಸುಧೀಂದ್ರ ಪೂಜಾರಿ,ಗ್ರಾಪಂ ಸದಸ್ಯರುಗಳು,ಸಿಡಿಸಿ ಸದಸ್ಯರುಗಳು, ಪ್ರಾಂಶುಪಾಲರಾದ ಚಂದ್ರಶೇಖರ್, ಮಂಜುನಾಥ್ ಉಪಪ್ರಾಂಶುಪಾಲ ಕೆಸುವಿನಮನೆ ರತ್ನಾಕರ, ಉಪತಹಶೀಲ್ದಾರ್ ಹುಚ್ಚರಾಯಪ್ಪ, ಪಿಡಿಓ ಮಧುಸೂಧನ್, ಪಿಎಸ್‌ಐ ಎಸ್ ಪಿ ಪ್ರವೀಣ್, ಇನ್ನಿತರರು ಉಪಸ್ಥಿತರಿದ್ದರು.
ರಕ್ತದಾನ ಶಿಬಿರ:
ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ತಾಲ್ಲೂಕು ಸರ್ಕಾರಿ ನೌಕರರ ಸಂಘ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ರೋಟರಿ ಸಂಸ್ಥೆ ಹಾಗೂ ಇನ್ನಿತರ ಸಂಘ ಸಂಸ್ಥೆ ವತಿಯಿಂದ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು.