ರಿಪ್ಪನ್‌ಪೇಟೆಯ ಗವಟೂರಿನಲ್ಲಿ ಕಾರು ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ – ಮೆಗ್ಗಾನ್ ಗೆ ದಾಖಲು|ಸಮಯ ಪ್ರಜ್ಞೆ ಮೆರೆದ ರಿಪ್ಪನ್‌ಪೇಟೆ ಪಿಎಸ್‌ಐ
ಬೈಕ್ ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿ ಯುವಕನೊಬ್ಬ ಗಂಭೀರ ಗಾಯಗೊಂಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆಯಲ್ಲಿ ನಡೆದಿದೆ.
ಪಟ್ಟಣದ ಹೊಸನಗರ ರಸ್ತೆಯ ಶರ್ಮಣ್ಯಾವತಿ ನದಿಯ ಸೇತುವೆ ಬಳಿಯಲ್ಲಿ ರಿಪ್ಪನ್‌ಪೇಟೆ ಕಡೆಯಿಂದ ಹೊಸನಗರದ ಕಡೆಗೆ ತೆರಳುತಿದ್ದ ಬೈಕ್ ಹಾಗೂ ಹೊಸನಗರ ಕಡೆಯಿಂದ ರಿಪ್ಪನ್‌ಪೇಟೆ ಕಡೆಗೆ ಬರುತಿದ್ದ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ.
ಈ ಅಪಘಾತದಲ್ಲಿ ಹೊಸನಗರ ಕೊಡಚಾದ್ರಿ ಕಾಲೇಜಿನ ವಿದ್ಯಾರ್ಥಿ ಅಲಗೇರಿಮಂಡ್ರಿಯ ಮಂಜುನಾಥ್ (21) ಗಂಭೀರ ಗಾಯಗೊಂಡಿದ್ದು ಬಲಗಾಲು ಮುರಿತಕ್ಕೊಳಗಾಗಿದೆ.ಹಿಂಬದಿಯಲ್ಲಿ ಕುಳಿತಿದ್ದ ಕೊಡಚಾದ್ರಿ ಕಾಲೇಜಿನ ವಿದ್ಯಾರ್ಥಿ ಹೇಮಂತ್(21) ಗೆ ಸಣ್ಣಪುಟ್ಟ ಗಾಯಗಳಾಗಿವೆ.
ಅಪಘಾತದ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತೆರಳಿದ ಪಟ್ಟಣದ ಪಿಎಸ್ ಐ ಪ್ರವೀಣ್ ಎಸ್ ಪಿ ರವರು ಆಂಬ್ಯುಲೆನ್ಸ್ ಬರಲು ತಡವಾಗಿದ್ದರಿಂದ ಪೊಲೀಸ್ ವಾಹನದಲ್ಲೇ ಗಾಯಾಳುಗಳನ್ನು ರಿಪ್ಪನ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ.
ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಗೆ ರವಾನಿಸಲಾಗಿದೆ.
ರಿಪ್ಪನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ತೀವ್ರ ರಕ್ತಸ್ರಾವಕ್ಕೊಳಗಾಗಿದ್ದ ಗಾಯಾಳುಗಳನ್ನು ಆಂಬುಲೆನ್ಸ್ ಬರುವವರೆಗೂ ಕಾಯದೇ ಪೊಲೀಸ್ ಜೀಪ್ ನಲ್ಲಿಯೇ ಕರೆತರುವ ಮೂಲಕ ಪಿಎಸ್ ಐ ಪ್ರವೀಣ್ ಸಮಯ ಪ್ರಜ್ಞೆ ಮೆರೆದಿದ್ದಾರೆ.