ಹೆತ್ತು ಹೊತ್ತ ತಾಯಿಯನ್ನು ಮಗನೇ ಕತ್ತಿಯಿಂದ ಕಡಿದು ಕೊಲೆ ಮಾಡಿರುವ ಭೀಬತ್ಸಕರ ಘಟನೆ ಮಲೆನಾಡಿನಲ್ಲಿ ನಡೆದಿದೆ.
ಇದು ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಸೋಮವಾರ ಮಧ್ಯಾಹ್ನ ಬೆಳಕಿಗೆ ಬಂದ ಘೋರ ಹತ್ಯೆಯೊಂದರ ಕಥೆ. ಇಲ್ಲಿನ ಮಾವಿನಕೆರೆ ನಿವಾಸಿ ಸುಲೋಚನಮ್ಮ (60) ಎಂಬವರನ್ನು ಅವರ ಪುತ್ರನೇ ಕೊಂದು ಹಾಕಿದ್ದಾನೆ.
ತಾಯಿಯನ್ನೆ ಕೊಂದ ಕ್ರೂರಿ ಮಗ ಸಂತೋಷ (49) ಆತ ಭಾನುವಾರ ರಾತ್ರಿಯೇ ಕೊಲೆ ಮಾಡಿರುವ ಶಂಕೆ ಇದ್ದು, ಸೋಮವಾರ ಮಧ್ಯಾಹ್ನವಷ್ಟೇ ಪ್ರಕರಣ ಬೆಳಕಿಗೆ ಬಂದಿದೆ.
ಆರೋಪಿಗೆ ಕೆಲವು ವರ್ಷಗಳ ಹಿಂದೆ ಮದುವೆಯಾಗಿ ಎರಡು ಮಕ್ಕಳಿವೆ. ಸಂತೋಷ ಚಾಲಕನಾಗಿ ಕೆಲಸ ಮಾಡುತ್ತಾನೆ, ಕೂಲಿ ಕೆಲಸವನ್ನೂ ಮಾಡುತ್ತಾನೆ. ಆದರೆ, ಒಂದು ಪೈಸೆಯನ್ನೂ ಮನೆಗೆ ತರುವ ಜಾಯಮಾನವಿಲ್ಲ. ಕುಡಿದು ಮತ್ತೇರಿಸಿಕೊಂಡು ಮನೆಗೆ ಬರುವ ಆತ ಹೆಂಡತಿ ಮಕ್ಕಳ ಮೇಲೆ ತನ್ನ ಪ್ರತಾಪ ತೋರಿಸುತ್ತಿದ್ದ.
ಈತನ ದೈಹಿಕ ಮತ್ತು ಮಾನಸಿಕ ಹಿಂಸೆಯಿಂದ ಬೇಸತ್ತ ಆತನ ಹೆಂಡತಿ, ಇಬ್ಬರು ಮಕ್ಕಳನ್ನು ಕಟ್ಟಿಕೊಂಡು ಎಂ.ಸಿ.ಹಳ್ಳಿಯಲ್ಲಿ ಬೇರೆ ಮನೆ ಮಾಡಿಕೊಂಡು ವಾಸಿಸುತ್ತಿದ್ದಾಳೆ. ಈತ ಆಗಾಗ ಅಲ್ಲಿಗೂ ಹೋಗಿ ಕಿರಿಕಿರಿ ಮಾಡುತ್ತಾನೆ.
ಮಾವಿನಕೆರೆಯ ಮನೆಯಲ್ಲಿ ಸಂತೋಷ್ ಮತ್ತು ಅವನ ತಾಯಿ ವಾಸಿಸುತ್ತಾರೆ. ಅವನು ತಾಯಿಯ ಜತೆಗೂ ಚೆನ್ನಾಗಿ ಇರಲಿಲ್ಲ. ಪ್ರತಿದಿನವೂ ಬಂದು ತಾಯಿಯ ಜತೆ ಗಲಾಟೆ ಮಾಡುತ್ತಿದ್ದ. ಚಾಲಕ, ಕೂಲಿ ಕೆಲಸ ಮಾಡಿಕೊಂಡಿದ್ದ ಸಂತೋಷ್ ಮನೆಗೆ ಒಂದು ಪೈಸೆಯೂ ಕೊಟ್ಟದ್ದಿಲ್ಲ. ನಿಜವೆಂದರೆ, ಅಮ್ಮನಿಗಾಗಿ ಅನ್ನಾಹಾರಕ್ಕೂ ಕೊಡುತ್ತಿರಲಿಲ್ಲ. ಅಕ್ಕಪಕ್ಕದ ಮನೆಯವರೇ ಸಂತೋಷ್ ತಾಯಿಗೆ ಊಟ ತಿಂಡಿ ಕೊಡುತ್ತಿದ್ದರು. ಊರವರ ಸಹಾಯದಿಂದಲೇ ಜೀವನ ಸಾಗಿಸುತ್ತಿದ್ದರು ಸುಲೋಚನಮ್ಮ.
ಸಾಮಾನ್ಯವಾಗಿ ಸುಲೋಚನಮ್ಮ ಅವರು ಬೆಳಗ್ಗೆ ಎದ್ದು ಮನೆಯ ಹೊರಗೆ ಬಂದು ಅಕ್ಕಪಕ್ಕದವರ ಜತೆ ಮಾತನಾಡುತ್ತಿದ್ದರು. ಆದರೆ, ಮಧ್ಯಾಹ್ನವಾದರೂ ಆಕೆ ಹೊರಗೆ ಬಾರದೆ ಇರುವುದನ್ನು ನೋಡಿ ಪಕ್ಕದ ಮನೆಯ ಮಹಿಳೆಯೊಬ್ಬರು ಮನೆ ಪಕ್ಕ ಬಂದು ಕರೆದಿದ್ದಾರೆ. ಆದರೆ ಒಳಗಿನಿಂದ ಯಾವುದೇ ಉತ್ತರ ಬಂದಿಲ್ಲ. ಬಳಿಕ ಅವರು ತೆರೆದ ಕಿಟಕಿಯಿಂದ ಒಳಗೆ ನೋಡಿದ್ದಾರೆ. ಆಗ ಸುಲೋಚನಮ್ಮ ಮಂಚದಲ್ಲಿ ಮಲಗಿದ್ದು ಕಂಡುಬಂತು. ಕೂಡಲೇ ಅಕ್ಕಪಕ್ಕದ ಮನೆಯವರನ್ನು ಕರೆದುಕೊಂಡು ಬಂದು ನೋಡಿದಾಗ ಸಾವು ಸಂಭವಿಸಿತ್ತು.
ಪಕ್ಕದಲ್ಲೇ ಇದ್ದ ಕತ್ತಿ ಆಕೆಯನ್ನು ಕೊಲೆ ಮಾಡಿದ್ದಕ್ಕೆ ಸಾಕ್ಷಿ ನುಡಿದಿತ್ತು. ಇಷ್ಟಾಗುವಾಗ ಎಲ್ಲರ ಸಂಶಯ ಆಕೆಯ ಮಗ ಸಂತೋಷನ ಮೇಲೆ ಬಿದ್ದಿತ್ತು. ಆತನನ್ನು ಹುಡುಕಿಕೊಂಡು ಹೋದರೆ ಆತ ಗದ್ದೆಯೊಂದರಲ್ಲಿ ಆರಾಮವಾಗಿ ಮಲಗಿದ್ದ. ಆಗಲೂ ಅವನು ಕುಡಿತದ ಮತ್ತಿನಲ್ಲೇ ಇದ್ದ.
ಆತನನ್ನು ಊರಿನ ಜನ ಸೇರಿ ಕರೆದುಕೊಂಡು ಮನೆಗೆ ಬಂದರೆ ಆತ ತಾಯಿಯನ್ನು ನೋಡಿದಂತೆ ಮಾಡಿ ಮಾರ್ಗದ ಪಕ್ಕದಲ್ಲಿ ಇಟ್ಟಿದ್ದ ಇಟ್ಟಿಗೆಯ ರಾಶಿ ಪಕ್ಕ ಬಿದ್ದುಕೊಂಡಿದ್ದಾನೆ. ಕೇಳಿದರೆ, ನಂಗೆ ವಿಷಯವೇ ಗೊತ್ತಿಲ್ಲ, ರಾತ್ರಿ ನಾನು ಮನೆಗೇ ಬರ್ಲಿಲ್ಲ. ಗದ್ದೆಯಲ್ಲೇ ಮಲಗಿದ್ದೆ. ಈಗ ಬಂದು ಯಾರೋ ಹೇಳಿದರು. ಹೀಗಾಗಿ ಮನೆಗೆ ಬಂದೆ ಎಂದು ಆರಾಮವಾಗಿ ಹೇಳಿದ್ದಾನೆ. ನನಗೂ ಕೊಲೆಗೂ ಸಂಬಂಧವಿಲ್ಲ ಎನ್ನುತ್ತಿರುವ ಆತನನ್ನು ಪೊಲೀಸರು ವಿಚಾರಣೆ ನಡೆಸಲಿದ್ದಾರೆ.
ಭದ್ರಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದೆ.