Headlines

ಕಾಂಗ್ರೆಸ್​ ಕಾರ್ಯಕರ್ತೆ ವಿರುದ್ಧ ಅವಹೇಳನಕಾರಿ ಪೋಸ್ಟ್ ​​; ಚಕ್ರವರ್ತಿ ಸೂಲಿಬೆಲೆ ವಿರುದ್ಧ ಎಫ್​ಐಆರ್​ ದಾಖಲು|FIR

ಕಾಂಗ್ರೆಸ್​ ಕಾರ್ಯಕರ್ತೆ ವಿರುದ್ಧ ಅವಹೇಳನಕಾರಿ ಪೋಸ್ಟ್​​; ಚಕ್ರವರ್ತಿ ಸೂಲಿಬೆಲೆ ವಿರುದ್ಧ ಎಫ್​ಐಆರ್​ ದಾಖಲು

ಸಾಮಾಜಿಕ ಜಾಲತಾಣದಲ್ಲಿ ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರು ಅವಹೇಳನಕಾರಿ ಕಾಮೆಂಟ್ ಮಾಡಿದ್ದಾರೆ ಎಂದು ಕೆಪಿಸಿಸಿ ಸಾಮಾಜಿಕ ಜಾಲತಾಣದ ಉಪಾಧ್ಯಕ್ಷೆ ಸೌಗಂಧಿಕ ರಘುನಾಥ್ ಅವರು ಆರೋಪಿಸಿ ದೂರು ನೀಡಿದ್ದರು.

ಈ ದೂರಿನ ಮೇರೆಗೆ ಸೂಲಿಬೆಲೆ ವಿರುದ್ಧ ವಿನೋಬಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಇದೆ ತಿಂಗಳ 23 ರಂದು ಚಂದ್ರಯಾನ -3 ಯಶಸ್ವಿಗೆ ಪೂಜೆ ಮಾಡಿಸಿ ಫೋಟೋ ಹಾಕಿ ಎಂದು ಪೋಸ್ಟ್ ಹಾಕಿದ್ದ ಸೂಲಿಬೆಲೆ ಪೋಸ್ಟ್​ಗೆ ಸೌಗಂಧಿಕ ರಘುನಾಥ್ ತಮ್ಮ ಅಧಿಕೃತ ಖಾತೆಯಿಂದ ಕಾಮೆಂಟ್ ಮಾಡಿ, ದೇವಸ್ಥಾನಕ್ಕೆ ಪೂಜೆ ಮಾಡೋದು ತಪ್ಪಲ್ಲ, ಆದರೆ ಫೊಟೋ ಹಾಕಿ ಅಂತ ಹೇಳಿರೋದು ತಪ್ಪು. ವಿಜ್ಞಾನಿಗಳ ಪರಿಶ್ರಮ ಫಲಿಸಲಿ ಎಂದು ಬೇಡಿಕೊಂಡರೆ ಸಾಕು ಎಂದು ಕಾಮೆಂಟ್ ಮಾಡಿದ್ದರು. ಈ ಕಾಮೆಂಟ್​ಗೆ ಸೂಲಿಬೆಲೆಯವರು ಅವಹೇಳನಕಾರಿಯಾಗಿ ಪ್ರತಿಕ್ರಿಯೆ ನೀಡಿದ್ದಾರೆ ಎಂದು ದೂರು ನೀಡಿದ್ದರು. 

ಈ ಕುರಿತು ಮಾತನಾಡಿರುವ ಸೌಗಂಧಿಕಾ ರಘುನಾಥ್ ದೇಶ, ಭಾಷೆ, ಧರ್ಮದ ಹೆಸರಲ್ಲಿ ಧರ್ಮದ ಹೆಸರಲ್ಲಿ ಬಾಷಣ ಮಾಡುವ ವ್ಯಕ್ತಿ ಈಗ ಹೆಣ್ಣುಮಕ್ಕಳ ನಿಂದನೆಗೆ ಇಳಿದಿದ್ದಾರೆ. ಯಾವ ಹೆಣ್ಣಿಗೂ ಕೂಡ ಈತರದ ಮಾತುಗಳನ್ನ ಆಡಬಾರದು, ಅವರ ಮನೆಯಲ್ಲಿರುವ ತಾಯಿ ಕೂಡ ಹೆಣ್ಣು ಎನ್ನುವುದನ್ನು ಮರೆಯಬಾರದು. ಹಾಗಾಗಿ ಅಂತವರಿಗೆ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದ್ದಾರೆ.

ಸೌಗಂಧಿಕ ರಘುನಾಥ್ ಘಟನೆಯ ಬಗ್ಗೆ ಹೇಳಿದ್ದೇನು? :

 ದೇವರಿಗೆ ಪೂಜೆ ಮಾಡುವುದಕ್ಕೆ ನನ್ನ ಅಭ್ಯಂತರವೇನೂ ಇಲ್ಲ. ಆದರೆ ಸೂಲಿಬೆಲೆ ಅವರು ತೋರ್ಪಡಿಕೆಯ ಫೊಟೋ ಹಾಕಿ ಎಂದಿದ್ದಕ್ಕೆ, ನಾನು ಸಭ್ಯವಾಗಿ ಕಾಮೆಂಟ್ ಮಾಡಿದ್ದೆ. ಈ ಕಾಮೆಂಟ್ ಹಾಕಿದ ಬಳಿಕ ಸಾಕಷ್ಟು ಫೇಕ್ ಅಕೌಂಟ್‌ಗಳಿಂದ ನನ್ನ ತೇಜೋವಧೆ ನಡೆದಿದೆ. ನಾನು ಯಾವುದಕ್ಕೂ ಸೊಪ್ಪು ಹಾಕೋದಿಲ್ಲ‌. ಸ್ವತಃ ಸೂಲಿಬೆಲೆ ಅವರು ಅವಹೇಳನಕಾರಿಯಾಗಿ ಕಾಮೆಂಟ್ ಮಾಡಿದ್ದಾರೆ. ಹೆಣ್ಣು ನಿಂದನೆಯ ಅಸಭ್ಯ ಕಾಮೆಂಟ್​ಗೆ ನಾನೂ ಪ್ರತಿಕ್ರಿಯಿಸಿ, ಸೂಲಿಬೆಲೆ ದೊಡ್ಡ ಭಾಷಣಕಾರನಾಗಿ, ಮಾತೃ ಪ್ರೀತಿಯಿಂದಲೂ ಬೆಳೆದು ಈ ರೀತಿ ಕಾಮೆಂಟ್ ಹಾಕಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದೆ. 

ಸುಳ್ಳು ಭಾಷಣ ಮಾಡಿ, ಜನರನ್ನು ಧರ್ಮದ ಹೆಸರಲ್ಲಿ ದಿಕ್ಕು ತಪ್ಪಿಸುವುದನ್ನು ಬಿಡಬೇಕು. ಹೆಣ್ಣುಮಕ್ಕಳಿಗೆ ಮರ್ಯಾದೆ ಕೊಡಬೇಕು. ಅವರು ಆ ಕಾಮೆಂಟ್ ಡಿಲೀಟ್ ಮಾಡಿದ ಮೇಲೆ ಫೇಕ್ ಅಕೌಂಟ್ ಮೂಲಕ ಸ್ಕ್ರೀನ್ ಶಾಟ್ ಬಳಸಿ ತೇಜೋವಧೆ ಮಾಡಿಸಿದ್ದಾರೆ. ತಪ್ಪು ಮಾಡಿದ್ದನ್ನು ಒಪ್ಪಿಕೊಳ್ಳುವ ದೊಡ್ಡಗುಣ ಸೂಲಿಬೆಲೆಗೆ ಇಲ್ಲ. ಇಂತಹ ಸ್ತ್ರೀ ನಿಂದಕ ಸೂಲಿಬೆಲೆಯ ಮಾತುಗಳನ್ನು ಜನ ನಂಬುವುದು ನಾಚಿಕೆಗೇಡಿನ ವಿಷಯ ಎಂದು ದೂರು ನೀಡಿದ ಬಳಿಕ ವಾಗ್ದಾಳಿ ನಡೆಸಿದ್ದರು.

Leave a Reply

Your email address will not be published. Required fields are marked *