ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಗಿಳಾಲಗುಂಡಿ ಸಮೀಪ ಬೃಹತ್ ಮರವೊಂದು ರಸ್ತೆಗೆ ಅಡ್ಡಲಾಗಿ ಉರುಳಿಬಿದ್ದಿತ್ತು. ಗಾಳಿ ಮಳೆಗೆ ಬಿದ್ದ ಮರದಿಂದಾಗಿ ಶಿವಮೊಗ್ಗ-ಸಾಗರ ರಸ್ತೆಯಲ್ಲಿ ಸಂಚಾರಕ್ಕೆ ಕೆಲವು ಹೊತ್ತು ಸಮಸ್ಯೆ ಉಂಟಾಗಿತ್ತು.
ರಾಷ್ಟ್ರೀಯ ಹೆದ್ಧಾರಿಯಲ್ಲಿ ಸುಮಾರು 2 ಗಂಟೆ ಕಾಲ ಸಂಚಾರ ಬಂದ್ ಆಗಿತ್ತು. ಮರ ಉರುಳಿಬಿದ್ದ ಬೆನ್ನಲ್ಲೆ ಸ್ಥಳೀಯರು ಮರವನ್ನು ಕಡಿದು , ಸಂಚಾರಕ್ಕೆ ಅನುವು ಮಾಡಿಕೊಡಲು ಮುಂದಾದರು. ಆದರೆ ದೊಡ್ಡದಾಗಿದ್ದ ಮರವನ್ನು ತೆರವುಗೊಳಿಸುವುದು ಸುಲಭದ ಕೆಲಸವಾಗಿರಲಿಲ್ಲ.
ಗಿಳಾಲಗುಂಡಿ ಕ್ರಾಸ್ ಸಮೀಪವೇ ಘಟನೆ ಬಗ್ಗೆ ವಿಷಯ ತಿಳಿದು ಸ್ಥಳಕ್ಕೆ ಶಾಸಕ ಬೇಳೂರು ಗೋಪಾಲಕೃಷ್ಣ ಮರ ತೆರವು ಕಾರ್ಯಾಚರಣೆಯಲ್ಲಿ ಕೈ ಜೋಡಿಸಿದರು, ತಮ್ಮ ಬೆಂಬಲಿಗರ ಜೊತೆ ಮರವನ್ನು ತೆರವುಗೊಳಿಸಲು ನೆರವಾದರು.
ಬಳಿಕ ಮರ ತುಂಡು ಮಾಡುವ ಮಷಿನ್ ಮೂಲಕ ಮರವನ್ನ ಅಲ್ಲಲ್ಲಿ ತುಂಡು ಮಾಡಿ, ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಯ್ತು.
ಮಳೆಯ ನಡುವೆಯೇ ಶಾಸಕರು ಹಾಗೂ ಸ್ಥಳೀಯರು ಮಾಡಿದ ಕಾರ್ಯದಿಂದಾಗಿ, ಹೆದ್ಧಾರಿಯಲ್ಲಿ ವಾಹನ ಸವಾರರು ಮುಂದಕ್ಕೆ ಹೋಗಲು ಸಹಾಯವಾಯ್ತು.