Headlines

ರಿಪ್ಪನ್‌ಪೇಟೆ : ಮನೆಗಳ್ಳತನದ ಆರೋಪಿಗಳ ಬಂಧನ – ಕಳ್ಳರ ಜಾಡು ಪತ್ತೆ ಹಚ್ಚಿದ ಆ ಒಂದು ಸುಳಿವು|arrested

ಜೂನ್ ತಿಂಗಳ 8 ನೇ ತಾರೀಖಿನಂದು ಗರ್ತಿಕೆರೆ ಗ್ರಾಪಂ ವ್ಯಾಪ್ತಿಯ ಗಂಧ್ರಳ್ಳಿ ಗ್ರಾಮದ ಗೋವಿಂದನಾಯ್ಕ್ ರವರ ಮನೆಯಲ್ಲಿದ್ದ ಆಭರಣ, ನಗದು ಕಳ್ಳತನ ನಡೆಸಿದ ಆರೋಪಿಗಳನ್ನು ರಿಪ್ಪನ್‌ಪೇಟೆ ಪೊಲೀಸರು ಬಂಧಿಸಿದ್ಧಾರೆ.

ಲಕ್ಷಾಂತರ ರೂ ಬೆಲೆ ಬಾಳುವ ಚಿನ್ನದ ಆಭರಣಗಳು ಮತ್ತು ನಗದು ಕಳ್ಳತನ ಮಾಡಿದ ಬಗ್ಗೆ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಜೂ 08 ರಂದು ಪ್ರಕರಣ ದಾಖಲಾಗಿತ್ತು.

ಘಟನೆಯ ಬಗ್ಗೆ ತನಿಖೆ ಕೈಗೊಂಡ ಪಿಎಸ್ ಐ ಪ್ರವೀಣ್ ಎಸ್ ಪಿ ಮತ್ತು ಸಿಬಂದಿಗಳ ತಂಡವು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಸುದರ್ಶನ ಕೆ.ಎನ್  23 ವರ್ಷ, ಆದರ್ಶ ಎಸ್ 23 ವರ್ಷ,  ಮಧುಸೂದನ್ 30 ವರ್ಷ ಇವರನ್ನು ಬಂಧಿಸಿ ಐಪಿಸಿ ಸೆಕ್ಷನ್ 457.380 ರಡಿಯಲ್ಲಿ ಕೇಸ್ ದಾಖಲಿಸಿ ಕಳ್ಳತನ ಮಾಡಿದ್ದ 5.30 ಲಕ್ಷ ಮೌಲ್ಯದ 109 ಗ್ರಾಂ ಚಿನ್ನ,73ಗ್ರಾಂ ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಿಥುನ್ ಕುಮಾರ್ , ಡಿವೈಎಸ್ಪಿ ಗಜಾನನ ವಾಮನ ಸುತಾರ ,ಸಿಪಿಐ ಎಸ್ ಪಿ ಪ್ರವೀಣ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ಶಿವಕುಮಾರ್ ,ಉಮೇಶ್ , ಮಧುಸೂದನ್, ಪರಮೇಶ್ವರ್ ಮತ್ತು ಸಂತೋಷ್ ಕೊರವಾರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ಕಳವು ಮಾಡಿದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕಳ್ಳರ ಜಾಡು ಪತ್ತೆ ಹಚ್ಚಿದ ಆ ಒಂದು ಸುಳಿವು 

ಜೂನ್ 08 ರಂದು ಗರ್ತಿಕೆರೆ ವ್ಯಾಪ್ತಿಯ ಗಂದ್ರಳ್ಳಿ ಗ್ರಾಮದಲ್ಲಿ ಕಳ್ಳತನ ನಡೆದ ಬಗ್ಗೆ ರಿಪ್ಪನ್‌ಪೇಟೆ ಠಾಣೆಯಲ್ಲಿ ದೂರು ದಾಖಲಾದ ಕ್ಷಣದಿಂದಲೇ ಪೊಲೀಸರು ತನಿಖೆ ಕೈಗೊಂಡು ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಕಾರ್ಯಪ್ರವೃತ್ತರಾಗಿದ್ದರು.

ಕಳ್ಳತನ ನಡೆದ ಸ್ಥಳದಲ್ಲಿ ವೃತ್ತಿಗತ ಅಪರಾಧಿಗಳಿಂದ ಕೃತ್ಯ ನಡೆದಿದ್ದ ಬಗ್ಗೆ ಯಾವುದೇ ಸುಳಿವು ದೊರೆಯದೇ ಇದ್ದ ಹಿನ್ನಲೆಯಲ್ಲಿ ಪ್ರಕರಣ ಪೊಲೀಸರಿಗೆ ಅತ್ಯಂತ ಜಟಿಲ ತಲೆನೋವಾಗಿ ಪರಿಣಮಿಸಿತ್ತು.

ನೂತನವಾಗಿ ಚಾರ್ಜ್ ವಹಿಸಿಕೊಂಡಿದ್ದ ಪಿಎಸ್ ಐ ಪ್ರವೀಣ್ ಎಸ್ ಪಿ ರವರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳ ಜಾಡು ಪತ್ತೆ ಹಚ್ಚಲು ಕ್ರೈಂ ಸಿಬ್ಬಂದಿಗಳಾದ ಉಮೇಶ್ , ಶಿವಕುಮಾರ್ ಒಳಗೊಂಡ ತಂಡವನ್ನು ರಚಿಸಿದ್ದರು.

ಈ ತಂಡಕ್ಕೆ ಖಾಸಗಿ ಭಾತ್ಮಿದಾರನೊಬ್ಬ ನೀಡಿದ ಸಣ್ಣ ಸುಳಿವು ಇಡೀ ಪ್ರಕರಣದ ದಿಕ್ಕನ್ನು ಬದಲಾಯಿಸಿತು. ಯುವಕನೊಬ್ಬ ಬಂಗಾರ ಮಾರಾಟ ಮಾಡುವ ಉದ್ದೇಶದಿಂದ ಅಂಗಡಿಯೊಂದರಲ್ಲಿ ವಿಚಾರಿಸಿರುತ್ತಾನೆ. ಇದನ್ನು ಗಮನಿಸಿದ ಖಾಸಗಿ ಪೊಲೀಸ್ ಭಾತ್ಮಿದಾರನೊಬ್ಬ ಈ ಸುಳಿವನ್ನು ಪೊಲೀಸರಿಗೆ ತಿಳಿಸಿದ್ದಾನೆ.

 ಈ ಮಾಹಿತಿಯನ್ನಾಧರಿಸಿ ತಂಡ ಬೇರೆಯದೇ ಶೈಲಿಯಲ್ಲಿ ತನಿಖೆ ಕೈಗೊಂಡು ಆ ಯುವಕನನ್ನು ಹಿಂಬಾಲಿಸಿ ,ಚಲನವಲನಗಳನ್ನು ಗಮನಿಸಿ ಕಳ್ಳತನ ನಡೆದ ಸ್ಥಳದಲ್ಲಿ ಆತನು ಇದ್ದನೆಂಬುವುದು ಮೊಬೈಲ್ ಲೊಕೇಷನ್ ಆಧಾರದಲ್ಲಿ ಧೃಡಪಡಿಸಿಕೊಂಡು ಶನಿವಾರ ಶಿವಮೊಗ್ಗ ರಸ್ತೆಯ ಖಾಸಗಿ ಹೋಟೆಲ್ ಬಳಿಯಲ್ಲಿ ಆರೋಪಿಗಳಿಬ್ಬರನ್ನು ವಶಕ್ಕೆ ಪಡೆದುಕೊಳ್ಳುತ್ತಾರೆ.ನಂತರ ಠಾಣೆಗೆ ಕರೆತಂದು ವಿಚಾರಿಸಿದಾಗ   ಕಳ್ಳತನದ ಬಗ್ಗೆ ಬಾಯಿ ಬಿಟ್ಟಿದ್ದಾರೆ. ಅವರ ಮಾಹಿತಿಯ ಮೇರೆಗೆ ಇನ್ನೊಬ್ಬ ಆರೋಪಿಯನ್ನು ಆತನ ಮನೆಯಲ್ಲಿಯೇ ಬಂಧಿಸಿದರು.ನಂತರ ಕದ್ದ ಮಾಲನ್ನು ಆರೋಪಿಗಳಿಂದ ವಶಪಡಿಸಿಕೊಳ್ಳುತ್ತಾರೆ.

ಒಟ್ಟಾರೆಯಾಗಿ ಘಟನೆ ನಡೆದ ಹದಿನೈದು ದಿನಗಳೊಳಗೆ ರಿಪ್ಪನ್‌ಪೇಟೆ ಪೊಲೀಸರು ಆರೋಪಿಗಳನ್ನು ಬಂಧಿಸಿ,5ಲಕ್ಷ 30 ಸಾವಿರ ಮೌಲ್ಯದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.ಈ ಕಾರ್ಯಾಚರಣೆಗೆ ಪಟ್ಟಣದ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *