ಹೊಸನಗರ : ಅತಿ ಹೆಚ್ಚು ಗ್ರಾಹಕರನ್ನು ಹೊಂದಿರುವ ಹೊಸನಗರ ತಾಲೂಕಿನಲ್ಲಿ ಬಿಎಸ್ಎನ್ಎಲ್ ಸಂಪರ್ಕ ವ್ಯವಸ್ಥೆ ಸಂಪೂರ್ಣ ಹಾಳಾಗಿದ್ದು, ಕಳೆದ 10 ದಿನಗಳಿಂದ ನೆಟ್‌ವರ್ಕ್ ಇಲ್ಲದೆ ಗ್ರಾಹಕರು ಪರದಾಡುವಂತಾಗಿದೆ. ಇಡೀ ಹೊಸನಗರ ತಾಲೂಕಿನಲ್ಲಿ ಬಿಎಸ್ಎನ್ಎಲ್ ಸಂಪರ್ಕ ವ್ಯವಸ್ಥೆ ಹದಗೆಟ್ಟಿರುವುದರಿಂದ ಗ್ರಾಹಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈಗಾಗಲೇ ನೂರಾರು ರೂಪಾಯಿ ಕರೆನ್ಸಿ ಹಾಕಿಸಿಕೊಂಡಿರುವ ಗ್ರಾಹಕರಿಗೆ ತಮ್ಮ ದಿನನಿತ್ಯದ ವ್ಯವಹಾರ ಮಾಡಲು ಕಿರಿಕಿರಿ ಅನುಭವಿಸುತ್ತಿದ್ದಾರೆ.ಹಣ ಪಾವತಿ ವ್ಯವಸ್ಥೆ ಮೊಬೈಲ್‌ನಲ್ಲಿ ಬಂದ ಮೇಲಂತೂ ಸಾರ್ವಜನಿಕರು ಹಣವನ್ನು ಇಟ್ಟುಕೊಳ್ಳುವುದೇ ಕಡಿಮೇಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ವ್ಯವಹಾರ ಮಾಡಲು ಕಷ್ಟವಾಗಿ ಜಗಳದಂತಹ ಘಟನೆಗಳು ಕೂಡ ಪ್ರತಿದಿನ ನಡೆಯುತ್ತಲೇ ಇವೆ. ಜೊತೆಗೆ ಮಕ್ಕಳು ಕೂಡ ತಮ್ಮ ವ್ಯಾಸಂಗವನ್ನು ಮೊಬೈಲ್‌ನಲ್ಲಿ ಕಲಿಯುವುದರಿಂದ ಆನ್‌ಲೈನ್ ಕ್ಲಾಸುಗಳಿಗೂ ತೊಂದರೆಯಾಗಿದೆ.ಅಷ್ಟೇ ಅಲ್ಲ, ಸರ್ಕಾರದ ದಾಖಲೆಗಳನ್ನು ಪಡೆಯಲು ಹೋದಾಗ ಸರ್ವರ್ ಇಲ್ಲ ಎಂಬ ಸಾಮಾನ್ಯ ಉತ್ತರ ಕಂಡುಬರುತ್ತಿದೆ.
ಹೊಸನಗರ ಭಾಗದಲ್ಲಿ ಮುಳುಗಡೆ ಸಂತ್ರಸ್ತರೇ ಹೆಚ್ಚು ಇರುವುದರಿಂದ ಮತ್ತು ಅವರೆಲ್ಲರೂ ಸಾಮಾನ್ಯವಾಗಿ ಬಿಎಸ್‌ಎನ್‌ಎಲ್ ಗ್ರಾಹಕರೇ ಆಗಿರುವುದರಿಂದ ಎಲ್ಲಾ ರೀತಿಯ ವ್ಯವಸ್ಥೆಗೆ ಕಷ್ಟಕರವಾಗಿದೆ. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಹಾರಿಕೆಯ ಉತ್ತರ ಕೊಡುತ್ತಾರೆ. ಈಗಾಗಲೇ ಬಿಎಸ್‌ಎನ್‌ಎಲ್ ಸಂಸ್ಥೆ ಮುಚ್ಚುವ ಹಂತಕ್ಕೆ ಬಂದಿದ್ದು, ಕೇಂದ್ರ ಸರ್ಕಾರ ಕೂಡ ಈ ಬಗ್ಗೆ ನಿರ್ಲಕ್ಷ್ಯ ವಹಿಸಿದೆ. ಇದರೆ ಟೆಲಿಕಾಂ ಸಂಸ್ಥೆಗಳು 5ಜಿ’ ಸೇವೆ ಆರಂಭಿಸಿದ್ದರೂ ಕೂಡ ಬಿಎಸ್‌ಎನ್‌ಎಲ್ ಮಾತ್ರ ಇನ್ನೂ 4ಜಿ ಸೇವೆಯನ್ನೇ ಆರಂಭಿಸಿಲ್ಲ ಎಂದು ಗ್ರಾಹಕರು ದೂರುತ್ತಾರೆ.
ರಿಪ್ಪನ್‌ಪೇಟೆ BSNL ಕಛೇರಿಯಲ್ಲಿ ಸಿಬ್ಬಂದಿಗಳೇ ಇಲ್ಲಾ…
ಹೊಸನಗರ ತಾಲೂಕಿನ ಪ್ರಮುಖ ಪಟ್ಟಣವಾದ ರಿಪ್ಪನ್‌ಪೇಟೆಯಲ್ಲಿ BSNL ನೆಟ್ವರ್ಕ್ ಬಗ್ಗೆ ಏನಾದರೂ ಮಾಹಿತಿಗಾಗಿ ಅಥವಾ ಸಿಮ್ ಪಡೆಯಲು,ಬದಲಾಯಿಸಲು ಕಛೇರಿಗೆ ಹೋದರೆ ಸಿಬ್ಬಂದಿಗಳೇ ಇರುವುದಿಲ್ಲ.ಈ ಬಗ್ಗೆ ಶಿವಮೊಗ್ಗದ ಪ್ರಮುಖ ಕಛೇರಿಯಲ್ಲಿ ಪ್ರಶ್ನಿಸಿದರೆ ರಿಪ್ಪನ್‌ಪೇಟೆ ಕಛೇರಿಯಲ್ಲಿ ಪ್ರಸ್ತುತ ಯಾವುದೇ ಸಿಬ್ಬಂದಿಗಳಿಲ್ಲ ಎಂಬ ಉತ್ತರ ಬರುತ್ತದೆ.ಹಾಗಾದರೆ BSNL ಗ್ರಾಹಕರು ಸಿಮ್ ಬದಲಾಯಿಸಲು , ರೀಚಾರ್ಜ್ ಮಾಡಲು ಶಿವಮೊಗ್ಗದ ಕಛೇರಿಗೆ ಎಡತಾಕಬೇಕಿದೆ.
ಕೋಟ್ಯಂತರ ರೂ ವೆಚ್ಚ ಮಾಡಿ ಕಛೇರಿಗಳನ್ನು ನಿರ್ಮಿಸಿ ಒಬ್ಬ ಸಿಬ್ಬಂದಿಗಳನ್ನು ನೇಮಿಸಲು ಸಾಧ್ಯವಾಗದೇ ಇರುವುದನ್ನು ನೋಡಿದರೆ BSNL ಇಲಾಖೆಯಲ್ಲಿರುವ ಬಿಳಿಯಾನೆಯಂತಹ ಅಧಿಕಾರಿಗಳ ಮೇಲೆ ಖಾಸಗಿ ದೂರವಾಣಿ ಕಂಪನಿಗಳು ಯಾವ ರೀತಿಯ ಪ್ರಭಾವ ಬೀರಿರಬಹುದು ಎಂದು ಅಂದಾಜಿಸಬಹುದಾಗಿದೆ.
ಒಟ್ಟಾರೆಯಾಗಿ ಚುನಾವಣೆಗೆ ಮುಂಚೆ ಈ ಭಾಗದ ನೆಟ್‌ವರ್ಕ್ ಸಮಸ್ಯೆ ಬಗೆಹರಿಸುವುದಾಗಿ ಎಲ್ಲಾ ಪಕ್ಷದ ಅಭ್ಯರ್ಥಿಗಳು ತಿಳಿಸಿದ್ದರು. ಈಗ ಈ ಕ್ಷೇತ್ರದಿಂದ ಆಯ್ಕೆಯಾದ ಬೇಳೂರು ಗೋಪಾಲಕೃಷ್ಣ ಅವರು ಈ ಬಗ್ಗೆ ಸಮಸ್ಯೆಯನ್ನು ಬಗೆಹರಿಸುವುದಾಗಿ ತಿಳಿಸಿದ್ದಾರೆ. ಈ ಕೂಡಲೇ ಹೊಸನಗರ ಸೇರಿದಂತೆ ಸಾಗರ ಹಾಗೂ ಅನೇಕ ಸುತ್ತಮುತ್ತಲ ಗ್ರಾಮಗಳಲ್ಲಿ ನೆಟ್‌ವರ್ಕ್ ತೊಂದರೆಯನ್ನು ಬಗೆಹರಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.