ರಿಪ್ಪನ್‌ಪೇಟೆ : ಗ್ರಾಪಂ ಮತ್ತು ಗುತ್ತಿಗೆದಾರನ ನಿರ್ಲಕ್ಷ್ಯದಿಂದ ತೆರೆದ ಬಾವಿಗೆ ಬಿದ್ದ ಹಸು
ರಿಪ್ಪನ್‌ಪೇಟೆ : ಗ್ರಾಪಂ ಅಧಿಕಾರಿಗಳು ಹಾಗೂ ಗುತ್ತಿಗೆದಾರನ ನಿರ್ಲಕ್ಷ್ಯದಿಂದ ಹಸುವೊಂದು ಬಾವಿಗೆ ಬಿದ್ದು ನರಳಾಡಿದ ಘಟನೆ ಚೌಡೇಶ್ವರಿ ಬಡಾವಣೆಯಲ್ಲಿ ನಡೆದಿದೆ.
ಚೌಡೇಶ್ವರಿ ಬೀದಿಯ ಅಂಬೇಡ್ಕರ್ ಸಭಾ ಭವನದ ಮುಂಭಾಗದಲ್ಲಿ ಗ್ರಾಪಂ ವತಿಯಿಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ತೆರೆದ ಬಾವಿ ನಿರ್ಮಾಣ ಕಾಮಗಾರಿಯನ್ನು ಕೈಗೊಳ್ಳಲಾಗಿತ್ತು.
ಚೌಡೇಶ್ವರಿ ಬೀದಿಯ ಅಂಬೇಡ್ಕರ್ ಸಭಾ ಭವನದ ಮುಂಭಾಗದಲ್ಲಿ ತೆರೆದ ಪ್ರದೇಶದಲ್ಲಿ ಬಾವಿ ನಿರ್ಮಿಸುವಾಗ ತೆಗೆದುಕೊಳ್ಳಬೇಕಾದ ಯಾವುದೇ ಮುಂಜಾಗ್ರತೆಯನ್ನು ತೆಗೆದುಕೊಳ್ಳದೆ ಗುತ್ತಿಗೆದಾರ ಹಾಗೂ ಗ್ರಾಪಂ ಆಡಳಿತ ಮಂಡಳಿ ನಿರ್ಲಕ್ಶ್ಯ ವಹಿಸಿದ್ದರಿಂದ ಬಾವಿಗೆ ಹಸುವೊಂದು ಬಿದ್ದು ನರಳಾಡುತಿತ್ತು.ಇದನ್ನು ಗಮನಿಸಿದ ಸ್ಥಳೀಯರು ಕ್ರೇನ್ ಸಹಕಾರದಿಂದ ಹಸುವನ್ನು ಮೇಲಕ್ಕೆತ್ತಿದ್ದಾರೆ.
ಯಾವುದೇ ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳದೇ ಬಾವಿ ನಿರ್ಮಾಣಕ್ಕೆ ಮುಂದಾಗಿರುವ ಗುತ್ತಿಗೆದಾರ ಹಾಗೂ ಗ್ರಾಪಂ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಕೋಟೆ ಲೂಟಿಯಾದ ಮೇಲೆ ಬಾಗಿಲು ಹಾಕಿದರು ಎಂಬ ಗಾದೆಯಂತೆ ಘಟನೆ ನಡೆದ ಮೇಲೆ ತೆರೆದ ಬಾವಿ ಸುತ್ತಲೂ ಬೇಲಿ ಹಾಕಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತಿದ್ದಾರೆ.