ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ನಿರ್ಮಾಣ ಹಂತದ ಸಮುದಾಯ ಭವನದಲ್ಲಿ ಇಂದು ಬೆಳಿಗ್ಗೆ ಜೋಡಿ ಕೊಲೆಯಾಗಿದ್ದು ಹಣಕ್ಕಾಗಿ ಕೊಲೆಯಾಗಿರಬಹುದು ಎಂದು ಅಂದಾಜಿಸಲಾಗಿತ್ತು.
ಈ ಘಟನೆ ಬಗ್ಗೆ ಶಿವಮೊಗ್ಗ ಎಸ್ ಪಿ ಮಿಥುನ್ ಕುಮಾರ್ ನೀಡಿದ ಮಾಹಿತಿ ಅಚ್ಚರಿಗೆ ಕಾರಣವಾಗಿದೆ ಮಧ್ಯಾಹ್ನದ ಅಡಿಗೆಯನ್ನು ಸಂಜೆ ನೀಡಿದ್ದಕ್ಕೆ ರಾಜಣ್ಣ ಎಂಬಾತನಿಗೆ ಇಬ್ಬರು ವ್ಯಕ್ತಿಗಳು ಮನಸ್ಸೊ ಇಚ್ಚೆ ಥಳಿಸಿದ್ದಾರೆ ಇದರಿಂದ ಕುಪಿತಗೊಂಡ ಆರೋಪಿ ರಾಜಣ್ಣ ಮಧ್ಯರಾತ್ರಿ ಹಲ್ಲೆ ಮಾಡಿದ್ದ ಇಬ್ಬರನ್ನು ಅಮಾನುಷವಾಗಿ ಹತ್ಯೆಗೈದಿದ್ದಾನೆ.
ಘಟನೆಯ ವಿವರ :
ತೀರ್ಥಹಳ್ಳಿಯ ವಿಶ್ವಕರ್ಮ ಭವನ ನಿರ್ಮಾಣ ಕೆಲಸಕ್ಕೆ ದಾವಣಗೆರೆ ಮೂಲದ ಬೀರೇಶ್ (35), ಮಂಜುನಾಥ್ (46) ಮತ್ತು ರಾಜಣ್ಣ ಎಂಬುವರು12 ದಿನಗಳ ಹಿಂದೆ ಬಂದಿದ್ದಾರೆ.
ರಾಜಣ್ಣ, ಬೀರೇಶ್, ಮಂಜುನಾಥ್ ಜೊತೆ ಇತರೆ ಇಬ್ಬರು ಸೇರಿ ಐದು ಜನ ಈ ಭವನ ನಿರ್ಮಾಣಕ್ಕೆ ಬಂದಿದ್ದರು. ಇವರಿಗೆಲ್ಲ ರಾಜಣ್ಣ ಅಡಿಗೆ ಮಾಡುವವನಾಗಿದ್ದನು.
ನಿನ್ನೆ ಬೆಳಿಗ್ಗೆ ಭವನದ ಪಕ್ಕದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ತಯಾರಿಸಿದ ಇಡ್ಲಿ ಈ ಕಾರ್ಮಿಕರಿಗೆ ಬಂದಿತ್ತು. ಮದ್ಯಾಹ್ನದ ಹೊತ್ತಿಗೆ ರಾಜಣ್ಣ ಅಡಿಗೆ ಮಾಡಿದ್ದನು. ಈ ಅಡಿಗೆ ರಾತ್ರಿಯ ವೇಳೆ ಉಳಿದಿತ್ತು.ರಾತ್ರಿಗೆ ಅದನ್ನೇ ಊಟ ಮಾಡುವಂತೆ ಮಂಜಣ್ಣ ಮತ್ತು ಬೀರೇಶ್ ಗೆ ರಾಜಣ್ಣ ಹೇಳಿದ್ದಾನೆ.
ಈ ವಿಚಾರಕ್ಕೆ ಬೀರೇಶ್ ಮತ್ತು ಮಂಜುನಾಥ್ ಸಿಟ್ಟಾಗಿ ಮಧ್ಯಾಹ್ನದ ಅಡಿಗೆ ನಾವ್ಯಾಕೆ ತಿನ್ನಬೇಕು ಎಂದು ಗಲಾಟೆ ಮಾಡಿ ಇಬ್ಬರು ಸೇರಿ ರಾಜಣ್ಣನಿಗೆ ಎಳೆದಾಡಿ ಹೊಡೆದಿದ್ದಾರೆ.
ತನ್ನ ಮೇಲೆ ನಡೆದ ಹಲ್ಲೆಯಿಂದ ಕುಪಿತಗೊಂಡಿದ್ದ ರಾಜಣ್ಣ ಊಟ ಮಾಡಿ ಮಲಗಿದ್ದ ಬೀರೇಶ್ ಮತ್ತು ಮಂಜಣ್ಣನ ಮೇಲೆ ಪಿಕಾಸಿಯಿಂದ ದಾಳಿ ನಡೆಸಿದ್ದಾನೆ.ಭವನ ಕೆಳಗಡೆ ಮಲಗಿದ್ದ ಬೀರೇಶ್ ಗೆ ಮತ್ತು ಕಟ್ಟಡದ ಮೇಲ್ಚಾವಣಿ ಮೇಲೆ ಮಲಗಿದ್ದ ಮಂಜುನಾಥ್ ತಲೆಗೆ ಹೊಡೆದಿದ್ದಾನೆ. ಈ ಹಲ್ಲೆಯಿಂದ ಇಬ್ಬರು ಸ್ಥಳದಲ್ಲಿಯೇ ಸಾವು ಕಂಡಿದ್ದಾರೆ.
ಈಗ ಬೀರೇಶ್ ಪೊಲೀಸರ ಅತಿಥಿಯಾಗಿದ್ದು ಕ್ಷುಲ್ಲಕ ಕಾರಣಕ್ಕೆ ಎರಡು ಜೀವಗಳ ಬಲಿ ಪಡೆದು ಕಂಬಿ ಎಣಿಸುವ ಪರಿಸ್ಥಿತಿ ಬಂದೊದಗಿದೆ.