ಪಿಯು ಪರೀಕ್ಷೆಯಲ್ಲಿ 96.17% ಅಂಕ ಪಡೆದ ಸರ್ಕಾರಿ ಕಾಲೇಜಿನ ವಿದ್ಯಾರ್ಥಿನಿಗೆ ಜಿ ಆರ್ ಕೆ ಮೂರ್ತಿ ಟ್ರಸ್ಟ್ ವತಿಯಿಂದ ಸನ್ಮಾನ
ರಿಪ್ಪನ್‌ಪೇಟೆ : ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ ಅಧ್ಬುತ ಸಾಧನೆ ಮಾಡಿದ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕುಮಾರಿ ಜಯಶ್ರೀ ಪಿ ರವರಿಗೆ ಜಿಆರ್ ಕೆ ಮೂರ್ತಿ ಟ್ರಸ್ಟ್ ಹಾಗೂ ಪೋಸ್ಟ್ ಮ್ಯಾನ್ ಸುದ್ದಿ ಬಳದಿಂದ ಸನ್ಮಾನಿಸಿ ಗೌರವಿಸಲಾಯಿತು.
ಪಟ್ಟಣದ ಶಿವಮೊಗ್ಗ ರಸ್ತೆಯ ಜಯಪ್ರಕಾಶ್ ಹೊಟೇಲ್ ಮಾಲೀಕರಾದ ಪಾಂಡುರಂಗ ಮತ್ತು ನಿರ್ಮಲ ದಂಪತಿಗಳ ಪುತ್ರಿಯಾದ ಜಯಶ್ರೀ ಪಿ ವಿಜ್ಞಾನ ವಿಭಾಗದಲ್ಲಿ ತಾಲೂಕಿನಲ್ಲಿಯೇ ಅತಿ ಹೆಚ್ಚು ಅಂಕ ಗಳಿಸಿದ್ದಾಳೆ.
ಕುಮಾರಿ ಜಯಶ್ರೀ ಸರ್ಕಾರಿ ಕಾಲೇಜಿನಲ್ಲಿ ಓದಿ ಯಾವುದೇ ಟ್ಯೂಷನ್ ಮತ್ತು ಕೋಚಿಂಗ್ ಕ್ಲಾಸ್ ಗಳನ್ನು ಪಡೆಯದೇ ವಿಜ್ಞಾನ ವಿಭಾಗದಲ್ಲಿ 600ಕ್ಕೆ 577 ಅಂಕ ಪಡೆಯುವ ಮೂಲಕ ಸರ್ಕಾರಿ ಕಾಲೇಜು ಎಂದು ಮೂಗು ಮುರಿಯುವಂತಹ ಪೋಷಕರುಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಸೆಡ್ಡು ಹೊಡೆಯುವುದರ ಮೂಲಕ ಸಾಧಿಸುವ ಛಲವೊಂದಿದ್ದರೆ ಅಸಾಧ್ಯವಾದುದು ಯಾವುದು ಇಲ್ಲ ಸಾಬೀತುಪಡಿಸಿದ್ದಾಳೆ.
ಈ ಸಂಧರ್ಭದಲ್ಲಿ ಪೋಸ್ಟ್ ಮ್ಯಾನ್ ಸುದ್ದಿ ಬಳದೊಂದಿಗೆ ಮಾತನಾಡಿದ ಕು|| ಜಯಶ್ರೀ ಪೋಷಕರ ಹಾಗೂ ಪ್ರಾಚಾರ್ಯರು ಮತ್ತು ಉಪನ್ಯಾಸಕರ ಸಹಕಾರ, ಮಾರ್ಗದರ್ಶನದಿಂದ ಉತ್ತಮ ಅಂಕಗಳನ್ನು ಗಳಿಸಲು ಸಾಧ್ಯವಾಯಿತು.ಗ್ರಾಮೀಣ ಪ್ರದೇಶದ ಕನ್ನಡ ಮಾದ್ಯಮದಲ್ಲಿ ಓದಿದ ವಿದ್ಯಾರ್ಥಿಗಳು ವಿಜ್ಞಾನ ವಿಭಾಗವನ್ನು ಆಯ್ಕೆ ಮಾಡಿಕೊಳ್ಳಲು ಹಿಂಜರಿಯುವ ಅವಶ್ಯಕತೆ ಇಲ್ಲ ಆಸಕ್ತಿಯಿಂದ ಸರಿಯಾಗಿ ಎಲ್ಲಾ ಪ್ರಾಯೋಗಿಕ ತರಗತಿಗಳಲ್ಲಿ ಕಡ್ಡಾಯವಾಗಿ ಹಾಜರಿದ್ದಲ್ಲಿ ಮನೆಯಲ್ಲಿ ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಕಠಿಣ ಶ್ರಮ ಪಡೆಯುವ ಅಗತ್ಯವಿಲ್ಲ ಎಂದು ಮುಂದೆ ಎಂಬಿಬಿಎಸ್ ಪದವಿ ಪಡೆದು ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸುವ ಆಸಕ್ತಿ ಹೊಂದಿದ್ದೇನೆ ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಜಿ ಆರ್ ಕೆ ಮೂರ್ತಿ ಟ್ರಸ್ಟ್ ನ ಜಿ ಆರ್ ಗೋಪಾಲಕೃಷ್ಣ ,ಹಿರಿಯ ಪತ್ರಕರ್ತರಾದ ಸಬಾಸ್ಟಿಯನ್ ಮ್ಯಾಥ್ಯೂಸ್, ಪೋಸ್ಟ್ ಮ್ಯಾನ್ ನ್ಯೂಸ್ ಸಂಪಾದಕ ರಫ಼ಿ ರಿಪ್ಪನ್‌ಪೇಟೆ ಹಾಗೂ ಟ್ರಸ್ಟ್ ನ ಪ್ರಮುಖರಾದ ಉಲ್ಲಾಸ್ , ರಮೇಶ್ ಫ್ಯಾನ್ಸಿ ,ಖಲೀಲ್ ,ಮಾಲತೇಶ್, ವಿಜಯ್ ಈಡಿಗ , ಗಣೇಶ್ ದೂನ,ಮಧುಸೂಧನ್ ಹಾಗೂ ಇನ್ನಿತರರಿದ್ದರು.