ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕವಾಗಿರುವ ಡ್ರಗ್ಸ್ ದಂಧೆ ಇದೀಗ ಮಲೆನಾಡಿಗೂ ವ್ಯಾಪಿಸಿದೆ.
ಮಂಗಳೂರಿನಿಂದ ಮಾದಕ ದ್ರವ್ಯಗಳನ್ನು ತಂದು ಸಾಗರದಲ್ಲಿ ಮಾರಲು ಮಂದಾಗಿದ್ದ ತಂಡವೊಂದನ್ನು ಸಾಗರ ನಗರ ಠಾಣೆ ಪೊಲೀಸರು ಹತ್ತಿಕ್ಕಿದ್ದಾರೆ. ಇಬ್ಬರು ಆರೋಪಿಗಳನ್ನು ಬಂಧಿಸಿದ ಪೊಲೀಸರಿಗೆ ಇದರ ಹಿಂದಿರುವ ಒಂದು ಕೊಲೆ ಯತ್ನದ ಪ್ಲ್ಯಾನ್ ಕೂಡಾ ಬಯಲಾಗಿದೆ.
ಮಂಗಳೂರಿನಿಂದ ಮಾದಕ ವಸ್ತು ತಂದು ಸಾಗರದಲ್ಲಿ ಮಾರಾಟಕ್ಕೆ ಯತ್ನಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಸಾಗರದ ಅಣಲೆಕೊಪ್ಪ ಬಳಿ ಪೊಲೀಸರು ದಾಳಿ ಸಂಘಟಿಸಿದ್ದರು. ಈ ವೇಳೆ, ಸೃಜನ್ ಶೆಟ್ಟಿ, ತಿಲಕ್ ಎಂಬಿಬ್ಬರನ್ನು ಬಂಧಿಸಲಾಗಿದೆ. ಬಂಧಿತರಿಂದ 1 ಕೆ.ಜಿ. ಮಾದಕ ವಸ್ತು, 4 ಮೊಬೈಲ್, ಸ್ವಿಪ್ಟ್ ಡಿಜೈರ್ ಕಾರು, ಕಾರಿನಲ್ಲಿದ್ದ 8 ಲಾಂಗ್ ವಶಕ್ಕೆ ಪಡೆಯಲಾಗಿದೆ.
ಬಂಧಿತ ಸೃಜನ್ ಶೆಟ್ಟಿ ವಿಚಾರಣೆ ನಂತರ ಓರ್ವನ ಕೊಲೆ ಸಂಚು ಕೂಡಾ ಬಯಲಾಗಿದೆ. ಸಹಚರರ ಜೊತೆ ಸೇರಿ ವ್ಯಕ್ತಿಯೊಬ್ಬನ ಹತ್ಯೆಗೆ ಸೃಜನ್ ಶೆಟ್ಟಿ ಸಂಚು ರೂಪಿಸಿದ್ದ ಎನ್ನಲಾಗಿದೆ. ಕೊಲೆ ಮಾಡುವ ಉದ್ದೇಶದಿಂದ ಲಾಂಗ್ ಇಟ್ಟುಕೊಂಡಿರುವುದು ಪೊಲೀಸರ ವಿಚಾರಣೆಯಿಂದ ತಿಳಿದುಬಂದಿದೆ.
ಆರೋಪಿಗಳ ಬಂಧನ ಮತ್ತು ಲಾಂಗ್‌ಗಳನ್ನು ವಶಪಡಿಸಿಕೊಂಡಿರುವುದರಿಂದ ಕೊಲೆ ಸಂಚು ವಿಫಲಗೊಂಡಂತಾಗಿದೆ. ಆದರೆ, ಆರೋಪಿಗಳು ಯಾರನ್ನು ಕೊಲೆ ಮಾಡಲು ಮುಂದಾಗಿದ್ದರು ಎಂಬ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಪೊಲೀಸರು
ಬಂಧಿತ ಆರೋಪಿಗಳನ್ನು ಸಾಗರ ನ್ಯಾಯಾಲಯಕ್ಕೆ ಒಪ್ಪಿಸಿದ ಪೊಲೀಸರು ಇದೀಗ ಹೆಚ್ಚಿನ ವಿಚಾರಣೆಗಾಗಿ ಸೃಜನ್ ಶೆಟ್ಟಿಯನ್ನು ವಶಕ್ಕೆ ಪಡೆಯಲಿದ್ದಾರೆ.