Headlines

ತೀರ್ಥಹಳ್ಳಿ : ಹನಿಟ್ರ್ಯಾಪ್ ಮೂಲಕ ಸೆರೆ ಸಿಕ್ಕ ಒಂಟಿ ಸಲಗ – ಬಂಡೀಪುರ ಅಭಯಾರಣ್ಯಕ್ಕೆ ಪುಂಡಾನೆಯ ರವಾನೆ|elephant

ತೀರ್ಥಹಳ್ಳಿ : ಪಟ್ಟಣದೊಳಗೆ ನುಗ್ಗಿ ಆತಂಕ ಮೂಡಿಸಿದ್ದ ಕಾಡಾನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.  ತಾಲೂಕಿನ ದೇವಂಗಿಯ ಮಳೂರು ಕಾಡಿನಲ್ಲಿ ಆನೆ ಸೆರೆ ಹಿಡಿಯಲಾಯಿತು.




ಗುರುವಾರ ರಾತ್ರಿ ಕಾರ್ಯಾಚರಣೆ ನಡೆಸಿದ ಸಕ್ರೆಬೈಲು ಬಿಡಾರದ ಸಿಬ್ಬಂದಿ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಕಾಡಾನೆಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಆನೆ ಕಾಣಿಸಿಕೊಳ್ಳುತ್ತಿದ್ದಂತೆ ಅರಣ್ಯ ಇಲಾಖೆ ಸಿಬ್ಬಂದಿ ಆನೆಗೆ ಚುಚ್ಚು ಮದ್ದಿನ ಇಂಜೆಕ್ಷನ್ ಡಾರ್ಟ್ ಮಾಡಿ ಸೆರೆ ಹಿಡಿದಿದ್ದಾರೆ.


ಡಿಸೆಂಬರ್ ತಿಂಗಳಲ್ಲಿ ಈ ಕಾಡಾನೆ ತೀರ್ಥಹಳ್ಳಿ ಪಟ್ಟಣದೊಳಗೆ ನುಗ್ಗಿತ್ತು. ವಿವಿಧೆಡೆ ಸಂಚರಿಸಿ ಜನರಲ್ಲಿ ಆತಂಕ ಮೂಡಿಸಿತ್ತು. ಕಾಡಾನೆ ಸೆರೆ ಹಿಡಿಯಬೇಕೆಂಬ ಒತ್ತಡವಿತ್ತು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಆನೆಯನ್ನು ಕಡೆಗೂ ಸೆರೆ ಹಿಡಿದಿದ್ದಾರೆ.




ಕಾಡಾನೆ ಸೆರೆಗೆ ಸಕ್ರೆಬೈಲು ಬಿಡಾರದ ಹೆಣ್ಣಾನೆಯನ್ನು ಬಳಕೆ ಮಾಡಿಕೊಳ್ಳಲಾಗಿತ್ತು. ಸಕ್ರೆಬೈಲಿನ ಭಾನುಮತಿ ಆನೆಯನ್ನು ಕಾಡಿನಲ್ಲಿ ಕಟ್ಟಿ ಹಾಕಿ, ಕಾಡಾನೆಯನ್ನು ಸೆಳೆಯುವ ಹನಿಟ್ರ್ಯಾಪ್ ತಂತ್ರವನ್ನು ಬಳಕೆ ಮಾಡಲಾಗಿತ್ತು. ಎರಡು ದಿನದ ಹಿಂದೆ ಭಾನುಮತಿಯನ್ನು ಗಮನಿಸಿ ಕಾಡಾನೆ ಹತ್ತಿರಕ್ಕೆ ಬಂದಿತ್ತು. ಅಷ್ಟು ಹೊತ್ತಿಗೆ ಅರಣ್ಯ ಇಲಾಖೆ ಸಿಬ್ಬಂದಿಯನ್ನು ಕಂಡು ಕಾಡಿನೊಳಗ್ಗೆ ಪರಾರಿಯಾಗಿತ್ತು. ಕಳೆದ ರಾತ್ರಿ ಪುನಃ ಭಾನುಮತಿಯನ್ನು ಅರಸಿ ಬಂದ ಕಾಡಾನೆಗೆ ಅರಣ್ಯ ಇಲಾಖೆ ಸಿಬ್ಬಂದಿ ಡಾರ್ಟ್ ಮಾಡಿದ್ದಾರೆ.

ಬಂಡೀಪುರ ಅಭಯಾರಣ್ಯಕ್ಕೆ  ಆನೆಯನ್ನು ಕರೆದೋಯ್ಯಲಾಗಿದೆ. ಸದ್ಯ ಕಾಡಾನೆ ಸೆರೆಯಾಗಿರುವುದರಿಂದ ತೀರ್ಥಹಳ್ಳಿಯ ಜನರು ನಿಟ್ಟುಸಿರು ಬಿಟ್ಟಿದ್ದಾರೆ.



Leave a Reply

Your email address will not be published. Required fields are marked *