ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಉದ್ಯೋಗಿಗಳು ಬೇಕಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಜಾಹೀರಾತು ಓಡಾಡುತ್ತಿದೆ. ಇದನ್ನು ನಂಬಿ ಯಾರಾದರೂ ಅರ್ಜಿ ಸಲ್ಲಿಸಿದ್ದರೆ, ಸಲ್ಲಿಸಬೇಕು ಎಂದಿದ್ದರೆ ಹುಷಾರಾಗಿರಿ. ಏಕೆಂದರೆ ಇದು ನಕಲಿ ಪ್ರಕಟಣೆ ಎಂಬ ಸಂಗತಿ ಗೊತ್ತಾಗಿದೆ. ಈ ಬಗ್ಗೆ ಸಾರ್ವಜನಿಕರು ಎಚ್ಚರವಹಿಸಬೇಕೆಂದು ಜಿಲ್ಲಾ ರಕ್ಷಣಾಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಂಡಿದ್ದು, ವಿಮಾನ ನಿಲ್ದಾಣದಲ್ಲಿ ಏರ್ ಹೋಸ್ಟೆಸ್, ಬಿಸಿನೆಸ್ ಡೆವಲೆಪ್‍ಮೆಂಟ್ ಮ್ಯಾನೇಜರ್, ಏರ್‌ಲೈನ್ ಎಕ್ಸಿಕ್ಯೂಟಿವ್, ಸೆಕ್ಯೂರಿಟಿ ಗಾರ್ಡ್, ಹೆಲ್ಪರ್ಸ್, ಕ್ಲೀನರ್ಸ್, ಟೀಂ ಮೆಂಬರ್ಸ್ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಈ ಹುದ್ದೆಗಳಿಗೆ ವಿದ್ಯಾರ್ಹತೆ ಹಾಗೂ ವಯೋಮಿತಿಯನ್ನೂ ನೀಡಲಾಗಿದೆ. ಎಸ್‍ಎಸ್‍ಎಲ್‍ಸಿ, ಪಿಯುಸಿ, ಪದವಿ ಮತ್ತು ಡಿಪ್ಲೋಮಾ ಆದ 40 ವರ್ಷ ಒಳಗಿನ ಯುವಕ-ಯುವತಿಯರು ಬೇಕಾಗಿದ್ದಾರೆ ಎಂದು ಇ-ಮೇಲ್‌ನ ನಕಲಿ ಐಡಿ ಮೂಲಕ ಜಾಹೀರಾತು ನೀಡಲಾಗುತ್ತಿದೆ.
ಉದ್ಯೋಗವಕಾಶಕ್ಕಾಗಿ ಹಾತೊರೆಯುತ್ತಿರುವವರನ್ನು ಗುರಿಯಾಗಿಸಿಕೊಂಡು ಇಂತಿಷ್ಟು ಹಣ ಕಟ್ಟಿ ಎನ್ನುವ ಭೋಗಸ್ ಕಂಪನಿಗಳು ಶಿವಮೊಗ್ಗ ನಗರದಲ್ಲಿ ತನ್ನದೆ ನೆಟ್ವರ್ಕ್ ನಲ್ಲಿ ಕೆಲಸ ಮಾಡುತ್ತಿವೆ. ಅಂತಹ ಕಂಪನಿಗಳ ಬಗ್ಗೆ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಇನ್ನೂ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದ ಅಧಿಕಾರಿ ವಲಯದ ಮೂಲಗಳ ಪ್ರಕಾರ, ಇದುವರೆಗೂ ಏರ್ಪೋರ್ಟ್ಗೆ ಸಂಬಂಧಿಸಿದ ಉದ್ಯೋಗವಕಾಶಗಳ ಬಗ್ಗೆ ಪ್ರಕಟಣೆಯು ಸಹ ಹೊರಬಿದ್ದಿಲ್ಲ.