ತೀರ್ಥಹಳ್ಳಿ : ಫೆ 23 ಮತ್ತು 24 ರಂದು ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಂಚರತ್ನ ಯಾತ್ರೆ ನಡೆಯಲಿದ್ದು ಫೆ.24 ರ ಶುಕ್ರವಾರ ಶ್ರೀ ಕ್ಷೇತ್ರ ಹೊಂಬುಜಕ್ಕೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಭೇಟಿ ನೀಡಲಿದ್ದಾರೆ.
ಫೆ.23 ರಂದು ಹುಂಚದಕಟ್ಟೆ ಗ್ರಾಮದಲ್ಲಿ ರಾತ್ರಿ ಗ್ರಾಮ ವಾಸ್ತವ್ಯ ಹೂಡಲಿರುವ ಮಾಜಿ ಸಿಎಂ ಕುಮಾರಸ್ವಾಮಿ ಶುಕ್ರವಾರ ಬೆಳಿಗ್ಗೆ ನಿಟ್ಟೂರು ನಾರಾಯಣ ಗುರು ಮಠಕ್ಕೆ ಭೇಟಿ ನೀಡಿ ನಂತರ ಹೊಂಬುಜಾ ಶ್ರೀಕ್ಷೇತ್ರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ.
ಕುಮಾರಸ್ವಾಮಿಯವರ ಪಂಚರತ್ನ ರಥಯಾತ್ರೆ ಸಾಗುವುದು ಹೇಗೆ?
ಫೆ.23 ರಂದು ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಪಂಚರತ್ನ ಯಾತ್ರೆ ನಡೆಯಲಿದ್ದು ನಂತರ ಗಾಜನೂರು,ಸಕ್ರೆಬೈಲು ಮಾರ್ಗವಾಗಿ ಸಂಜೆ ಕೋಣಂದೂರು ಪಟ್ಟಣದಲ್ಲಿ ಪಂಚರತ್ನ ರಥಯಾತ್ರೆಯ ಸಭೆ ನಡೆಯಲಿದೆ ನಂತರ ಹುಂಚದಕಟ್ಟೆ ಗ್ರಾಮದಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ತಾಲೂಕಿನ ಹುಂಚದ ಕಟ್ಟೆಯಿಂದ ಹೊರಟು ಹುಂಚ ಪದ್ಮಾವತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ನಂತರ ಆರಗದಲ್ಲಿ ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದೆ. 12:30 ರಿಂದ ತೀರ್ಥಹಳ್ಳಿಯಲ್ಲಿ ರೋಡ್ ಶೋ ನಡೆಯಲಿದ್ದು ಮಧ್ಯಾಹ್ನ 1 ಗಂಟೆಗೆ ಪಟ್ಟಣದ ಟಿಎಪಿಎಂಎಸ್ ಹಾಲ್ ನಲ್ಲಿ ಸಾರ್ವಜನಿಕರ ಸಭೆ ನಡೆಯಲಿದೆ. ತೀರ್ಥಹಳ್ಳಿಯ ಭೀಮನ ಕಟ್ಟೆ ಮಠದ ಗುರುಗಳನ್ನ ಮಧ್ಯಾಹ್ನ 3 ಗಂಟೆಗೆ ಭೇಟಿಯಾಗಲಿದ್ದು ನಂತರ 4:30 ಕ್ಕೆ ಮೇಗರವಳ್ಳಿಯ ಎಲೆ ಚುಕ್ಕಿ ತೋಟದ ವೀಕ್ಷಣೆ ಮತ್ತು ಸಭೆ ನಡೆಸಲಿದ್ದಾರೆ. ಸಂಜೆ 5:00ಗೆ ಹೆಗ್ಗೋಡಿನಲ್ಲಿ ಸಭೆ ಹಾಗೂ ಆರು ಗಂಟೆಗೆ ಕಮ್ಮರಡಿಯಲ್ಲಿ ಸಭೆ ನಡೆದು ಶೃಂಗೇರಿಗೆ ಹೊರಡಲಿದ್ದಾರೆ.
ಪಂಚರತ್ನ ರಥಯಾತ್ರೆಯಲ್ಲಿ ಯಾರ್ಯಾರು ಇರಲಿದ್ದಾರೆ
ಮಾಜಿ ಮುಖ್ಯಮಂತ್ರಿಗಳಾದ ಎಚ್ ಡಿ ಕುಮಾರಸ್ವಾಮಿ, ಸಿಎಂ ಇಬ್ರಾಹಿಂ, ಶಾರದಾ ಪುರ್ಯ ನಾಯಕ್,ಎಂ ಶ್ರೀಕಾಂತ್, ಸೇರಿದಂತೆ ಹಲವು ಮುಖಂಡರು ಭಾಗಿಯಾಗಲಿದ್ದಾರೆ.
ಈ ಬಗ್ಗೆ ತೀರ್ಥಹಳ್ಳಿ ಪಟ್ಟಣದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಛೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ತೀರ್ಥಹಳ್ಳಿ ಜೆಡಿಎಸ್ ಅಭ್ಯರ್ಥಿ ಯಡೂರ್ ರಾಜಾರಾಮ್ ಪಂಚರತ್ನ ಯಾತ್ರೆ ಬಗ್ಗೆ ಮಾಹಿತಿ ನೀಡಿದರು.
ನಂತರ ಮಾತನಾಡಿದ ಅವರು ಕ್ಷೇತ್ರದಲ್ಲಿ ಹಾಗೂ ರಾಜ್ಯದಲ್ಲಿ ಈ ಬಾರಿ ಜನರು ಬದಲಾವಣೆ ಬಯಸಿದ್ದಾರೆ. ಅಭಿವೃದ್ಧಿ ಎಂಬ ಹೆಸರಿನಲ್ಲಿ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ. ತೀರ್ಥಹಳ್ಳಿಯಲ್ಲಿ ಒಂದು ಒಳ್ಳೆಯ ಆಸ್ಪತ್ರೆ ಇಲ್ಲ. ರಸ್ತೆಗಳು ಆಗಿದ್ದರೂ ಸಹ ತೀರಾ ಕಳಪೆ ಕಾಮಗಾರಿಗಳು ಆಗಿವೆ. ಭಾರತಿಪುರದ ಟರ್ನಿಂಗ್ ನಲ್ಲಿ ಫ್ಲೈ ಓವರ್ ಅವಶ್ಯಕತೆ ಇತ್ತಾ?ತೀರ್ಥಹಳ್ಳಿಯಲ್ಲಿ ಈ ಬಾರಿ ಹಣವಂತರ ಹಾಗೂ ರೈತರ ನಡುವಿನ ಚುನಾವಣೆ ಆಗಲಿದೆ ಎಂದು ಹೇಳಿದರು.
ನಾನೊಬ್ಬ ರೈತ ಕುಟುಂಬದಿಂದ ಬಂದಿರುವಂತಹ ವ್ಯಕ್ತಿ. ಚಿಕ್ಕ ಚಿಕ್ಕ ಸಭೆ ಸಮಾರಂಭಗಳಲ್ಲಿ ಬಾಗಿನದ ರೀತಿಯಲ್ಲಿ ಬೇರೆ ಬೇರೆ ರೀತಿಯ ನಾಣ್ಯಗಳು ಚಲಾವಣೆಗೆ ಬರುತ್ತಿದೆ. ಆದರೆ ನಮ್ಮ ಬಳಿ ಆ ರೀತಿಯ ವ್ಯವಸ್ಥೆ ಇಲ್ಲ. ಇತ್ತೀಚಿಗೆ ಗಾಜನೂರು ಬಳಿ ಒಬ್ಬ ಆಟೋ ಡ್ರೈವರ್ ತನ್ನ ದುಡಿಮೆಯಲ್ಲಿ 500 ರೂಪಾಯಿಗಳನ್ನು ನನಗೆ ನೀಡಿ ಠೇವಣಿ ಕಟ್ಟಲು ಇಟ್ಟುಕೊಳ್ಳಲು ಹೇಳಿದ್ದರು. ಅದೇ ರೀತಿ ಮೇಗರವಳ್ಳಿಯಲ್ಲೂ ಸಹ ಹತ್ತನೇ ತರಗತಿ ಓದುತ್ತಿರುವ ಮುಸ್ಲಿಂ ಯುವತಿಯೊಬ್ಬಳು ತನ್ನ ತಂದೆ ತಾಯಿ ಕೊಟ್ಟಂತಹ ಹಣವನ್ನು ಶೇಖರಣೆ ಮಾಡಿ ಅಣ್ಣ ನೀವು ಇಟ್ಟುಕೊಳ್ಳಿ ಎಂದು ನನಗೆ ಕೊಟ್ಟಿದ್ದಳು. ಇದೇ ರೀತಿ ಕ್ಷೇತ್ರಾದ್ಯಂತ ಈ ಬಾರಿ ಹೊಸ ಹುಡುಗನನ್ನ ಬೆಳೆಸಬೇಕೆಂಬ ಜನಾಭಿಪ್ರಾಯ ಎಲ್ಲರಲ್ಲೂ ಇದೆ ಎಂದರು.
ಕಿಮ್ಮನೆ ರತ್ನಾಕರ್ ಮತ್ತು ಆರಗ ಜ್ಞಾನೇಂದ್ರ ಸರಿ ಸುಮಾರು 40 ವರ್ಷಗಳ ಕಾಲ ರಾಜಕಾರಣವನ್ನು ಮಾಡಿದ್ದಾರೆ. ಇದೊಂದು ಬಾರಿ ಅವರಿಬ್ಬರನ್ನು ಬದಲಾಯಿಸಬೇಕೆಂಬ ಜನಾಭಿಪ್ರಾಯ ಎಲ್ಲರಲ್ಲೂ ಇದೆ. ತೀರ್ಥಹಳ್ಳಿ ಕ್ಷೇತ್ರದಲ್ಲಿ ಹಲವು ಕಾಮಗಾರಿಗಳು ಬಾಕಿ ಉಳಿದಿದೆ. ಪಟ್ಟಣದಲ್ಲಿ ಒಂದು ಒಳ್ಳೆಯ ಪಾರ್ಕ್ ಇಲ್ಲ. ಕೆರೆ ಹತ್ತಿರ ಇರುವಂತಹ ಪಾರ್ಕ್ ನಲ್ಲಿ ಕೋಟ್ಯಾಂತರ ರೂ ಹಣವನ್ನ ತಂದಿದ್ದರು ಪಾರ್ಕ್ ನಲ್ಲಿ ಮೊಟ್ಟು ಬೆಳೆದು ಕುಳಿತಿದೆ. ಕುಶಾವತಿ ಪಾರ್ಕ್ ನಲ್ಲಿ ಜಾರು ಬಂಡಿಯ ಪಕ್ಕದಲ್ಲಿ ಎತ್ತರವಾದ ಹುತ್ತ ಬೆಳೆದು ನಿಂತಿವೆ. ಯಾವುದೇ ರೀತಿಯ ಅಭಿವೃದ್ಧಿ ಮಾಡುತ್ತಿಲ್ಲ. ಒಂದಿಷ್ಟು ಕಾರ್ಯಕರ್ತರನ್ನು ಬೆಳೆಸಿಕೊಂಡು ಪಕ್ಷವನ್ನು ಬೆಳೆಸಿಕೊಂಡಿರುವುದು ಬಿಟ್ಟರೆ ಬೇರೇನು ಮಾಡಿಲ್ಲ ಅಭಿವೃದ್ಧಿಯ ವಿಚಾರದಲ್ಲಿ ಸಂಪೂರ್ಣವಾಗಿ ಹಿಂದೆ ಉಳಿದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪತ್ರೀಕಾ ಗೋಷ್ಠಿಯಲ್ಲಿ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅರ್ ಎ ಚಾಬುಸಾಬ್, ಹೊಸನಗರ ತಾಲೂಕ್ ಜೆಡಿಎಸ್ ಅಧ್ಯಕ್ಷ ಎನ್ ವರ್ತೇಶ್, ಕಿರಣ್ ಪ್ರಭಾಕರ್, ನಟರಾಜ್, ತಲಬಿ ರಘು, ಶೈಲಜಾ, ಹೊದಲ ಶಿವು, ಮಂಜುನಾಥ್, ನೆಂಪೆ ಸುರೇಂದ್ರ ಸೇರಿ ಹಲವರು ಉಪಸ್ಥಿತರಿದ್ದರು.