ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಜೀರಿಗೆಮನೆ ಗ್ರಾಮದ ಯುವ ಪ್ರತಿಭೆಯೊಂದು 2023 ನೇ ಸಾಲಿನ “ಖೇಲೋ ಇಂಡಿಯಾ ” ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ರಾಷ್ಟ್ರ ಮಟ್ಟದಲ್ಲಿ ಹೆಸರು ಗಳಿಸಿದ್ದಾಳೆ.
ಹೌದು ಮಧ್ಯಪ್ರದೇಶ ರಾಜ್ಯದ ಭೋಫಾಲ್ ನಲ್ಲಿ ಜನವರಿ 30 ರಿಂದ ಫೆ 11 ರವರೆಗೆ ನಡೆಯುತ್ತಿರುವ ಖೇಲೋ ಇಂಡಿಯಾ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಗರ್ತಿಕೆರೆ ಗ್ರಾಪಂ ವ್ಯಾಪ್ತಿಯ ಜೀರಿಗೆಮನೆ ಗ್ರಾಮದ ನಾಗರಾಜ್ ಮತ್ತು ಜಯಮ್ಮ ದಂಪತಿಗಳ ಪುತ್ರಿ ಭೂಮಿಕಾ ಕೆ ಎನ್ ಕರ್ನಾಟಕವನ್ನು ಪ್ರತಿನಿಧಿಸಿ ಟ್ರಿಪಲ್ ಜಂಪ್ ನಲ್ಲಿ ದ್ವಿತೀಯ ಸ್ಥಾನವನ್ನು ಗಳಿಸಿ ನಾಡಿಗೆ,ನಮ್ಮೂರಿಗೆ ಹೆಮ್ಮೆ ತಂದಿದ್ದಾರೆ.
ಭೂಮಿಕಾ ಕೆ ಎನ್ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಕಗಚಿ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಪಡೆದಿದ್ದಾರೆ.ನಂತರ ಕೊಡಗಿನ ಪ್ರೌಢಶಾಲೆಯಲ್ಲಿ ಅವಕಾಶ ಗಿಟ್ಟಿಸಿ ಈಗ ಕರ್ನಾಟಕವೇ ತಿರುಗಿನೋಡುವ ಸಾಧನೆಗೈದಿದ್ದಾರೆ.
ಮಲೆನಾಡಿನ ಮಳೆಕಾಡಿನ ನಡುವಿನ ಕಾಡಿನೂರಗಳಲ್ಲಿ ಹೆಣ್ಣು ಮಕ್ಕಳು ಕ್ರೀಡೆಯನ್ನು ತುಂಬ ಆಸಕ್ತಿಯಿಂದ ತೆಗೆದುಕೊಂಡು, ಅದರಲ್ಲೇ ಭವಿಷ್ಯ ಹುಡುಕುವುದು ಸಣ್ಣ ಸಾಧನೆಯಲ್ಲಾ, ಅಂತಹದರಲ್ಲಿ ಖೇಲೋ ಇಂಡಿಯಾದಂತಹ ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನವನ್ನು ಗಿಟ್ಟಿಸಿಕೊಂಡು ನಮ್ಮೂರಿನ ಯುವ ಪ್ರತಿಭೆ ರಾಷ್ಟ್ರ ಮಟ್ಟದಲ್ಲಿ ತನ್ನ ಛಾಪು ಮೆರೆಯುತಿರುವುದು ಹೆಮ್ಮೆಯ ಸಂಗತಿಯಾಗಿದೆ.
ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಸಾಧನೆಗೈದು ಒಲಿಂಪಿಕ್ಸ್ ನಲ್ಲಿ ಪಾಲ್ಗೊಂಡು ನಮ್ಮ ದೇಶಕ್ಕೆ ಕೀರ್ತಿ ತಂದುಕೊಡಲಿ ಎಂಬುವುದೇ ಪೋಸ್ಟ್ ಮ್ಯಾನ್ ಸುದ್ದಿ ಸಂಸ್ಥೆಯ ಆಶಯ……