ಕೊಳೆತ ಸ್ಥಿತಿಯಲ್ಲಿದ್ದ ಅನಾಥ ವೃದ್ದನ ಶವ ಸಂಸ್ಕಾರ ನೆರವೇರಿಸಿದ ರಿಪ್ಪನ್‌ಪೇಟೆ ಗ್ರಾಮ ಪಂಚಾಯತ್
ರಿಪ್ಪನ್‌ಪೇಟೆ : ಪಟ್ಟಣದ ತೀರ್ಥಹಳ್ಳಿ ರಸ್ತೆಯ ಬೆಟ್ಟಿನಕೆರೆ ಗ್ರಾಮದ ಮನೆಯೊಂದರಲ್ಲಿ ವಾರಸುದಾರರಿಲ್ಲದ ಕೊಳೆತ ಸ್ಥಿತಿಯಲ್ಲಿದ್ದ ವೃದ್ದನೊಬ್ಬನ ಅಂತ್ಯಕ್ರಿಯೆ ಯನ್ನು ಗ್ರಾಮಾಡಳಿತದ ವತಿಯಿಂದ ನೆರವೇರಿಸಲಾಯಿತು.
ಪಟ್ಟಣದ ಬೆಟ್ಟಿನಕೆರೆ ಗ್ರಾಮದಲ್ಲಿ ಕಳೆದ ಹಲವಾರು ವರ್ಷಗಳಿಂದ ಒಬ್ಬಂಟಿಯಾಗಿ ವಾಸ ಮಾಡುತಿದ್ದ ಜೋಸ್ (68) ಎಂಬ ವ್ಯಕ್ತಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು.ಈತನು ನಾಲ್ಕೈದು ದಿನಗಳ ಹಿಂದೆಯೇ ಮೃತಪಟ್ಟಿದ್ದನು ಎನ್ನಲಾಗುತ್ತಿದೆ.
ಇಂದು ಬೆಳಿಗ್ಗೆ ಜೋಸ್ ಮೃತಪಟ್ಟಿರುವ ವಿಷಯ ತಿಳಿಯುತಿದ್ದಂತೆ ಸ್ಥಳೀಯರು ಹಾಗೂ ಕುಟುಂಬಸ್ಥರಿಗೆ ಕರೆಯ ಮಾಹಿತಿ ತಿಳಿಸಲು ಪ್ರಯತ್ನಿಸಿದ್ದಾರೆ.ಆದರೆ ಕುಟುಂಬಸ್ಥರು ಸಮರ್ಪಕವಾಗಿ ಸ್ಪಂದಿಸದೇ ನಮಗೂ ಅವರಿಗೂ ಸಂಬಂಧವಿಲ್ಲವೆಂದು ಕಡ್ಡಿಮುರಿದಂತೆ ತಿಳಿಸಿದ್ದಾರೆ.
ಕೂಡಲೇ ಎಚ್ಚೆತ್ತುಕೊಂಡ ರಿಪ್ಪನ್‌ಪೇಟೆ ಗ್ರಾಪಂ ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿ ಕಾನೂನು ರೀತ್ಯಾ ಕ್ರಮಕೈಗೊಂಡು ಅಂತ್ಯ ಸಂಸ್ಕಾರ ನೆರವೇರಿಸಿದರು.
ಮೃತ ವ್ಯಕ್ತಿಗೆ ಸಂಬಂಧಪಟ್ಟ ಸುಮಾರು ಒಂದೂವರೆ ಲಕ್ಷ ಮೌಲ್ಯದ 5 ಗೋವುಗಳನ್ನು ಆನಂದಪುರ ಸಮೀದ ಮುರುಘಾ ಮಠದ ಗೋಶಾಲೆಗೆ ಕಳುಹಿಸಿಕೊಡಲಾಯಿತು.ಮನೆ ಹಾಗೂ ಬೈಕ್ ನ್ನು ಗ್ರಾಮ ಪಂಚಾಯತಿ ಸುಪರ್ದಿಗೆ ತೆಗೆದುಕೊಳ್ಳಲಾಯಿತು.
ಈ ಸಂಧರ್ಭದಲ್ಲಿ ಪಿಡಿಓ ಜಿ ಚಂದ್ರಶೇಖರ್ ಗ್ರಾಪಂ ಸದಸ್ಯರಾದ
ಪಿ ರಮೇಶ್ ,ಆಸೀಫ಼್ ಭಾಷಾ ರಕ್ಷಣಾ ಇಲಾಖೆಯ ಎಎಸೈ ಮಂಜಪ್ಪ ,ಹೆಡ್ ಕಾನ್ಸ್ ಟೇಬಲ್ ಪರಮೇಶ್ವರಪ್ಪ ಮತ್ತು ಗ್ರಾಪಂ ಸಿಬ್ಬಂದಿಗಳಾದ ನಾಗೇಶ್ ,ರಾಜೇಶ್ ಇದ್ದರು.
ಅನಾಥ ಶವದ ಅಂತ್ಯಕ್ರೀಯೆ ನಡೆಸಿದ ಗ್ರಾಮಾಡಳಿತದ ಪಿಡಿಓ ,ಸದಸ್ಯರು ಮತ್ತು ಸಿಬ್ಬಂದಿಗಳ ಕಾರ್ಯ ವೈಖರಿಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.