ರಿಪ್ಪನ್‌ಪೇಟೆ : ಸಮಾಜದ ಶ್ರೇಯೋಭಿವೃದ್ದಿಗೆ ಶ್ರಮಿಸುವ ಮೂಲಕ ಹೊಸನಗರ ತಾಲೂಕ್ ಒಕ್ಕಲಿಗ ಸಂಘ ರಾಜ್ಯಕ್ಕೆ ಮಾದರಿಯಾಗಿದೆ ಎಂದು ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಪಟ್ಟಣದ ವಿಶ್ವಮಾನವ ಸಭಾ ಭವನದಲ್ಲಿ ಹೊಸನಗರ ತಾಲ್ಲೂಕು ಒಕ್ಕಲಿಗರ ಸಂಘ ಆಯೋಜಿಸಿದ್ದ ಸಂಸ್ಥಾಪಕ ಆಡಳಿತ ಮಂಡಳಿ ಮತ್ತು ಮಾಜಿ ನಿರ್ದೇಶಕರಿಗೆ ಬೀಳ್ಕೋಡುಗೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಒಕ್ಕಲಿಗ ಸಮುದಾಯದ ಶಕ್ತಿಯನ್ನು ಬಲಪಡಿಸಲು ಆ ಕಾಲದಲ್ಲಿಯೇ ಹೊಸನಗರ ತಾಲೂಕಿನ ಒಕ್ಕಲಿಗ ಸಂಘ ಅಸ್ತಿತ್ವಕ್ಕೆ ಬಂದು ಅನೇಕ ಸಮಾಜಮುಖಿ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿರುವುದು ತುಂಬಾ ಹೆಮ್ಮೆಯ ಸಂಗತಿಯಾಗಿದೆ.ನಾಡು ನುಡಿಯೊಂದಿಗೆ ಶೈಕ್ಷಣಿಕವಾಗಿ ಸಾಂಸ್ಕೃತಿಕವಾಗಿ ರಾಜಕೀಯವಾಗಿ ದೇಶಕ್ಕೆ ಮಾದರಿಯಾಗಿರುವ ಒಕ್ಕಲಿಗ ಸಮಾಜದ ಶ್ರೇಯೋಭಿವೃದ್ದಿಗೆ ನಮ್ಮ ಯುವಜನಾಂಗ ಸಂಘಟಿತರಾಗಬೇಕು.ಸಮಾಜದ ಕಟ್ಟ ಕಡೇ ವ್ಯಕ್ತಿಯನ್ನು ಮುಖ್ಯವಾಹಿನಿಗೆ ತರುವ ಕಾರ್ಯವು ಸಮಾಜದ ವತಿಯಿಂದ ನಡೆಯಬೇಕು.
ಒಕ್ಕಲಿಗ ಜನಾಂಗ ಎಲ್ಲಾ ಜನಾಂಗದವರೊಂದಿಗೆ ಮಡಿವಂತಿಕೆ ಮಾಡದೆ ಎಲ್ಲರನ್ನು ಸಮಾನ ದೃಷ್ಠಿಯಲ್ಲಿ ಕಂಡ ಸಮಾಜವಾಗಿದೆ.ವಿಶ್ವಮಾನವ ಕುವೆಂಪು ರವರಿಗೆ ಯಾವುದೇ ಚೌಕಟ್ಟನ್ನು ಹಾಕದೇ ಅವರಂತೆ ನಡೆದು ತೋರಿಸಬೇಕು ಎಂದು ಕುವೆಂಪು ರವರ ವಿಶ್ವಮಾನವ ಸಂದೇಶದ ಕವನ ವಾಚಿಸಿದರು.ಮುಂದಿನ ದಿನಗಳಲ್ಲಿ ಸಮಾಜದ ಅಭಿವೃದ್ಧಿಗೆ ಹೆಚ್ಚಿನ ಅನುದಾನಗಳನ್ನು ಕೊಡಿಸುವ ಭರವಸೆಯನ್ನು ನೀಡಿದರು.
ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ ಮಾತನಾಡಿ, ಈಗಾಗಲೇ ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರ್ಕಾರ ಅಧಿಕಾರದಲ್ಲಿದ್ದಾಗ 10 ಲಕ್ಷ ರೂ. ಅನುದಾನವನ್ನು ಒಕ್ಕಲಿಗ ಸಮಾಜಕ್ಕೆ ನೀಡಿದ್ದು ನಂತರದಲ್ಲಿ ಸಂಸದರು ಅನುದಾನವನ್ನು ಬಿಡುಗಡೆ ಮಾಡಿದ್ದಾರೆ. ಶಾಂತವೇರಿ ಗೋಪಾಲಗೌಡರು, ಕಡಿದಾಳು ಮಂಜಪ್ಪ ಸೇರಿದಂತೆ ಬೆಂಗಳೂರು ನಿರ್ಮಾಣ ಕರ್ತೃ ನಾಡಗೌಡ ಕೆಂಪೇಗೌಡ ಹೀಗೆ ರಾಷ್ಟ್ರಕವಿ ಕುವೆಂಪು ಕೊಟ್ಟ ಒಕ್ಕಲಿಗ ಸಮಾಜವನ್ನು ಬಣ್ಣಿಸಿದ ಅವರು ಸಮಾಜದ ಅಭಿವೃದ್ದಿ ಬಗ್ಗೆ ಸಮಾಜದವರು ಮನವಿಯನ್ನು ಆಲಿಸಿ ಆದಷ್ಟು ಬೇಗ ಮುಖ್ಯಮಂತ್ರಿಗಳ ಬಳಿ ಚರ್ಚಿಸಿ ಸರ್ಕಾರದಿಂದ ಇನ್ನೂ ಹೆಚ್ಚಿನ ಅನುದಾನವನ್ನು ಕೊಡಿಸುವುದಾಗಿ ತಿಳಿಸಿದರು.
ಇದೇ ಸಂಧರ್ಭದಲ್ಲಿ ಸಂಸ್ಥಾಪಕ ಆಡಳಿತ ಮಂಡಳಿ ಮತ್ತು ಮಾಜಿ ನಿರ್ದೇಶಕರಿಗೆ ಸನ್ಮಾನಿಸಿ ಗೌರವಿಸಿ ಬೀಳ್ಕೊಡಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಒಕ್ಕಲಿಗ ಸಮಾಜದ ಅಧ್ಯಕ್ಷ ಎಂ.ಬಿ.ಲಕ್ಷ್ಮಣ ಗೌಡರು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಆರ್ ಎನ್ ಮಂಜುನಾಥಗೌಡ, ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕ ಸಿರಿಬೈಲು ಧರ್ಮೇಶ್, ಜಿಲ್ಲಾ ಒಕ್ಕಲಿಗ ಸಂಘದ ಅಧ್ಯಕ್ಷ ಹೆಚ್.ಟಿ.ಆದಿಮೂರ್ತಿ, ಮೆಸ್ಕಾಂ ನಿರ್ದೇಶಕ ಎಸ್.ದಿನೇಶ್, ಶಿವಮೊಗ್ಗ ಮಹಾನಗರ ಪಾಲಿಕೆ ಸದಸ್ಯ ಬಿ.ಎ.ರಮೇಶ್ ಇನ್ನಿತರರು ಇದ್ದರು.