ಹೊಸನಗರ :ಮೈ ಮನ ತಣಿಸುವ ನೃತ್ಯ ವೈಭವ ಕಾರ್ಯಕ್ರಮ, ಮನಕ್ಕೆ ಮುದ ನೀಡುವ ಪುಟ್ಟ ಪುಟಾಣಿಗಳ, ಚಿಣ್ಣರ ಹಾಡು ,ನೃತ್ಯಗಳು. ಹೌದು ಈ ಸುಂದರ ಕಾರ್ಯಕ್ರಮವು ಹೊಸನಗರದ ಶ್ರೀ ಮಾರಿಕಾಂಬಾ ಜಾತ್ರೆಯಲ್ಲಿ ಅದ್ದೂರಿಯಿಂದ ಸಾವಿರಾರು ಜನಗಳ ಸಮ್ಮುಖದಲ್ಲಿ ನಡೆದಿದ್ದು,ಹೊಸನಗರ ಜಾತ್ರೆಯ ಮೆರಗನ್ನು ಇನ್ನಷ್ಟು ಹೆಚ್ಚಿಸಿದೆ!! ಏಕೆಂದರೆ ಕಳೆದ ಬಾರಿ ಅದೇ ವೇದಿಕೆಯಲ್ಲಿ ನಡೆದಂತಹ ಕಾರ್ಯಕ್ರಮಗಳು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ವಿರೋಧ ಸಹ ಕೇಳಿ ಬಂದಿತ್ತು,ಅದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿ ವಿರೋಧದ ಅಲೆಯೇ ಎದ್ದಿತ್ತು..
ಆದರೆ ಪ್ರಸಕ್ತ ವರ್ಷದ ಜಾತ್ರಾ ಸಮಿತಿ ಅತ್ಯಂತ ಅಚ್ಚುಕಟ್ಟಾಗಿ ಹೊಸನಗರದ ಮಕ್ಕಳಿಗೊಂದು ಬೃಹತ್ ವೇದಿಕೆಯನ್ನೇ ಸೃಷ್ಟಿಸಿದ್ದಾರೆ,ಆ ವೇದಿಕೆಯಲ್ಲಿ ವರ್ಣ ರಂಜಿತ ಬೆಳಕುಗಳು, ಮುದ ನೀಡುವ ಹಾಡುಗಳು, ಮಕ್ಕಳ ನೃತ್ಯ ,ಅಭಿನಯ, ಪಿರಮಿಡ್ ಹೀಗೆ ಹಲವಾರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಉತ್ತಮ ವೇದಿಕೆ ಆಗಿತ್ತು ಹಾಗೂ ಪೋಷಕರು ತಮ್ಮ ಮಕ್ಕಳ ಪ್ರತಿಭೆಯ ಅನಾವರಣ ನೋಡಿ ಹೊಸನಗರದವರೊಂದಿಗೆ ಹರ್ಷದಲಿ ಮಿಂದೆದ್ದರು.!!
ಹೊಸನಗರದ ತಾಲೂಕಿನ ಸುತ್ತಮುತ್ತಲಿನ ಅನೇಕ ಶಾಲೆಗಳಾದ ರಾಮಕೃಷ್ಣ ಶಾಲೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಾವಿನಕೊಪ್ಪ, ಗುರೂಜಿ, ಕುವೆಂಪು ಶಾಲಾ ಮಕ್ಕಳು ಹೀಗೆ ಹಲವು ಪುಟಾಣಿಗಳು, ಸಂಗೀತ ಶಾಲೆಯ ವಿದ್ಯಾರ್ಥಿಗಳು ಇಂದು ಹೊಸನಗರ ಜಾತ್ರೆಗೆ ಸೇರಿದವರನ್ನೆಲ್ಲಾ ರಂಜಿಸಿದ್ದು ಗಮನಾರ್ಹ ಸಂಗತಿ!!
ಮಕ್ಕಳ ಮಲ್ಲಗಂಬ ಕಸರತ್ತು!
ವಿಶೇಷ ವಾಗಿ ಗುರೂಜಿ ಇಂಟರ್ನ್ಯಾಷನಲ್ ಶಾಲಾ ಮಕ್ಕಳ ಮಲ್ಲಗಂಬದಲ್ಲಿ ಮಾಡಿದ ಕಸರತ್ತುಗಳು ನೋಡುಗರ ಹುಬ್ಬೆರುವಂತೆ ಮಾಡಿತು..!!
ಹೊಸನಗರದಲ್ಲಿ ಆರ್ಕೆಸ್ಟ್ರಾ ಬಿಟ್ಟರೆ ಜನರು ಸೇರುವುದೇ ಇಲ್ಲ ವಾಡಿಕೆ,ಜನರನ್ನು ಸೇರಿಸುವುದೇ ಕಷ್ಟ ಹೀಗೆಲ್ಲಾ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದರು ಆದರೆ ಇಂದು ಅವನ್ನೆಲ್ಲ ಮೀರಿ ಪುಟಾಣಿಗಳ ಕಾರ್ಯಕ್ರಮಕ್ಕೆ ಜನಸಾಗರದ ದೌಡೆ ಹರಿದು ಬಂದಿದ್ದು ವಿಶೇಷವಾಗಿತ್ತು.
ಹೊಸನಗರ ಶ್ರೀ ಮಾರಿಕಾಂಬ ಜಾತ್ರೆಯ ಸಮಿತಿಯ ಶ್ರೀ ಹಾಡಿಮನೆ ಗೋಪಾಲ್, ಮನೋಹರ್, ಸುನಿಲ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು..