ಸಾಗರದಲ್ಲಿ ಬಜರಂಗದಳ ಕಾರ್ಯಕರ್ತನ ಮೇಲೆ ಹಲ್ಲೆ ನಡೆದಿದೆ, ಈ ಘಟನೆಯಲ್ಲಿ ಸ್ವಲ್ಪದರಲ್ಲಿಯೆ ಸುನೀಲ್ ಎಂಬಾತ ತಪ್ಪಿಸಿಕೊಂಡಿದ್ದಾರೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಾಗರ ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಬಳಿ ನಡೆದ ಘಟನೆ ಇದಾಗಿದ್ದು, ಬೆಳಗ್ಗೆ ೯ ಗಂಟೆ ಸುಮಾರಿಗೆ ನಡೆದಿದೆ.
ಬೈಕ್ನಲ್ಲಿ ಬರುತ್ತಿದ್ದ ಸುನೀಲ್ ಮೇಲೆ ಸಮೀರ್ ಎಂಬಾತ ಮಚ್ಚಿನಿಂದ ಹಲ್ಲೆಗೆ ಯತ್ನಿಸಿದ್ದಾರೆ. ಜಿಯೋ ಫೈಬರ್ ಕಚೇರಿಯ ಬಳಿ ಬೈಕ್ ನಲ್ಲಿ ಬರುತ್ತಿದ್ದಾಗ ಘಟನೆ ನಡೆದಿದೆ. ಅಲ್ಲಿಯೇ ಇದ್ದ ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆಯಾಗಿದೆ.
ಸುನೀಲ್ ಮತ್ತು ಸಮೀರ್ ಸಾಗರದ ಉಪ್ಪಾರ ಕೇರಿ ನಿವಾಸಿಗಳು, ಹಿಜಾಬ್ ವಿವಾದದಲ್ಲಿ ಇಬ್ಬರ ನಡುವೆ ಉಂಟಾಗಿದ್ದ ವೈಷಮ್ಯದಿಂದಲೇ ಹಲ್ಲೆ ನಡೆದಿದೆ ಎಂದು ಹೇಳಲಾಗುತ್ತಿದೆ. ನಿನ್ನೆಯಷ್ಟೆ ಇದೇ ವಿಷಯಕ್ಕೆ ಸಮೀರ್ ಸುನೀಲ್ ಧಮ್ಕಿ ಹಾಕಿದ್ದ ಎಂದು ಹಿಂದೂಪರ ಸಂಘಟನೆಗಳು ತಿಳಿಸಿದ್ದು, ಈ ಸಂಬಂಧ ಆಕ್ರೋಶ ಹೊರಹಾಕಿ, ಸಾಗರ ಟೌನ್ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸ್ತಿದ್ದಾರೆ.
ಇನ್ನೂ ಈ ಬಗ್ಗೆ ಶಿವಮೊಗ್ಗ ಪೊಲೀಸ್ ಇಲಾಖೆ ಮಾಹಿತಿ ನೀಡಿದ್ದು, ಸಾಗರದ ಆಭರಣ ಜ್ಯುವೆಲರಿ ಸಮೀಪ ಬರುತ್ತಿದ್ದ ಸುನೀಲ್ ಎಂಬಾತನ ಮೇಲೆ ಸಮೀರ್ ಎಂಬಾತ ಹಲ್ಲೆ ನಡೆಸಲು ಯತ್ನಿಸಿದ್ದಾನೆ. ತನ್ನ ಬೈಕ್ನಿಂದ ಆಯುಧವನ್ನು ತೆಗೆದುಕೊಂಡು ಹಲ್ಲೆ ಮುಂದಾಗಿದ್ದಾನೆ.
ಈ ಸಂಬಂಧ ಮೂರು ತಂಡಗಳನ್ನು ರಚಿಸಲಾಗಿದ್ದು, ಘಟನೆಗೆ ಕಾರಣ ತಿಳಿಯಲಾಗುತ್ತಿದೆ. ಇನ್ನೂ ಈ ಸಂಬಂದ ಒಂದು ಕೇಸ್ ದಾಖಲಾಗಿದೆ ಎಂದು ತಿಳಿಸಿದೆ.