ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಬರುವೆ ಗ್ರಾಮದ ಸಮೀಪ ಇರುವ ಏಳಿಗೆ ಗ್ರಾಮದಲ್ಲಿನ ಶಾಲೆಯೊಂದರ ಸೀರೆ ಶೌಚಾಲಯದ ವಿಡಿಯೋವೊಂದು ಇದೀಗ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿದೆ.
ಇಂತಹದ್ದೊಂದು ಅವ್ಯವಸ್ಥೆಯು ಇನ್ನೂ ಇದೇ ಎಂದು ರಾಷ್ಟ್ರೀಯವಾಹಿನಿಗಳು ಸೀರೆ ಶೌಚಾಲಯದ ಸರ್ಕಾರಿ ಶಾಲೆಯ ಸ್ಥಿತಿಯನ್ನು ಬಿಚ್ಚಿಡುತ್ತಿದೆ. ಅಲ್ಲದೆ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದು, ಮಾಜಿ ಸಿಎಂ ಬಿಎಸ್ ವೈ ತವರು, ಘಟಾನುಘಟಿ ರಾಜಕಾರಣಗಳ ಶಕ್ತಿಕೇಂದ್ರ ಹಾಗೂ ವಿಮಾನ ನಿಲ್ಧಾಣವನ್ನು ಹೊಂದಿ ಅಭಿವೃದ್ಧಿ ಕಾಣುತ್ತಿರುವ ಶಿವಮೊಗ್ಗದಲ್ಲಿ ಸರ್ಕಾರಿ ಶಾಲೆಗೆ ಶೌಚಾಲಯ ಕಟ್ಟಿಸಿಕೊಡುವಂತಹ ಸ್ಥಿತಿಯು ಇಲ್ಲವೇ ಎಂಬ ಟೀಕೆ ದೊಡ್ಡ ಮಟ್ಟದಲ್ಲಿ ಕೇಳಿಬರುತ್ತಿದೆ.
ಅಸಲಿಗೆ ಸಾಗರ ಹಾಗೂ ಹೊಸನಗರ ತಾಲೂಕಿನ ಗಡಿಭಾಗದಲ್ಲಿ ಬರುವ ಈ ಶಾಲೆಯನ್ನು ಅಧಿಕಾರಿಗಳು ನೋಡಿದ್ದೆ ಇಲ್ಲ ಎನ್ನಬಹುದು. ಎಲ್ಲಿ ಬರುತ್ತೆ ಎಂದು ಅಧಿಕಾರಿಗಳು ಕೇಳುವ ಸ್ಥಿತಿಯಿದೆ. ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಊರುಗಳಲ್ಲಿ ಜನರೇ ಹಾಗೂ ಹೀಗೂ ಒಂದಿಷ್ಟು ಹರಸಾಹಸ ಮಾಡಿ ಸೌಲಭ್ಯಗಳನ್ನು ಊರಿಗೆ ಒದಗಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಇಲ್ಲಿಯು ಸಹ ಏಳಿಗೆ, ಕಿರತೋಡಿ ಮತ್ತೀತರ ಗ್ರಾಮದ 13 ಮಕ್ಕಳು ಈ ಶಾಲೆಯಲ್ಲಿ ಓದುತ್ತಿದ್ದಾರೆ.
ಆದರೆ ಶಿಕ್ಷಣ ಇಲಾಖೆ ಈ ಶಾಲೆಗೆ ಏನು ಬೇಕು ಎಂದು ಸಹ ಇದುವರೆಗೂ ನೋಡಿದಂತಿಲ್ಲ. ಖಾಯಂ ಶಿಕ್ಷಕರನ್ನು ಸಹ ನೇಮಕ ಮಾಡದ ಇಲಾಖೆಯ ನಿರ್ಲಕ್ಷ್ಯ ಒಂದುಕಡೆಯಾದರೆ, ಶೌಚಾಲಯದ ದುರ್ವವ್ಯಸ್ಥೆ ಹೇಗೋ ಅಡ್ಜೆಸ್ಟ್ ಮಾಡಿಕೊಳ್ತಾರೆ ಎಂಬಂತಹ ಧೋರಣೆ ಶಾಲೆಯನ್ನು ದುಸ್ತಿತಿಗೆ ದೂಡಿದೆ. ಹೆಣ್ಣುಮಕ್ಕಳು ಬಯಲು ಶೌಚಕ್ಕೆ ಹೋಗಬೇಕಾದ ಸ್ಥಿತಿ ಇಲ್ಲಿದೆ. ಅದಕ್ಕಾಗಿ ಇಲ್ಲಿನವರೆ ಸೀರೆಯೊಂದನ್ನ ಅಡ್ಡಗಟ್ಟಿ ಮರೆ ಮಾಡಿ, ಹೆಣ್ಣುಮಕ್ಕಳಿಗೆ ಶೌಚಕ್ಕೆ ಹೋಗಲು ವ್ಯವಸ್ಥೆ ಮಾಡಿದ್ಧಾರೆ.
ಇದೀಗ ಸೀರೆ ಕಟ್ಟಿದ ಫೋಟೋ ವಿಡಿಯೋ ವೈರಲ್ ಆಗುತ್ತಿದ್ದು, ವ್ಯಾಪಕ ಟೀಕೆ ಕೇಳಿಬರುತ್ತಿದೆ. ಸ್ವಚ್ಚಭಾರತ್ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುತ್ತಿದ್ಧಾರೆ. ಆದರೆ ಅದು ತಳಮಟ್ಟದ ಜನಪ್ರತಿನಿಧಿಗಳಿಗೆ ಅಧಿಕಾರಿಗಳಿಗೆ ಕಾಣುತ್ತಿಲ್ಲವೆ ಅಥವಾ ಪದೇಪದೇ ಕಾಗದ ಹಿಡಿದು ಬಂದು ಮನವಿ ಸಲ್ಲಿಸಿದರಷ್ಟೆ ಬೆಲೆಯೇ ಎಂದು ಪ್ರಶ್ನಿಸುತ್ತಿದ್ದಾರೆ.
ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇