ರಿಪ್ಪನ್‌ಪೇಟೆ : ತಮಿಳುನಾಡಿನಲ್ಲಿ ಉಂಟಾಗಿರುವ ಚಂಡಮಾರುತದಿಂದ ಮಲೆನಾಡಿನ ರೈತ ಬದುಕು ಮೂರಾಬಟ್ಟೆಯಾಗಿದ್ದು ಈ ಗಂಭೀರ ಸಮಸ್ಯೆಯನ್ನು ಮಲೆನಾಡಿನ ಸಚಿವರು ಹಾಗೂ ಶಾಸಕರುಗಳು ಸರ್ಕಾರದ ಮುಂದಿಟ್ಟು ಮನದಟ್ಟು ಮಾಡಿ ಸರ್ಕಾರದಿಂದ ರೈತರಿಗೆ ಸೂಕ್ತ ಪರಿಹಾರ ಒದಗಿಸಿಕೊಡಬೇಕು ಎಂದು ಜಯಕರ್ನಾಟಕ ಸಂಘಟನೆ ತಾಲೂಕ್ ಅಧ್ಯಕ್ಷ ಚಂದನ್ ಗೌಡ ಹೇಳಿದ್ದಾರೆ.
ಪೋಸ್ಟ್ ಮ್ಯಾನ್ ನ್ಯೂಸ್ ನೊಂದಿಗೆ ಮಾತನಾಡಿದ ಅವರು ತಮಿಳುನಾಡಿನಲ್ಲಿ ಎದ್ದಿರುವ ಮಂಡೋಸ್ ಚಂಡಮಾರುತ ಕರುನಾಡಿಗೂ ಅಪಾಯ ಉಂಟು ಮಾಡುತ್ತಿದೆ ಅಕಾಲಿಕ ಮಳೆಯ ಕಾರಣ ದಕ್ಷಿಣ ಒಳನಾಡು ಮತ್ತು ಬಹುಮುಖ್ಯವಾಗಿ ಮಲೆನಾಡು ಭಾಗ ಬೆಚ್ಚಿ ಬೀಳುವಂತಾಗಿದೆ, ಮಲೆನಾಡಿನ ಜೀವ ಬೆಳೆಗಳೆಂದೇ ಹೆಸಾರಾಗಿರುವ ಅಡಕೆ, ಭತ್ತದ ಕಟಾವಿಗೆ ಬಂದಿದ್ದು ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಈಗಾಗಲೇ ಅನೇಕರ ವರ್ಷದ ಕೂಳು ನೀರು ಪಾಲಾಗಿ ಅದನ್ನೇ ನಂಬಿ ಜೀವಿಸುವ ರೈತ ಕಂಗಾಲಾಗಿ ಕುಳಿತುಕೊಳ್ಳುವ ಪರಿಸ್ಥಿತಿ ಎದುರಾಗಿದೆ.
ಮಲೆನಾಡಿಗೆ ಎಲೆ ಚುಕ್ಕಿ ರೋಗದಂತಹ ಗಂಭೀರ ಸಮಸ್ಯೆಯ ಬೆನ್ನಲ್ಲೇ ಇಂತದೊಂದು ಪರಿಸ್ಥಿತಿ ಎದುರಾಗಿ ಮಾನಸಿಕವಾಗಿ ಕುಗ್ಗಿರುವ ರೈತರಿಗೆ ಸರ್ಕಾರದ ನೆರವು ಅವಶ್ಯಕವಾಗಿದೆ.
ಅಡಿಕೆ ಸತತವಾಗಿ ಬೆಲೆ ಕುಸಿತದಿಂದಾಗಿ ರೈತರು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ.ಈ ಭಾಗದ ವಾಣಿಜ್ಯ ಬೆಳೆ ಅಡಿಕೆಗೂ ಸಮಸ್ಯೆಯಾಗಿ ರೈತರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ಅವರ ನೆರವಿಗೆ ಧಾವಿಸಬೇಕು ಎಂದು ಮನವಿ ಮಾಡಿದರು.
ಗೃಹ ಸಚಿವರಾದ ಆರಗ ಜ್ಞಾನೇಂದ್ರ ಅವರು ಮತ್ತು ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪನವರು ಮಲೆನಾಡಿಗರ ಈ ಗಂಭೀರ ಸಮಸ್ಯೆಯನ್ನು ಸರ್ಕಾರದ ಮುಂದಿಟ್ಟು ಮನದಟ್ಟು ಮಾಡಿ ಸರ್ಕಾರದಿಂದ ರೈತರಿಗೆ ಸೂಕ್ತ ಪರಿಹಾರ ಒದಗಿಸಿಕೊಡುವಂತೆ ಹೊಸನಗರ ತಾಲ್ಲೂಕು ಜಯ ಕರ್ನಾಟಕ ಸಂಘಟನೆ ವತಿಯಿಂದ ಒತ್ತಾಯಿಸುತ್ತಿದ್ದೇವೆ ಎಂದು ಹೇಳಿದರು.