ಹೊಸನಗರ ತಾಲೂಕಿನ ಹುಲಿಕಲ್ ನಲ್ಲಿ ನಡೆದ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು ಓರ್ವ ಮಹಿಳೆಯ ಸ್ಥಿತಿ ಗಂಭೀರವಾಗಿದ್ದು ಗಾಯಾಳುವನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾದ ಘಟನೆ ತಡರಾತ್ರಿ ನಡೆದಿದೆ.
ಬೈಕ್ ನಲ್ಲಿ ತೆರಳುತ್ತಿರುವವರ ಮೇಲೆ ಹಿಂಬದಿಯಿಂದ ಬಂದ ಲಾರಿ ಹರಿದಿದ್ದು ಘಟನೆ ಬಳಿಕ ಚಾಲಕ ವಾಹನ ಸಮೇತ ಪರಾರಿಯಾಗಿದ್ದಾನೆ. ಘಟನಾ ಭೀಕರತೆ ನೋಡಿ ಜನ ಬೆಚ್ಚಿಬಿದ್ದಿದ್ದು, ಸುಮಾರು ಎರಡೂವರೆ ಘಂಟೆ ಕಾಲ ವಾಹನ ಸಂಚಾರ ಸ್ಥಗಿತವಾಗಿತ್ತು.
ಮಾಸ್ತಿಕಟ್ಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಂಪದ ಕೈ ಕೂಲಿ ಕಾರ್ಮಿಕ ರವಿ (47) ಹಾಗೂ ಅವರ ಅಣ್ಣನ ಮಗ ಶ್ರಿಸಿರ ನಾಲ್ಕನೇ ತರಗತಿ ಹುಡುಗ ಮೃತ ದುರ್ದೈವಿಗಳು ಹಾಗೂ ರವಿಯವರ ಪತ್ನಿಯ ಕಾಲಿನ ಮೇಲೆ ಲಾರಿ ಹರಿದಿದ್ದು ಅವರು ಗಂಭೀರ ಸ್ಥಿತಿಯಲ್ಲಿದ್ದಾರೆ.
ಹುಲಿಕಲ್ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನದ ಕಾರ್ತಿಕ ದೀಪೋತ್ಸವ ಕಾರ್ಯಕ್ರಮ ಮುಗಿಸಿ ಮನೆಗೆ ಬರುವಾಗ ಸುಮಾರು ರಾತ್ರಿ 9:35 ರ ಸಮಯದಲ್ಲಿ ಈ ದುರ್ಘಟನೆ ಸಂಭವಿಸಿದೆ.
ನಗರ ಠಾಣೆಯ ಪೊಲೀಸ್ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಮೃತ ದೇಹಗಳನ್ನು ಆಂಬುಲೆನ್ಸ್ ಗೆ ಹಾಕಿದ ನಂತರ ಸುಮಾರು ರಾತ್ರಿ12 ಘಂಟೆ ಸಮಯದಲ್ಲಿ ವಾಹನ ಸಂಚಾರಕ್ಕೆ ಮುಕ್ತ ಅವಕಾಶ ಕಲ್ಪಿಸಲಾಯಿತು.
ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.