ಅಕ್ರಮವಾಗಿ ಮನೆಯೊಳಗೆ ಬಂದು ಮೊಬೈಲ್ ಚಾರ್ಜ್ ಗೆ ಇಡಲು ಬಂದ ವ್ಯಕ್ತಿಯನ್ನು ಪ್ರಶ್ನಿಸಿದ್ದಕ್ಕೆ ದೊಣ್ಣೆಯಿಂದ ಹೊಡೆದು ಸಾಯಿಸಿರುವ ಅಮಾನವೀಯ ಘಟನೆ ಸಾಗರ ತಾಲೂಕಿನ ಕಾರ್ಗಲ್ ಪೊಲೀಸ್ ಠಾಣೆ ವ್ಯಾಪ್ತಿಯ ಮುರಳ್ಳಿ ಮರಾಠಿ ಗ್ರಾಮದಲ್ಲಿ ನಡೆದಿದೆ.
ನಡೆದಿದ್ದೇನು:
ದಿನಾಂಕ:07-11-2022 ರಂದು ರಾತ್ರಿ 8-00 ಗಂಟೆಗೆ ಸಾಗರ ತಾಲ್ಲೂಕು ಮುರಳ್ಳಿ ಮರಾಠಿ ಗ್ರಾಮದ ತಿಮ್ಮಪ್ಪ ಎಂಬುವವರ ಮನೆಗೆ ಮೊಬೈಲ್ ಚಾರ್ಜ್ ಮಾಡುವ ಉದ್ದೇಶದಿಂದ ಅದೇ ಗ್ರಾಮದ ಸಿದ್ದಪ್ಪ ಎಂಬುವವನು ಅಕ್ರಮ ಪ್ರವೇಶ ಮಾಡುತ್ತಾನೆ.
ಈ ಸಂಧರ್ಭದಲ್ಲಿ ಮನೆಗೆ ಅಕ್ರಮ ಪ್ರವೇಶ ಮಾಡಿದ್ದನ್ನು ತಿಮ್ಮಪ್ಪ ಹಾಗೂ ಆತನ ಪತ್ನಿ ಲಕ್ಷ್ಮೀ ಪ್ರಶ್ನಿಸಿದಾಗ ಕೋಪಗೊಂಡ ಸಿದ್ದಪ್ಪ ಮನೆಯ ವಸ್ತುಗಳನ್ನು ದೊಣ್ಣೆಯಿಂದ ಹಾನಿ ಮಾಡಲು ಯತ್ನಿಸುತ್ತಾನೆ.
ಯಾಕೆ ಹೀಗೆ ಮಾಡುತ್ತೀಯಾ ಎಂದು ಹತ್ತಿರ ಹೋಗಿ ಪ್ರಶ್ನಿಸಿದ್ದ ತಿಮ್ಮಪ್ಪನಿಗೆ ತನ್ನ ಕೈಯಲ್ಲಿದ್ದ ದೊಣ್ಣೆಯಿಂದ ಎಡಕಣ್ಣಿನ ಹುಟ್ಟಿಗೆ ಬಲವಾಗಿ ಹೊಡೆದು ಗಾಯಪಡಿಸುತ್ತಾನೆ.
ಕೂಡಲೇ ಗಾಯಾಳು ತಿಮ್ಮಪ್ಪನನ್ನು ಸಾಗರದ ಆಸ್ಪತ್ರೆಗೆ ಕರೆತಂದು ಪ್ರಾಥಮಿಕ ಚಿಕಿತ್ಸೆ ನೀಡಿ ನಂತರ ಶಿವಮೊಗ್ಗಕ್ಕೆ ಕರೆದೊಯ್ಯಲಾಗುತ್ತದೆ.ಹೆಚ್ಚಿನ ಚಿಕಿತ್ಸೆಗೆ ಉಡುಪಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆ ಫಲಿಸದೇ ತಿಮ್ಮಪ್ಪ ಮೃತಪಟ್ಟಿದ್ದಾನೆ.
ಮೃತ ತಿಮ್ಮಪ್ಪನ ಪತ್ನಿ ಕಾರ್ಗಲ್ ಪೊಲೀಸ್ ಠಾಣೆಗೆ ಈ ವಿಚಾರವಾಗಿ ದೂರು ನೀಡಿದ್ದಾರೆ.
ಕೂಡಲೇ ಪೊಲೀಸರು ಕಾರ್ಯಪ್ರವೃತ್ತರಾಗಿ ಆರೋಪಿಯನ್ನು 24 ಗಂಟೆಯಲ್ಲಿ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.