ಚಿಕನ್ ಅಂಗಡಿ ಮಾಲೀಕನಿಂದ 50 ಸಾವಿರ ರೂ. ಹಣ ಸ್ವೀಕರಿಸುವಾಗ ಲೋಕಾಯುಕ್ತರ ಬಲೆಗೆ ಬಿದ್ದ ಸಾಗರ ತಾಲೂಕಿನ ಜೋಗ-ಕಾರ್ಗಲ್ ಪಪಂ ಬಿಜೆಪಿ ಸದಸ್ಯ ಕೆ.ಸಿ.ಹರೀಶ್ ಗೌಡ
ಈ ವೇಳೆ ಪಟ್ಟಣ ಪಂಚಾಯಿತಿ ಸದಸ್ಯ ಲಂಚದ ಹಣ ಸುಡಲು ಯತ್ನಿಸಿದ್ದಾನೆ. ಜೋಗ ಗ್ರಾಮದ ಚಿಕನ್ ಅಂಗಡಿ ಮಾಲೀಕ ಅಹ್ಮದ್ ಅಬ್ದುಲ್ ಬಾಕಿ ಎಂಬುವವರಿಂದ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ದಾಳಿಯಾಗಿದೆ.
ಕಾರ್ಗಲ್ ಪಟ್ಟಣದ 8ನೇ ವಾರ್ಡ್ ಬಿಜೆಪಿ ಸದಸ್ಯನಾಗಿರುವ ಹರೀಶ್ ಗೌಡನನ್ನು ಬಂಧಿಸಲಾಗಿದೆ.
ಕೋಳಿ ವ್ಯಾಪಾರದ ಅಂಗಡಿಗೆ ಲೈಸನ್ಸ್ ನೀಡುವ ಸಂಬಂಧ ಹರೀಶ್ ಹಣದ ಬೇಡಿಕೆಯನ್ನು ಇಟ್ಟಿದ್ದ. ಇದರಿಂದ ಬೇಸತ್ತು ಲೋಕಾಯುಕ್ತ ಮೊರೆಗೆ ಕೋಳಿ ವ್ಯಾಪಾರಿ ಹೋಗಿದ್ದ. ಇಂದು ಹಣ ಪಡೆಯುವಾಗ ಲೋಕಾಯುಕ್ತ ಎಸ್ಪಿ ಮೃತ್ಯುಂಜಯ ದಾಳಿ ನೆಡೆಸಿದ್ದಾರೆ.
ಲೋಕಾಯುಕ್ತ ಎಸ್ಪಿ ನೋಡುತ್ತಿದ್ದಂತೆ ಹಣ ಸುಡಲು ಹರೀಶ್ ಯತ್ನಿಸಿದ್ದು ಹಣದ ಕಂತೆಗಳು ಕೂಡ ಭಾಗಶಃ ಸುಟ್ಟುಹೋಗಿವೆ.
ಅಂಗಡಿ ನಡೆಸಲು ಯಾವುದೆ ಸಮಸ್ಯೆ ಆಗದಂತೆ ನೋಡಿಕೊಳ್ಳಲು, ಪ್ರತಿ ತಿಂಗಳು 3 ಸಾವಿರ ರೂ. ಹಣ ನೀಡಬೇಕು ಎಂದು ಪಟ್ಟಣ ಪಂಚಾಯಿತಿ ಸದಸ್ಯ ಹರೀಶ್ ಗೌಡ ಸೂಚಿಸಿದ್ದಾರೆ. ಇದು ಕಷ್ಟವಾಗಲಿದೆ ಎಂದು ಅಹ್ಮದ್ ಅಬ್ದುಲ್ ತಿಳಿಸಿದ್ದಾರೆ. ಆಗ 50 ಸಾವಿರ ರೂ. ಕೊಡುವಂತೆ ಹರೀಶ್ ಗೌಡ ತಿಳಿಸಿದ್ದಾರೆ.
ಸದ್ಯ ಪಟ್ಟಣ ಪಂಚಾಯಿತಿ ಸದಸ್ಯ ಹರೀಶ್ ಗೌಡನನ್ನ ಬಂಧಿಸಲಾಗಿದೆ. ಶಿವಮೊಗ್ಗ ಲೋಕಾಯುಕ್ತ ಡಿ.ವೈ.ಎಸ್.ಪಿ ಮೃತ್ಯುಂಜಯ.ಎನ್ ಅವರ ಮಾರ್ಗದರ್ಶನದಲ್ಲಿ ದಾಳಿ ನಡೆಸಲಾಯಿತು. ಇನ್ಸ್ ಪೆಕ್ಟರ್ ರಾಧಾಕೃಷ್ಣ, ಇನ್ಸ್ ಪೆಕ್ಟರ್ ಹೆಚ್.ಎಂ.ಜಗನ್ನಾಥ, ಸಿಬ್ಬಂದಿ ಪ್ರಸನ್ನ, ಬಿ.ಲೋಕೇಶಪ್ಪ, ಮಹಾಂತೇಶ, ಚನ್ನೇಶ, ಪ್ರಶಾಂತ್ ಕುಮಾರ್, ಅರುಣ್ ಕುಮಾರ್, ಪುಟ್ಟಮ್ಮ, ಸಾವಿತ್ರಮ್ಮ, ಗಂಗಾಧರ, ತರುಣ್ ಕುಮಾರ್, ಪ್ರದೀಪ್ ಕುಮಾರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.