ರಿಪ್ಪನ್‌ಪೇಟೆ : ಪುರಾಣ ಪ್ರಸಿದ್ಧವಾದ ಕೋಡೂರಿನ ಜೇನುಕಲ್ಲಮ್ಮ ಘಟ್ಟವನ್ನು ಪ್ರೇಕ್ಷಣೀಯ ಸ್ಥಳವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಶಾಸಕ ಹಾಗೂ ಎಂಎಸ್‌ಐಎಲ್ ಅಧ್ಯಕ್ಷ ಹರತಾಳು ಹಾಲಪ್ಪ ಹೇಳಿದರು.
ಅಮ್ಮನಘಟ್ಟದ ಜೇನುಕಲ್ಲಮ್ಮ ಸಮುದಾಯ ಭವನದಲ್ಲಿ ಶನಿವಾರ ಮುಜರಾಯಿ ಮತ್ತು ಅಭಿವೃದ್ಧಿ ಸಮಿತಿಗಳ ಸಮನ್ವಯ ಸಭೆಯಲ್ಲಿ ಮಾತನಾಡಿ ದೇವಿಯ ದೇವಸ್ಥಾನವನ್ನು ಅಭಿವೃದ್ಧಿ ಪಡಿಸುವಲ್ಲಿ ಈ ಹಿಂದಿನ ಸಮಿತಿ ಕಾರ್ಯ ಪ್ರೌವೃತ್ತವಾಗಿತ್ತು. ಈಗಿನ ನೂತನ ಸಮಿತಿಯು ಅಭಿವೃದ್ಧಿಯ ಮುಂದಾಲೋಚನೆಯನ್ನು ಹೊಂದಿದ್ದು, ಯಾವುದೇ ಭಿನ್ನಾಭಿಪ್ರಾಯಗಳಿಲ್ಲದಂತೆ ಒಂದುಗೂಡಿ ಅಭಿವೃದ್ಧಿ ಕೆಲಸ ನಿರ್ವಹಿಸಲು ಸಲಹೆ ನೀಡಿದ್ದೇನೆ. ಸರ್ಕಾರದ ಕೆಲಸ ವ್ಯಾಪಾರವೂ ಅಲ್ಲ, ದೇವಸ್ಥಾನ ನಿರ್ಮಾಣವೂ ಅಲ್ಲ,ಸುಶಾಸನ ರಚಿಸುವುದಾಗಿದೆ. ಶಾಸಕನಾಗಿ, ಸಮಿತಿಗೆ ಗೌರವಾಧ್ಯಕ್ಷನಾಗಿ ಪರವಿರೋಧಗಳಿಲ್ಲದೆ ಸಹಕರಿಸುತ್ತೇನೆ. ದೇವಸ್ಥಾನದ ಅಭಿವೃದ್ಧಿಯಲ್ಲಿ ಯಾವುದೇ ಗೊಂದಲಗಳಿಲ್ಲಿದೆ ನಿರ್ವಹಿಸಬೇಕಿರುವುದರಿಂದ ಪ್ರತಿಯೊಬ್ಬ ಭಕ್ತರ ಸಹಕಾರವು ಅಗತ್ಯವಿದೆ.
ಕ್ಷೇತ್ರದ ಪೌರಾಣಿಕ ಇತಿಹಾಸವನ್ನು ಅರಿತ ಹಿಂದಿನ ಹಿರಿಯರು
ಇಪ್ಪತ್ತೈದು ಎಕರೆ ಜಾಗವನ್ನು ದೇವಸ್ಥಾನದ ಅಭಿವೃದ್ಧಿಗಾಗಿ ಮಂಜೂರುಮಾಡಿಸಿದ್ದಾರೆ. ಆ ಜಾಗದಲ್ಲಿ ಸುವ್ಯವಸ್ಥಿತ ಯೋಜನೆಯೊಂದಿಗೆ ನೀಲನಕ್ಷೆ ತಯಾರಿಸುವ ಮೂಲಕ ಅಭಿವೃದ್ಧಿ ಪಡಿಸಲಾಗುವುದು. ಅಭಿವೃದ್ಧಿಯಲ್ಲಿ ಸುಂದರವಾಗಿರುವ ಪರಿಸರವನ್ನು ಉಳಿಸಿಕೊಂಡು ಪ್ರಕೃತಿ ಸೌಂದರ್ಯಕ್ಕೂ
ಆದ್ಯತೆ ನೀಡಲಾಗುವುದು. ನಿಗಧಿತ ಪ್ರದೇಶವನ್ನು ಸರ್ವೆಮಾಡಿಸಿ ಹದ್ದುಬಸ್ತು ಮಾಡುವಂತೆ ತಹಶೀಲ್ದಾರ್‌ರವರಿಗೆ ಸೂಚಿಸಿದ್ದೇನೆ.
ಮುಂದಿನ ಇಪ್ಪತೈದು ವರ್ಷದಲ್ಲಿ ನೂರಾರು ವರ್ಷದ ದೂರಾಲೋಚನೆಯ ಯೋಜನೆ ನೇರವೇರಿಸಲಾಗುವುದು.
ನೂತನ ಶಿಲಾಮಯ ದೇವಸ್ಥಾನ ನಿರ್ಮಾಣಕ್ಕೆ 5 ಕೋಟಿ ರೂಪಾಯಿಗಳ ಅಂದಾಜು ವೆಚ್ಚವನ್ನು ಪರಿಗಣಿಸಲಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಒಂದು ವರ್ಷದಲ್ಲಿ ದೇವಸ್ಥಾನದ ಮುಖಮಂಟಪ ನಿರ್ಮಾಣ, 5 ವರ್ಷದಲ್ಲಿ ಅಮ್ಮನಘಟ್ಟದ ಸಮಗ್ರಅಭಿವೃದ್ಧಿ, 25 ವರ್ಷದಲ್ಲಿ ಸಾವಿರಾರು ಜನರನ್ನು ಪ್ರತಿನಿತ್ಯ ಆಕರ್ಷಿಸುವ ಪ್ರೇಕ್ಷಣೀಯ ಸ್ಥಳವನ್ನಾಗಿ ಮಾರ್ಪಡಿಸಲಾಗುವುದು. ಇದಕ್ಕೆ ಸರ್ಕಾರದಿಂದ ಹೆಚ್ಚಿನ ಅನುದಾನವನ್ನು ಕೊಡಿಸಲು ಶ್ರಮವಹಿಸುತ್ತೇನೆ. ದಾನಿಗಳು ಹಾಗೂ ಭಕ್ತರ ಸಹಕಾರದಿಂದ 5 ವರ್ಷದಲ್ಲಿ 10 ಕೋಟಿ ರೂಪಾಯಿಗಳ ವೆಚ್ಚದೊಂದಿಗೆ ಅಭಿವೃದ್ಧಿ ಪಡಿಸಲಾಗುವುದು.
ಡಿಸೆಂಬರ್ 28 ರಂದು ನೂತನ ದೇವಸ್ಥಾನದ ನಿರ್ಮಾಣಕ್ಕೆ ಭೂಮಿ ಪೂಜೆ ನಿಗಧಿಪಡಿಸಲಾಗಿದ್ದು, ಈ ಪುಣ್ಯಕಾರ್ಯಕ್ಕೆ ಶ್ರೀರಾಮಚಂದ್ರಪುರ ಮಠದ ಶ್ರೀರಾಘವೇಶ್ವರ ಸ್ವಾಮೀಜಿ ಸಾನಿಧ್ಯವಹಿಸುವರು.
ಸಮಾರಂಭದಲ್ಲಿ ಗೃಹ ಸಚಿವರ ಆರಗ ಜ್ಞಾನೇಂದ್ರ, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮುಂತಾದ ನಾಯಕರುಗಳು ಪಾಲ್ಗೊಳ್ಳುವರೆಂದರು.
ಈ ಸಂಧರ್ಭದಲ್ಲಿ ದೇವಸ್ಥಾನದ ನೀಲನಕ್ಷೆಯನ್ನು ಶಾಸಕರು ವೀಕ್ಷಿಸಿದರು.
ತಹಶೀಲ್ದಾರ್ ರಾಜೀವ್, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಬಿ. ಸ್ವಾಮಿರಾವ್, ಕಲಗೋಡು ರತ್ನಾಕರ, ಮಾಜಿ ಶಾಸಕ ಕುಮಾರಸ್ವಾಮಿ,ಸುಧೀರ, ಸರೋಜಮ್ಮ, ಪುಟ್ಟಪ್ಪ, ಸಂತೋಷ, ಶ್ರೀನಿವಾಸ, ವಿಜೇಂದ್ರರಾವ್,ಕಲ್ಯಾಣಪ್ಪಗೌಡ, ಗ್ರಾ.ಪಂ. ಉಪಾಧ್ಯಕ್ಷ ಜಯಪ್ರಕಾಶ್ ಶೆಟ್ಟಿ, ಬಂಡಿ ರಾಮಚಂದ್ರ,ಚಂದ್ರಮೌಳಿ, ಬೆಳಗೋಡು ಗಣಪತಿ,ಉಮೇಶ್ ಜಾಗದ್ದೆ,ಸಿವಿಲ್ ಇಂಜಿನಿಯರ್ ರಾಘವೇಂದ್ರ ರಿಪ್ಪನ್‌ಪೇಟೆ, ಮೇಘರಾಜ್ ಹಾಗೂ ಇನ್ನಿತರರಿದ್ದರು.