ಶಿವಮೊಗ್ಗ ಮತ್ತೆ ಉದ್ವಿಗ್ನ | ಮಾರಕಾಸ್ತ್ರಗಳಿಂದ ವ್ಯಕ್ತಿಯ ಮೇಲೆ ಹಲ್ಲೆ : ಕಲ್ಲು ತೂರಾಟ|Shivamogga

ಶಿವಮೊಗ್ಗ: ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ಸೀಗೆಹಟ್ಟಿ ಬಳಿಯ ಧರ್ಮಪ್ಪ ನಗರದಲ್ಲಿ ನಡೆದಿದ್ದು, ಹಲ್ಲೆಗೊಳಗಾದ ವ್ಯಕ್ತಿಯನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸೋಮವಾರ ರಾತ್ರಿ 11.30ರ ಸುಮಾರಿಗೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಧರ್ಮಪ್ಪ ನಗರದ ಎರಡನೇ ಕ್ರಾಸ್ ನಿವಾಸಿ ಪ್ರಕಾಶ್ (25)ಎಂಬಾತನ ಮೇಲೆ ಹಲ್ಲೆ ನಡೆಸಿದ್ದಾರೆ. ಪ್ರಕಾಶ್‌ನ ತಲೆಗೆ ಗಾಯವಾಗಿದ್ದು, ಮೆಗ್ಗಾನ್ ಅಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಿಂದ ಕೆಲಕಾಲ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿತ್ತು. 

ಸುದ್ದಿ ತಿಳಿದು ಸ್ಥಳಕ್ಕೆ ಬಂದ ಎಸ್ಪಿ ಜಿ.ಕೆ.ಮಿಥುನ್ ಕುಮಾರ್, ಎಎಸ್ಪಿ ವಿಕ್ರಂ ಆಮ್ಟೆ ಸ್ಥಳದಲ್ಲಿ ಜಮಾಯಿಸಿದ್ದ ಜನರನ್ನು ಸಮಾಧಾನಪಡಿಸಿದ್ದಾರೆ.

 ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಧರ್ಮಪ್ಪ ನಗರ ಮತ್ತು ಸೀಗೆಹಟ್ಟಿಯಲ್ಲಿ ಪೊಲೀಸರು ಬಿಗು ಬಂದೋಬಸ್ತ್ ಏರ್ಪಡಿಸಲಾಗಿದೆ. ಕೆಎಸ್ಆರ್‌ಪಿ ತುಕಡಿಯನ್ನು ನಿಯೋಜಿಸಲಾಗಿದ್ದು, ರಾತ್ರಿ ಬೀಟ್ ಕೂಡ ಹೆಚ್ಚಿಸಲಾಗಿದೆ.

ಇತ್ತ ಗಾಯಾಳು ಪ್ರಕಾಶ್ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಎಸ್ಪಿ ಮತ್ತು ಎಎಸ್ಪಿ ಮೆಗ್ಗಾನ್ ಆಸ್ಪತ್ರೆಗೂ ಭೇಟಿ ನೀಡಿದ್ದು, ಗಾಯಾಳು ಪ್ರಕಾಶ್ ಅವರಿಂದ ಮಾಹಿತಿ ಪಡೆದುಕೊಂಡಿದ್ದಾರೆ.

 ಮಾದ್ಯಮದೊಂದಿಗೆ ಮಾತನಾಡಿದ ಎಸ್ಪಿ ಮಿಥುನ್ ಕುಮಾರ್, ಬೈಕ್‌ನಲ್ಲಿ ಬಂದ ಮೂವರು ಹಲ್ಲೆ ನಡೆಸಿರುವುದಾಗಿ ಪ್ರಕಾಶ್ ತಿಳಿಸಿದ್ದಾರೆ. ದುಷ್ಕರ್ಮಿಗಳ ಪತ್ತೆಗಾಗಿ ಜಾಲ ಬೀಸಿದ್ದೇವೆ. ಪರಿಸರದ ಸಿಸಿಟಿವಿ ಫೂಟೇಜ್ಗಳ ಪರಿಶೀಲನೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಘಟನೆಯ ಪ್ರತ್ಯಕ್ಷದರ್ಶಿ, ಪ್ರಕಾಶ್ ಅವರ ಸೋದರ ಸಂಬಂಧಿ ಕೃಷ್ಣ ಮಾತನಾಡಿ, ಮೂರು ಬೈಕ್‌ಗಳಲ್ಲಿ ಒಂಬತ್ತು ಜನರು ಬಂದಿದ್ದರು. ಕೈಯಲ್ಲಿ ಶಸ್ತ್ರಾಸ್ತ್ರಗಳಿದ್ದವು. ಆರ್‌ಎಸ್ಎಸ್, ಭಜರಂಗದಳಕ್ಕೆ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದರು. ಎಲ್ಲರೂ ಮುಖವನ್ನು ಮರೆಮಾಚಿಕೊಂಡಿದ್ದರು. ಒಂದು ಬೈಕ್‌ನ ಮೂವರು ಪ್ರಕಾಶ್ ಮೇಲೆ ಹಲ್ಲೆ ನಡೆಸಿ, ಪರಾರಿಯಾಗಿದ್ದಾರೆ. ತಕ್ಷಣ ಪ್ರಕಾಶ್ ಮನೆಯೊಳಗೆ ಓಡಿ ಹೋಗಿದ್ದು, ಆತನನ್ನು ನಾವು ಮೆಗ್ಗಾನ್ ಆಸ್ಪತ್ರೆಗೆ ಕರೆತಂದು ದಾಖಲಿಸಿದ್ದೇವೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *