ರಿಪ್ಪನ್‌ಪೇಟೆ : ಇಲ್ಲಿನ ತೀರ್ಥಹಳ್ಳಿ ರಸ್ತೆಯಲ್ಲಿ ವಾಸವಾಗಿರುವ ನಿವೃತ್ತ ಎಎಸ್ ಐ ರೊಬ್ಬರ ಮನೆಗೆ ಹಗಲು ಹೊತ್ತಿನಲ್ಲಿಯೇ ಕಳ್ಳರು ನುಗ್ಗಿ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣವನ್ನು ಕಳ್ಳತನ ಮಾಡಿರುವ ಘಟನೆ ಇಂದು ನಡೆದಿದೆ.
ದಿನದಿಂದ ದಿನಕ್ಕೆ ಕಳ್ಳರು ಸ್ಮಾರ್ಟ್ ಆಗುತ್ತಿದ್ದಾರೆ, ಮತ್ತಷ್ಟು ಚುರುಕಾಗುತ್ತಿದ್ದಾರೆ. ತಂತ್ರಜ್ಞಾನ ಎಷ್ಟೇ ಅಭಿವೃದ್ಧಿ ಹೊಂದಿದರೂ.. ಅವರವರದ್ದೇ ಆದ ದಾರಿಗಳನ್ನು ಕಂಡುಕೊಂಡು, ತಾವು ಐನಾತಿ ಕಳ್ಳರೇ ಸರಿ ಎಂಬವುದನ್ನು ಸಾಬೀತುಪಡಿಸುತ್ತಿದ್ದಾರೆ. ತಂತ್ರಜ್ಞಾನದ ಸಮ್ಮುಖದಲ್ಲಿ ರಾತ್ರಿಗಳು ಮೊದಲಿನಂತಿಲ್ಲ… ಹಾಗಂತ ಹಗಲು ಎಚ್ಚೆತ್ತುಕೊಳ್ಳುವುದಕ್ಕೆ ಅವಕಾಶವಿದೆಯಾ ಎಂದು ನೋಡಿದರೆ ಡೇ ಟೈಮ್ ಕೂಡ ಚೋರ ವಿದ್ಯೆ ಢಾಳಾಗಿ ಕಂಡುಬರುತ್ತಿದೆ.
ರಿಪ್ಪನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂತಹ ಒಂದು ಆಘಾತಕಾರಿ ಕಳ್ಳತನವೊಂದು ಬೆಳಕಿಗೆ ಬಂದಿದೆ. ಕಳ್ಳತನ ಮಾಡಿದ ರೀತಿ ನೋಡಿ ಸಾರ್ವಜನಿಕರು ಬೆಚ್ಚಿ ಬಿದ್ದಿದ್ದಾರೆ.
ಇಂದು ಬೆಳಿಗ್ಗೆ 9-00 ಗಂಟೆಗೆ ತೀರ್ಥಹಳ್ಳಿ ರಸ್ತೆಯಲ್ಲಿ ವಾಸವಾಗಿರುವ ನಿವೃತ್ತ ಎ ಎಸ್ ಐ ತಮ್ಮ ಮನೆಯ ಬಾಗಿಲನ್ನು ಹಾಕಿಕೊಂಡು ಇಂಟರ್ ಲಾಕ್ ಮಾಡಿ ತಮ್ಮ ಪತ್ನಿಯ ಜೊತೆ ತೀರ್ಥಹಳ್ಳಿ ಸಂಬಂಧಿಕರ ಮನೆಗೆ ತೆರಳಿ ಮಧ್ಯಾಹ್ನ 12 ರ ಸುಮಾರಿಗೆ ಮನೆಗೆ ವಾಪಾಸ್ ಹಿಂದಿರುಗಿದ್ದಾರೆ.
ಅಷ್ಟರಲ್ಲಿ ಮನೆಯ ಹಿಂಬದಿಯ ಬಾಗಿಲು ಮುರಿದು ಒಳನುಗ್ಗಿದ್ದ ಕಳ್ಳರು ಗಾಡ್ರೇಜ್ ಬೀರುವಿನಲ್ಲಿದ್ದ ಅಂದಾಜು ಸುಮಾರು ಹತ್ತು ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ.
ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.