ಸ್ವಾತಂತ್ರ್ಯ ದಿನಾಚರಣೆ ದಿನವಾದ ಸೋಮವಾರ ಸಂಜೆ ಸಾವರ್ಕರ್ ಫ್ಲೆಕ್ಸ್ ತೆರವು ವಿವಾದದಲ್ಲಿ ಪ್ರೇಮ್ಸಿಂಗ್ ಎಂಬಾತನಿಗೆ ಮುಸ್ಲಿಂ ಯುವಕರು ಚಾಕುವಿನಿಂದ ಇರಿದ ಪ್ರಕರಣ ಸಂಬಂಧ ಶಿವಮೊಗ್ಗದಲ್ಲಿ ಪ್ರಕ್ಷ್ಯಬ್ಧ ಸ್ಥಿತಿ ನಿರ್ಮಾಣಗೊಂಡಿದೆ.
ಇದರ ಬೆನ್ನಲ್ಲೇ ಅಂದರೆ ಮಂಗಳವಾರ ಭದ್ರಾವತಿಯಲ್ಲಿ ಹಿಂದು ಯುವಕ ಸುನೀಲ್ ಎಂಬಾತನ ಮೇಲೆ ಅನ್ಯಕೋಮಿನ ಯುವಕನಿಂದ ಹಲ್ಲೆ ನಡೆದಿತ್ತು. ಇದು ಶಿವಮೊಗ್ಗ ಜಿಲ್ಲೆ ಮಾತ್ರವಲ್ಲ, ರಾಜ್ಯವನ್ನೇ ತಲ್ಲಣಗೊಳಿಸಿತ್ತು. ಇದೀಗ ಸುನೀಲ್ ಮೇಲಿನ ಹಲ್ಲೆ ಪ್ರಕರಣ ಕುರಿತು ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್, ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ಭದ್ರಾವತಿ ಯುವಕನ ಪ್ರಕರಣ ಕುರಿತು ವಿಡಿಯೋ ಬಿಡುಗಡೆ ಮಾಡಿದ ಬಿ.ಕೆ.ಸಂಗಮೇಶ್, ಹಲ್ಲೆಗೊಳಗಾದ ಸುನೀಲ್ ಹಾಗೂ ಹಲ್ಲೆ ನಡೆಸಿದ ಮುಬಾರಕ್ ಇಬ್ಬರೂ ಸ್ನೇಹಿತರು. ಜೂಜಾಟದ ವಿಷಯಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆದಿದೆ. ಇದೇ ಕಾರಣಕ್ಕೆ ಮುಬಾರಕ್, ಸುನೀಲ್ ಮೂಗಿಗೆ ಹೊಡೆದಿದ್ದಾನೆ. ಇದನ್ನು ಕೋಮುಗಲಭೆಗೆ ಹಾಗೂ ಊರಿನಲ್ಲಿ ಅಶಾಂತಿ ಮೂಡಿಸಲು ಬಿಜೆಪಿ ಬಳಸಿಕೊಳ್ಳುತ್ತಿದೆ. ಭದ್ರಾವತಿಯಲ್ಲಿ ನಾವೆಲ್ಲರೂ ಒಂದೇ ತಾಯಿಯ ಮಕ್ಕಳಂತೆ ಇದ್ದೇವೆ. ಬಿಜೆಪಿ ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡಲು ಹೊರಟಿದೆ. ಆದರೆ ಭದ್ರಾವತಿಯಲ್ಲಿ ಇದಕ್ಕೆ ಅವಕಾಶವಿಲ್ಲ. ಈ ರೀತಿಯ ಘಟನೆಯಲ್ಲಿ ರಾಜಕಾರಣಿಗಳ ಮಕ್ಕಳು ಸತ್ತಿಲ್ಲ ಹಾಗೂ ಶ್ರೀಮಂತರ ಮಕ್ಕಳೂ ಸತ್ತಿಲ್ಲ. ಬಡವರು ಪಾಪಿಗಳು ಸತ್ತಿದ್ದಾರೆ ಎಂದರು.
ಭದ್ರಾವತಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಹೋಗಲು ಸುನೀಲ್ ಹೊರಟಿದ್ದ. ಆದರೆ ಬಿಜೆಪಿಯವರು ವಿಷಯ ದೊಡ್ಡದು ಮಾಡಿ ಆಸ್ಪತ್ರೆಯಲ್ಲೇ ಉಳಿಯುವಂತೆ ಮಾಡಿದ್ದಾರೆ. ಇದು ಕೋಮುಗಲಭೆಯಲ್ಲ, ಜೂಜಿನ ಕಾರಣಕ್ಕೆ ನಡೆದ ಗಲಾಟೆ ಎಂದು ದೇವಸ್ಥಾನಕ್ಕೆ ನಾನು ಬಂದು ಹೇಳುತ್ತೇನೆ. ಬಿಜೆಪಿಯವರಿಗೆ ಆತ್ಮಸಾಕ್ಷಿ ಇದ್ದರೆ ದೇವರ ಮೇಲೆ ನಂಬಿಕೆ ಇದ್ದರೆ ಇದು ಕೋಮುಗಲಭೆ ಎಂದು ದೇವಾಲಯದಲ್ಲಿ ಪ್ರಮಾಣ ಮಾಡಲಿ. ದೇವಸ್ಥಾನಕ್ಕೆ ಅವರು ಬರಲಿ ಆಣೆ ಮಾಡಲಿ ಎಂದು ಬಿ.ಕೆ.ಸಂಗಮೇಶ್ ಸವಾಲು ಹಾಕಿದರು.
ಬಿಜೆಪಿಯವರು ಬೆಂಕಿ ಹಚ್ಚಿ ನೀರು ಕಾಯಿಸಿಕೊಳ್ಳುವ ಕೆಲಸ ಮಾಡುತಿದ್ದಾರೆ. ಮುಬಾರಕ್ ಯಾರು ಎಂದೇ ನನಗೆ ಗೊತ್ತಿಲ್ಲ, ಹೀಗಿರುವಾಗ ಪೊಲೀಸ್ ಠಾಣೆಗೆ ಕರೆ ಮಾಡಿ ನಾನೇಕೆ ಅವನನ್ನು ಬಿಡಿಸಲಿ? ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಸುಳ್ಳು ಹೇಳಿ ಪ್ರಚೋದನೆ ನೀಡುವುದರಲ್ಲಿ ಎತ್ತಿದ ಕೈ. ಬಿಜೆಪಿ ಅಜೆಂಡಾನೇ ಬರೀ ಹಿಂದುತ್ವ ಹಾಗೂ ಬೆಂಕಿ ಹಚ್ಚುವ ಕೆಲಸ. ಊರು ತಣ್ಣಗೆ ಇರಬೇಕು ಅಂದ್ರೆ ಬಿಜೆಪಿಯವರಿಗೆ ಆಗುವುದಿಲ್ಲ ಎಂದು ಬಿ.ಕೆ.ಸಂಗಮೇಶ್ ಕಟುವಾಗಿ ಟೀಕಿಸಿದರು.
ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇