January 11, 2026

ಬಂಕ್ ಬಾಲು ಹತ್ಯೆಗೆ ಪ್ರತೀಕಾರವಾಗಿ ಹಂದಿ ಅಣ್ಣಿ ಹತ್ಯೆ :ಪೊಲೀಸ್ ವಿಚಾರಣೆ ವೇಳೆ ಬಾಯ್ಬಿಟ್ಟ ಆರೋಪಿಗಳು

ಜುಲೈ14 ರಂದು ಶಿವಮೊಗ್ಗದ ವಿನೋಬನಗರ ಪೊಲೀಸ್ ಚೌಕಿಯ ವೃತ್ತದಲ್ಲಿ ಕುಖ್ಯಾತ ಪಾತಕಿ ಹಂದಿ ಅಣ್ಣಿ ಅಲಿಯಾಸ್ ಅಣ್ಣಪ್ಪ ನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.

ನಡುರಸ್ತೆಯಲ್ಲಿ ಅಣ್ಣಿಯನ್ನು ಹತ್ಯೆ ಮಾಡಿದ ಆರೋಪಿಗಳ ಶೋಧಕ್ಕೆ ಶಿವಮೊಗ್ಗ ಪೊಲೀಸರು 4 ತಂಡ ಕಟ್ಟಿಕೊಂಡು ಆಖಾಡಕ್ಕೆ ಇಳಿದಿದ್ದರು. ದುಷ್ಕರ್ಮಿಗಳ ಜಾಡು ಹಿಡಿದು ಶಿವಮೊಗ್ಗ ಪೊಲೀಸ್ರು ಬೆಂಗಳೂರು, ಕೊಡಗು, ಕಾರವಾರ ಸೇರಿದಂತೆ ಹಲವೇಡೆ ಶೋಧ ಸಹ ನಡೆಸುವ ವೇಳೆಯೇ 8 ಜನ ಕೊಲೆ ಆರೋಪಿಗಳು ಕಳೆದ ಸೋಮವಾರ ರಾತ್ರಿ ಚಿಕ್ಕಮಗಳೂರು ನಗರ ಠಾಣೆಯಲ್ಲಿ ಶರಣಾಗಿದ್ದರು.

ಬಳಿಕ ಅಲ್ಲಿನ ಪೊಲೀಸರಿಂದ 8 ಆರೋಪಿಗಳನ್ನು ವಶಕ್ಕೆ ಪಡೆದ ಶಿವಮೊಗ್ಗ ಪೊಲೀಸರು, ಇಲ್ಲಿಗೆ ಕರೆತಂದಿದ್ದರಲ್ಲದೇ ಸ್ವಲ್ಪ ವಿಚಾರಣೆ ಸಹ ನಡೆಸಿದ್ದಾರೆ ಎನ್ನಲಾಗಿದೆ. ಬಳಿಕ ಕೊಲೆ ಆರೋಪಿಗಳಾದ ಕಾಡಾ ಕಾರ್ತಿಕ್ ಅಲಿಯಾಸ್ ಕಾರ್ತಿಕ್, ನಿತಿನ್ ಅಲಿಯಾಸ್ ಭಜರಂಗಿ ಭಾಯ್, ಫಾರುಕ್, ಮಧು, ಆಂಜನೇಯ, ಚಂದನ್, ಮದನ್ ರಾಯ್ , ಮಧುಸೂದನ್ ರನ್ನು ಶಿವಮೊಗ್ಗದ 5ನೇ ಜೆಎಂಎಫ್ ಸಿ ಕೋರ್ಟ್ ಗೆ ಹಾಜರು ಪಡಿಸಿದ್ದರಲ್ಲದೇ, ಹೆಚ್ಚಿನ ವಿಚಾರಣೆಗೆ ಅವಕಾಶ ನೀಡುವಂತೆ ಕಾಲಾವಕಾಶ ಕೋರಿದ್ದರು.
ಅದರಂತೆ ನ್ಯಾಯಾಲಯ 8 ದಿನಗಳ ಕಾಲ ಶಿವಮೊಗ್ಗ ಪೊಲೀಸರ ವಶಕ್ಕೆ ನೀಡಿದ್ದು, ಕೃತ್ಯಕ್ಕೆ ಬಳಸಿದ ಮೊಬೈಲ್, ವಾಹನ, ಮಾರಕಾಸ್ತ್ರಗಳ ರಿಕವರಿ ಜೊತೆ ಆರೋಪಿಗಳ ವಿಚಾರಣೆ ಆರಂಭಿಸಲಾಗಿತ್ತು.

ಹಂದಿ ಅಣ್ಣಿ ಹಾಗೂ ಕಾಡಾ ಕಾರ್ತಿಕ್ ನಡುವಿನ ವೈಷಮ್ಯ :

ಇನ್ನೂ ಶಿವಮೊಗ್ಗ ಪೊಲೀಸರ ಆರಂಭಿಕ ವಿಚಾರಣೆಯಲ್ಲೇ ಕೊಲೆ ಆರೋಪಿಗಳು ಹಂದಿ ಅಣ್ಣಿಯ ಭೀಕರ ಹತ್ಯೆಯ ಹಿಂದಿನ ಕಾರಣವನ್ನು ಬಾಯ್ಬಿಟ್ಟಿದ್ದು, ಹಂದಿ ಅಣ್ಣಿ ಹಾಗೂ ಕಾಡಾ ಕಾರ್ತಿಕ ನಡುವಿನ ವೈಶಮ್ಯವೇ ಕೊಲೆಗೆ ಕಾರಣ ಎಂಬ ಸತ್ಯ ವಿಚಾರಣೆ ವೇಳೆ ಹೊರಬಿದ್ದಿದೆ.

ಬಂಕ್ ಬಾಲು ಹತ್ಯೆಗೆ ಪ್ರತೀಕಾರ ತೀರಿಸುವ ಪ್ರಮಾಣ:

2018ರಲ್ಲಿ ಶಿವಮೊಗ್ಗದ ಹರಿಗೆ ಸಮೀಪದ ಹಾತಿನಗರ ಬಳಿ ರೌಡಿ ಶೀಟರ್ ಬಂಕ್  ಬಾಲುವನ್ನು ಕೊಲೆ ಮಾಡಲಾಗಿತ್ತು. ಬಾಲು ಕೊಲೆಯಾಗುವ ಸಂದರ್ಭದಲ್ಲಿ ಕಾಡಾ ಕಾರ್ತಿಕ್ ಸಹ ಜೊತೆಗೆ ಇದ್ದನು. ಅಂದೇ ತನ್ನ ಸ್ನೇಹಿತರೊಂದಿಗೆ ಹತ್ಯೆಗೆ ಪ್ರತಿಕಾರ ತೀರಿಸಿಕೊಳ್ಳುವುದಾಗಿ ಪ್ರಮಾಣ ಸಹ ಮಾಡಿದ್ದ. ಅಂದಿನಿಂದ ಪ್ರತಿಕಾರಕ್ಕೆ ಕಾಯುತ್ತಿದ್ದ ಬಾಲು ಸಹಚರರಾದ ಕಾರ್ತಿಕ್, ಫಾರುಕ್, ನಿತಿನ್ ಹಾಗೂ ಮಧು ಸಮಯ ಸಾಧಿಸಿ, ಹಂದಿ ಅಣ್ಣಿ ಯನ್ನು ಹತ್ಯೆ ಮಾಡಿದ್ದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ.

ಕಾಡಾ ಕಾರ್ತಿಕ್ ಗೆ ತಂಗಿಯ ಮದುವೆಗೂ ಶಿವಮೊಗ್ಗಕ್ಕೆ ಬರಲು ಅವಕಾಶ ನೀಡದ ಹಂದಿ ಅಣ್ಣಿ:

ಜೊತೆಗೆ ಬಂಕ್ ಬಾಲು ಕೊಲೆ ನಂತರದಲ್ಲಿ ಕಾರ್ತಿಕ್ ಹಾಗೂ ಹಂದಿ ಅಣ್ಣಿ ನಡುವೆ ವೈಶಮ್ಯ ಹೆಚ್ಚಾಗಿತ್ತು. ಶಿವಮೊಗ್ಗಕ್ಕೆ ಬಂದರೇ ನಿನ್ನನ್ನು ಬಿಡಲ್ಲ ಎಂದು ಕಾಡಾ ಕಾರ್ತಿಕ್ ಗೆ ಅಣ್ಣಿ ವಾರ್ನಿಂಗ್ ಮಾಡಿದ್ದ. ಅಂದಿನಿಂದ ಬೆಂಗಳೂರಿನ ಸುತ್ತಮುತ್ತ ಕೆಲಸ ಮಾಡಿಕೊಂಡು ಜೀವನ ಮಾಡುತ್ತಿದ್ದ, ಕಾರ್ತಿಕ್ ತಂಗಿಯ ಮದುವೆ ಸಮಯದಲ್ಲೂ ಶಿವಮೊಗ್ಗಕ್ಕೆ ಬರಲೂ ಹಂದಿ ಅಣ್ಣಿ ಬಿಟ್ಟಿರಲಿಲ್ಲ. ಇದೇ ಸಿಟ್ಟಿಗೆ ಹಂದಿ ಅಣ್ಣಿಯನ್ನು ಕೊಲೆ ಮಾಡಿರುವುದಾಗಿ ಆರೋಪಿಗಳು ಬಾಯಿ ಬಿಟ್ಟಿದ್ದಾರೆ

.

ಹಂದಿ ಅಣ್ಣಿ ಕೊಲೆ ಮಾಡಿದ ಹಂತಕರು ಹತ್ಯೆ ಮಾಡಲು ಬಳಸಿದ್ದ ಆಯುಧ ಮತ್ತು ಹತ್ಯೆಯ ನಂತರ ತಾವು ಓಡಾಡಿದ ಊರುಗಳನ್ನೂ ನ್ಯಾಯಾಲಯದ ಮುಂದೆ ಬಾಯಿಬಿಟ್ಟಿದ್ದಾರೆ ಎನ್ನಲಾಗಿದೆ. ಹೊನ್ನಾಳಿ ರಸ್ತೆಯ ಮೂಲಕ ಹರಿಹರ ಹರಿಹರದಿಂದ ಹುಬ್ಬಳ್ಳಿ,ಹುಬ್ಬಳ್ಳಿಯಿಂದ ಬೆಂಗಳೂರಿಗೆ ಬಂದು ಚಿಕ್ಕಮಗಳೂರಿನಲ್ಲಿ ಸರೆಂಡರ್ ಆಗಿರುವುದಾಗಿ ತಿಳಿದು ಬಂದಿದೆ.  ತಾವು ಹೊನ್ನಾಳಿಗೆ ಹೋಗುವಾಗ ಮಾರ್ಗ ಮಧ್ಯದಲ್ಲಿ ಕೆರೆ ಒಂದಕ್ಕೆ ಆಯುಧಗಳನ್ನ ಬಿಸಾಕಿರುವುದಾಗಿ ತಿಳಿದುಬಂದಿದೆ.

About The Author

Leave a Reply

Your email address will not be published. Required fields are marked *