ನಿಟ್ಟೂರು: ಗ್ರಾಮೀಣ ಪ್ರದೇಶದಲ್ಲಿ ಪ್ರತಿಭೆಗಳಿದ್ದಾರೆ ಆದರೆ ಅವಕಾಶಗಳಿಲ್ಲ. ಉತ್ತಮ ಅವಕಾಶ ದೊರೆತರೆ ಸಾಧನೆಯನ್ನು ಮಾಡುತ್ತಾರೆ ಎನ್ನುವುದಕ್ಕೆ ಅತ್ಯುತ್ತಮ ಉದಾಹರಣೆಯಾಗಿ ಹೊಸನಗರ ತಾಲೂಕಿನ ಕುಗ್ರಾಮದಲ್ಲಿರುವ ಸಂಪೆಕಟ್ಟೆ ನಿಟ್ಟೂರು ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು 2021 -22 ನೇ ಸಾಲಿನಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶದಲ್ಲಿ ಅತ್ಯುತ್ತಮ ಸಾಧನೆಯನ್ನು ಮಾಡಿದ್ದಾರೆ.
ಸ್ನೇಹಮಯಿ ಮತ್ತು ಕರ್ತವ್ಯ ನಿಷ್ಠೆ ಇರುವ ಉಪನ್ಯಾಸಕರುಗಳಿದ್ದು ಒಳ್ಳೆಯ ಮಾರ್ಗದರ್ಶನ ನೀಡಿದರೆ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಚಟುವಟಿಕೆಗಳಲ್ಲಿ ಅಭೂತಪೂರ್ವ ಸಾಧನೆಯನ್ನು ಮಾಡುತ್ತಾರೆ ಎನ್ನುವುದಕ್ಕೆ ನಿಟ್ಟೂರು ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸಾಕ್ಷಿಯಾಗಿದ್ದಾರೆ.
ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ಶೇಕಡ 91.93 ಫಲಿತಾಂಶ ಈ ಕಾಲೇಜಿಗೆ ಲಭಿಸಿದೆ.ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯನ್ನು 62 ವಿದ್ಯಾರ್ಥಿಗಳು ಬರೆದಿದ್ದು ಅದರಲ್ಲಿ 57 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
12 ವಿದ್ಯಾರ್ಥಿಗಳು ಉನ್ನತ ಶ್ರೇಣಿ ಪಡೆಯುವುದರ ಜೊತೆಗೆ ಕಲಾ ವಿಭಾಗದ ಗಣೇಶ್. ಜಿ. ಆರ್. ಎಂಬ ವಿದ್ಯಾರ್ಥಿ ಕಲಾವಿಭಾಗದಲ್ಲಿ 573 ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ ಜಿಲ್ಲಾಮಟ್ಟದ ರಾಂಕ್ ಅನ್ನು ಸಹ ಪಡೆದುಕೊಂಡಿದ್ದಾನೆ.
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಈ ಅದ್ಭುತ ಸಾಧನೆಗೆ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ , ಕಾಲೇಜಿನ ಪ್ರಾಚಾರ್ಯರಾದ ವೆಂಕಟೇಶ್ ರವರಿಗೆ,
ಕಾಲೇಜಿನ ಹಿರಿಯ ಉಪನ್ಯಾಸಕರಾದ ಗಣೇಶ್ ಮತ್ತು ಉಪನ್ಯಾಸಕರು ಹಾಗೂ ಸಿಬ್ಬಂದಿಗಳ ವೃಂದದವರಿಗೆ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಹಾಗೂ ಶಾಸಕರಾದ ಹರತಾಳು ಹಾಲಪ್ಪ, ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಅಶೋಕ್ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರುಗಳು ನಿಟ್ಟೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸದಸ್ಯರು ಮತ್ತು ಗ್ರಾಮಸ್ಥರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಕುಗ್ರಾಮದ ವಿದ್ಯಾರ್ಥಿಗಳ ಈ ಸಾಧನೆಗೆ ಪೋಸ್ಟ್ ಮ್ಯಾನ್ ಸುದ್ದಿ ಬಳಗದ ವತಿಯಿಂದ ಅಭಿನಂದನೆಗಳು.