ಪೊಲೀಸ್ ಸಿಬ್ಬಂದಿಯ ಎದೆಗೆ ಚಾಕು ಹಾಕಿ ಪರಾರಿಯಾಗಿದ್ದ ಆರೋಪಿಯನ್ನು ಶಿವಮೊಗ್ಗ ಪೊಲೀಸರು ಬಂದಿಸಿದ್ದಾರೆ.
ರಾಜೀವ್ ಗಾಂಧಿ ಬಡಾವಣೆಯಲ್ಲಿ ಆರೋಪಿ ಇದ್ದ ಹಿನ್ನಲೆಯಲ್ಲಿ ಕಾಯಾಚರಣೆ ನಡೆಸಿದ ಪೊಲೀಸರು ಶಾಹಿದ್ ಖುರೇಶಿಯನ್ನು ಬಂಧಿಸಲು ಮುಂದಾಗಿದ್ದಾರೆ. ಈ ವೇಳೆ ಪುನಃ ಚಾಕುವಿನಿಂದ ದಾಳಿಗೆ ಪ್ರಯತ್ನಿಸಿದ್ದಾನೆ. ಆಗ ಆತ್ಮರಕ್ಷಣೆಗಾಗಿ ಪೊಲೀಸರು ಗುಂಡು ಹಾರಿಸಿದ್ದಾರೆ.
ರಾಬರಿ ಕೇಸ್’ಗಳಲ್ಲಿ ಪ್ರಮುಖ ಆರೋಪಿಯಾಗಿದ್ದ ಶಾಹಿದ್ ಖುರೇಶಿಯ ಕಾಲಿಗೆ ಪೊಲೀಸರು ಗುಂಡು ಹೊಡೆದಿದ್ದಾರೆ. ಬಲಗಾಲಿನ ಮಂಡಿಯ ಕೆಳಗೆ ಪೊಲೀಸರು ಗುಂಡು ಹಾರಿಸಿದ್ದು, ಆರೋಪಿಯನ್ನು ಕೂಡಲೆ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಪೊಲೀಸ್ ಸಿಬ್ಬಂದಿಯ ಎದೆಗೆ ಚಾಕು ಇರಿದಿದ್ದ ಆರೋಪಿ:
ದೊಡ್ಡಪೇಟೆ ಠಾಣೆಯ ಕ್ರೈಮ್ ವಿಭಾಗದ ಸಿಬ್ಬಂದಿ ಗುರುನಾಯಕ್ ಮತ್ತು ರಮೇಶ್ ಅವರು ಶಾಹೀದ್ ಖುರೇಶಿ ಬಂಧಿಸಲು ತೆರಳಿದ್ದರು. ‘ಆರೋಪಿ ತನ್ನ ಸೊಂಟದಲ್ಲಿ ಚಾಕು ಇಟ್ಟುಕೊಂಡಿದ್ದ. ನಮ್ಮ ಸಿಬ್ಬಂದಿ ಆತನನ್ನು ಹಿಡಿಯಲು ಹೋದಾಗ ಚಾಕುವಿನಿಂದ ದಾಳಿ ಮಾಡಿದ್ದಾನೆ. ಸಿಬ್ಬಂದಿ ರಮೇಶ್ ಅವರ ಎಡಗೈಗೆ ಹಲ್ಲೆ ಮಾಡಿದ್ದಾನೆ. ಆಗ ಗುರುನಾಯಕ್ ಅವರು ಆರೋಪಿಯನ್ನು ಹಿಡಿದುಕೊಳ್ಳಲು ಮುಂದಾಗಿದ್ದಾರೆ. ಅವರ ಎದೆಗೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ’ ಎಂದು ಜಿಲ್ಲಾ ರಕ್ಷಣಾಧಿಕಾರಿ ತಿಳಿಸಿದ್ದಾರೆ. ಘಟನೆ ಬಳಿಕ ಆರೋಪಿ ಶಾಹೀದ್ ಪರಾರಿಯಾಗಿದ್ದನು.
ಕಳೆದ ತಿಂಗಳು ಶಾಹಿದ್ ಖುರೇಶಿ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ರಾಬರಿ ಪ್ರಕರಣ ದಾಖಲಾಗಿತ್ತು. ಮೇ 5ರಂದು ಆರ್.ಎಂ.ಎಲ್ ನಗರದಲ್ಲಿ ಸದ್ದಾಂ ಹುಸೇನ್ ಎಂಬುವವರನ್ನು ಖುರೀಷಿ ಮತ್ತು ಆತನ ಇಬ್ಬರು ಸಹಚರರು ಅಡ್ಡಗಟ್ಟಿ ಬೆದರಿಕೆ ಒಡ್ಡಿದ್ದರು. 8 ಸಾವಿರ ರೂ. ಹಣ ಕಿತ್ತುಕೊಂಡು ಪರಾರಿಯಾಗಿದ್ದರು. ಈ ಪ್ರಕರಣ ಸಂಬಂಧ ಶಾಹಿದ್ ಖುರೇಷಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದರು.