ಸಾಗರ : ಹೆಂಡತಿಯ ಅಪ್ರಾಪ್ತ ತಂಗಿಯನ್ನು ಗರ್ಭಿಣಿಯನ್ನಾಗಿಸಿದ ಆರೋಪದ ಮೇಲೆ ಸಾಗರ ತಾಲೂಕಿನ ನಿವಾಸಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ವಿಶ್ವ ಬಂಧಿತ ಆರೋಪಿ. 17 ವರ್ಷದ ಬಾಲಕಿಯನ್ನು ಗರ್ಭಿಣಿಯನ್ನಾಗಿಸಿದ್ದ ಈತನ ವಿರುದ್ಧ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಆರೋಪಿಯು ಸಾಗರ ತಾಲೂಕಿನ ಮಹಿಳೆಯನ್ನು ಪ್ರೀತಿಸಿ ಮದುವೆಯಾಗಿದ್ದ. ಈ ಮಹಿಳೆಗೆ ತಂದೆ ಇಲ್ಲದ ಕಾರಣ, ಆಕೆಯ ತಾಯಿ ಹಾಗೂ ಆಕೆಯ ತಂಗಿಯನ್ನು ಆರೋಪಿ ತನ್ನ ಮನೆಗೆ ಕರೆಸಿಕೊಂಡಿದ್ದ. ಎಲ್ಲರೂ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಹೆಂಡತಿಯ ತಂಗಿಯ ಜೊತೆ ವಿಶ್ವ ಸಲುಗೆ ಬೆಳೆಸಿ, ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.
ಗರ್ಭಿಣಿಯಾಗಿದ್ದ ಈಕೆಗೆ ಹೊಟ್ಟೆ ನೋವು ಕಂಡು ಬಂದು ಮನೆಯಲ್ಲಿಯೇ ಮಗು ಜನನವಾಗುತ್ತದೆ. ಮಗುವನ್ನು ಆರೋಪಿ ವಿಶ್ವ ಮನೆಯ ಹಿತ್ತಲಿನಲ್ಲಿಯೇ ಹೂತು ಹಾಕಿದ್ದು, ಮನೆಯವರೇ ಈ ದುಷ್ಕೃತ್ಯಕ್ಕೆ ಬೆಂಬಲ ನೀಡಿದ್ದಾರೆ ಎನ್ನಲಾಗಿದೆ.
ಈಗ ಸಂತ್ರಸ್ತೆ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ವಿಶ್ವನನ್ನು ಪೊಕ್ಸೊ ಕಾಯ್ದೆಯಡಿ ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.