ವರ್ಕ್ ಫ್ರಂ ಹೋಮ್ ಕೆಲಸದ ಆಮಿಷಕ್ಕೆ ಬಿದ್ದ ಯುವಕನೊಬ್ಬ ಸುಮಾರು 5 ಲಕ್ಷ ರೂ. ಕಳೆದುಕೊಂಡಿರುವ ಘಟನೆ ಭದ್ರಾವತಿ ತಾಲೂಕಿನ ಬದನೆಹಾಳ ಗ್ರಾಮದಲ್ಲಿ ನಡೆದಿದೆ.
ಮನೆಯಲ್ಲೇ ಕುಳಿತು ಲಕ್ಷಾಂತರ ರೂಪಾಯಿ ಆದಾಯ ಗಳಿಸಲು ಮುಂದಾದ ಯುವಕನೊಬ್ಬ ಬೋನಸ್ ಮತ್ತು ಕಮೀಷನ್ ಆಸೆಗೆ ಬರೋಬ್ಬರಿ 4.92 ಲಕ್ಷ ರೂ. ಕಳೆದುಕೊಂಡಿದ್ದಾನೆ.
ವಂಚನೆಗೆ ಒಳಗಾಗಿದ್ದು ಹೇಗೆ ???
32 ವರ್ಷದ ಯುವಕ ಮನೆಯಲ್ಲೇ ಕುಳಿತು ಕೆಲಸ ಮಾಡಲು ನಿರ್ಧರಿಸಿ ಅಂತಹ ಅವಕಾಶಗಳನ್ನು ಕಂಡುಕೊಳ್ಳಲು ಗೂಗಲ್ ಮೊರೆ ಹೋಗಿದ್ದ. ಹೀಗೆ ಗೂಗಲ್ ನಲ್ಲಿ ಹುಡುಕುವಾಗ ಶಾಪಿ ಟ್ರಸ್ಟೆಡ್ ಆಯಂಡ್ ಜಿನ್ಯೂನ್ ಎಂಬ APP ಸಿಕ್ಕಿತ್ತು. ಅದರಲ್ಲಿ ಮನೆಯಲ್ಲೇ ಕುಳಿತು ವಿವಿಧ ಉತ್ಪನ್ನಗಳಿಗೆ ಹಣ ಹೂಡಿಕೆ ಮಾಡಿ ಲಾಭ ಗಳಿಸುವ ಬಗ್ಗೆ ಮಾಹಿತಿ ಇತ್ತು. ಅದಕ್ಕೆ ಸಂಬಂಧಿಸಿದಂತೆ ಲಿಂಕ್‌ಗೆ ಕ್ಲಿಕ್ ಮಾಡಿದ್ದು APP ನಲ್ಲಿ ಐಡಿ ತೆರೆದುಕೊಂಡು ಯುವಕನ ಬ್ಯಾಂಕ್ ಖಾತೆಗೆ 100 ರೂ. ಜಮಾ ಕೂಡ ಆಗಿತ್ತು.
ಶೇ.100ರಷ್ಟು ಹೂಡಿಕೆ ಮಾಡಿದರೆ ಬೋನಸ್ ಮತ್ತು ಕಮೀಷನ್ ಕೊಡುವುದಾಗಿ ತಿಳಿಸಿದ್ದು ಸುಲಭವಾಗಿ ಹಣ ಗಳಿಕೆ ಆಸೆಗೆ ಬಿದ್ದ ಯುವಕ ಮೊದಲ ಬಾರಿಗೆ 300 ರೂ., ಆನಂತರ 600 ರೂ. ಹೂಡಿಕೆ ಮಾಡಿದ್ದ. ಕ್ರಮವಾಗಿ 334 ಮತ್ತು 721 ರೂ. ಬೋನಸ್ ಮತ್ತು ಕಮೀಷನ್ ರೂಪದಲ್ಲಿ ಯುವಕನ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿತ್ತು.
ಆನಂತರ ಒಂದೇ ಬಾರಿ ತುಂಬಾ ಹಣ ಗಳಿಸುವ ಆಸೆಗೆ ಬಿದ್ದ ಯುವಕ ಮೇ 3ರಿಂದ 10ರವರೆಗೆ ಫೋನ್ ಪೇ ಮತ್ತು ಇಂಟರ್‌ನೆಟ್ ಬ್ಯಾಂಕಿಂಗ್ ಮೂಲಕ APPನವರು ನೀಡಿದ ಬ್ಯಾಂಕ್ ಅಕೌಂಟ್‌ಗಳಿಗೆ ಹಾಗೂ ಮೊಬೈಲ್ ನಂಬರ್‌ಗೆ ಹಂತ ಹಂತವಾಗಿ 4,92,402 ರೂ. ವರ್ಗಾವಣೆ ಮಾಡಿದ್ದಾನೆ.
ಸಣ್ಣ ಮೊತ್ತದ ಹೂಡಿಕೆಗೆ ತಕ್ಷಣ ಬೋನಸ್, ಕಮಿಷನ್ ಬಂದಿತ್ತು. ಆದರೆ ದೊಡ್ಡ ಮೊತ್ತದ ಹೂಡಿಕೆ ಮಾಡಿದ ಹಣಕ್ಕೆ ಬೋನಸ್ ಮತ್ತು ಕಮೀಷನ್ ಬಾರದಿದ್ದಾಗ ಪ್ರಶ್ನಿಸಿದ್ದ. ಶೇ.100ರಷ್ಟು ಹೂಡಿಕೆ ಮಾಡಲು ಇನ್ನೂ 90 ಸಾವಿರ ರೂ. ಮಾಡಿದರೆ ಬೋನಸ್ ಮತ್ತು ಕಮೀಷನ್ ಹಣ ಸಿಗಲಿದೆ ಎಂದು ಮರು ಸಂದೇಶ ಬಂದಿತ್ತು. ಇದರಿಂದ ಅನುಮಾನಗೊಂಡ ಯುವಕ ಮನೆಯಲ್ಲೇ ಕೆಲಸ ಕೊಡಿಸುವುದಾಗಿ ನಂಬಿಸಿ ವಂಚಿಸಿದ ಕಂಪನಿ ಬಗ್ಗೆ ಸೈಬರ್ ಠಾಣೆಗೆ ದೂರು ನೀಡಿದ್ದಾನೆ.
ಅಲ್ಪ ಹಣ ಕೊಟ್ಟು ಲಾಭದ ಆಸೆ ತೋರಿಸಿದ ವಂಚಕರು ದೊಡ್ಡ ಮೊತ್ತದ ಹಣ ಪಡೆದು ಮೋಸ ಮಾಡುತ್ತಿರುವುದು ಗೊತ್ತಾಗಿ ಈಗ ಯುವಕ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾನೆ.