ರಾಜಕೀಯ ನಾಯಕರು ಪಕ್ಷ ಕಟ್ಟೋ ಕೆಲಸ ಬಿಟ್ಟು – ಊರು ಕಟ್ಟೋ ಕೆಲಸ ಮಾಡಲಿ : ಜೆಡಿಎಸ್ ಯುವ ಮುಖಂಡ ಯಡೂರು ರಾಜಾರಾಮ್

ರಿಪ್ಪನ್‌ಪೇಟೆ: ರಾಜಕೀಯ ಎಂಬುದು ರಾಷ್ಟ್ರೀಯ ಪಕ್ಷಗಳಲ್ಲಿ ಕೇವಲ ವೈಟ್ ಕಾಲರ್ ನಾಯಕರಿಗೆ ಸೀಮಿತವಾಗಿದ್ದು, ಬರೀ ಪಕ್ಷ ಸಂಘಟನೆಯೇ ಇವರ ದ್ಯೇಯವಾಗಿದೆ. ಇದರಿಂದ ಊರು ಅಭಿವೃದ್ಧಿ ಕಾಣಲಿಲ್ಲ ಎಂದು ತೀರ್ಥಹಳ್ಳಿಯ ಮುಂದಿನ ವಿಧಾನ ಸಭಾ ಅಭ್ಯರ್ಥಿ ಎಂದು ಬಿಂಬಿತವಾಗಿರುವ ಜೆಡಿಎಸ್‌ ಯುವ ಮುಖಂಡ ಯಡೂರು ರಾಜಾರಾಮ್‌ ಅಸಮದಾನ ವ್ಯಕ್ತಪಡಿಸಿದರು.


ಪಟ್ಟಣದಲ್ಲಿ ಕರೆದಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಮಾಜವಾದದ ತವರು ಕ್ಷೇತ್ರ ತೀರ್ಥಹಳ್ಳಿಯಲ್ಲಿ ಸಮಾಜವಾದಿ ಚಿಂತಕ ಗೋಪಾಲಗೌಡ ರವರ ಹೆಸರು ದುರ್ಬಳಕೆ ಮಾಡಿಕೊಂಡು ಎಲ್ಲಾ ರಾಷ್ಟ್ರೀಯ ಪಕ್ಷದ ರಾಜಕಾರಣಿಗಳು ಅಧಿಕಾರದ ಚುಕ್ಕಾಣಿ ಹಿಡಿದ್ದಾರೆ ಆದರೆ ಅವರಲ್ಲಿ ಯಾರೊಬ್ಬರು ಜೀವನದಲ್ಲಿ ಗೋಪಾಲಗೌಡರ  ಅದರ್ಶವನ್ನು  ಮೈಗೂಡಿಸಿಕೊಳ್ಳದೆ ಇರುವುದು ವಿಷಾದನೀಯ ಎಂದರು.

ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ 2023 ರ ಚುನಾವಣೆಯಲ್ಲಿ ಶಾಂತವೇರಿ ಗೋಪಾಲಗೌಡರ ಸಮಾಜವಾದಿ ತತ್ವ ಸಿದ್ಧಾಂತಗಳ ಮೂಲಕವೇ ಚುನಾವಣಾ ಅಯೋಗದ ನಿಯಮಾನುಸಾರ ಶುದ್ಧ ರಾಜಕಾರಣಕ್ಕೆ ಅಣಿಯಾಗುತ್ತಿರುವುದಾಗಿ ತಿಳಿಸಿದರು.

ಈ ಬಾರಿ ಜೆಡಿಎಸ್‌ ನಲ್ಲಿ  ಕೃಷಿಕ ವೃತ್ತಿ ಅವಲಂಭಿತ ನನ್ನಂತ ಸಾಮಾನ್ಯ ಯುವ ಜನರಿಗೆ ರಾಜ್ಯದಲ್ಲಿ 40 ಕ್ಕೂ ಅಧಿಕ ಸೀಟ್‌ ಹಂಚಿಕೆ ಮಾಡುವ ಮೂಲಕ ಎರಡನೇ ಹಂತದ ನಾಯಕನನ್ನು ಸೃಷ್ಟಿ ಮಾಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಲಿದೆ ತೀರ್ಥಹಳ್ಳಿಯಲ್ಲಿ ಸಮಾಜವಾದ ಸತ್ತಿದೆ ಎನ್ನುವ ಜನರ ಆಡುಮಾತಿಗೆ ನನ್ನ ಚುನಾವಣೆಯ ಮೂಲಕವೇ  ಉತ್ತರ ಸಿಗಲಿದೆ,ಜಾತಿ ಬೆಂಬಲ ,ಧರ್ಮ ಬೆಂಬಲ ಇಲ್ಲದೇ ಕೇವಲ ಅಭಿವೃದ್ಧಿ ವಿಚಾರದಲ್ಲಿ ಚುನಾವಣೆ ಎದುರಿಸುತ್ತೇವೆ ಎಂದರು.


ಕಿಮ್ಮನೆ ಜೊತೆ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಎಲೆ ಮರೆ ಕಾಯಿಯಂತೆ ಕೆಲಸ ಮಾಡುವ ಮೂಲಕ ಎಲ್ಲಾ ರಾಜಕೀಯ ಪಕ್ಷಗಳ ಕಾರ್ಯಕರ್ತರು ನನಗೆ ಚಿರಪರಿಚಿತರಾಗಿದ್ದಾರೆ. ಈ ನಿಟ್ಟಿನಲ್ಲಿ ಸುಲಲಿತವಾಗಿ ಚುನಾವಣೆ ಎದುರಿಸುವ ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಕೋವಿಡ್‌ ನಂತರದಲ್ಲಿ   ನಿರುದ್ಯೋಗ ಸಮಸ್ಯೆ , ಬೆಲೆ ಏರಿಕೆ ಹಾಗೂ ಭ್ರಷ್ಟಾಚಾರ, ಕಮೀಷನ್‌ ವ್ಯವಸ್ಥೆಯಿಂದ ಯಿಂದ ಜನ ತತ್ತರಿಸಿ ಹೋಗಿದ್ದಾರೆ. ರಾಷ್ಟ್ರೀಯ ಪಕ್ಷಗಳ ಸರ್ವಾಧಿಕಾರಿ ಆಡಳಿತದಿಂದ ಬೇಸತ್ತು ಜನ ಪ್ರಾದೇಶಿಕ ಪಕ್ಷಗಳತ್ತ ಒಲವು ತೋರುತ್ತಿದ್ದು, ರಾಜ್ಯದಲ್ಲಿ ನಡೆಯುವ 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಮತ್ತೆ ಜೆಡಿಎಸ್ ಪಕ್ಷ ಅಧಿಕಾರ ಹಿಡಿಯುವುದು ಖಚಿತ. ಮುಖ್ಯಮಂತ್ರಿಯಾಗಿ ಎಚ್‌.ಡಿ. ಕುಮಾರಸ್ವಾಮಿ ಅಧಿಕಾರದ ಗದ್ದುಗೆ ಹಿಡಿಯುತ್ತಾರೆ.

ತೀರ್ಥಹಳ್ಳಿ –ಹೊಸನಗರ ಕ್ಷೇತ್ರದಲ್ಲಿ  ಬೇಸಿಗೆಯಲ್ಲಿ ಕುಡಿಯುವ ನೀರು ಹಾಗೂ ಕೃಷಿ ಭೂಮಿಗೆ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತಿದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಪೂರ್ವಜರು ನಿರ್ಮಿಸಿದ ಕೆರೆ ಕಟ್ಟೆಗಳನ್ನು ಪುನರುಜ್ಜೀವನಗೊಳಿಸುವ ಕಾರ್ಯವಾಗಬೇಕು. 
ನಿರುದ್ಯೋಗ ಸಮಸ್ಯೆ ನಿವಾರಣೆಗಾಗಿ ಮಲೆನಾಡಿನಲ್ಲಿ ಯಥೇಚ್ಛವಾಗಿ ಸಿಗುವ ಅಡಿಕೆ ಹಾಳೆಗಳ ತಟ್ಟೆ ತಯಾರಿಕಾ ಘಟಕ ಸ್ಥಾಪಿಸಿ ಸೊಸೈಟಿ ಮೂಲಕ ಖರೀದಿ ಕೇಂದ್ರ ಆರಂಭಿಸಿ ಗ್ರಾಮೀಣ ಜನರಿಗೆ ಉದ್ಯೋಗ ಸೃಷ್ಟಿಸಬೇಕು. 

ಹೊಸಂಗಡಿಯಲ್ಲಿರುವ ವಿದ್ಯುತ್ ಉತ್ಪಾದನೆ ಘಟಕವನ್ನು ಸಂಡೂರು ಜಗಮೋಹನ್ ಪವರ್ ಕಾರ್ಪೋರೆಷನ್ ಕಂಪನಿಗೆ ಲೀಸ್  ಅಧಾರದಲ್ಲಿ ನೀಡಿದ ಅವಧಿ 2025ರಲ್ಲಿ ಕೊನೆಗೊಳ್ಳಲಿದೆ. ಇದನ್ನು ಪುನಃ ನವೀಕರಣಗೊಳಿಸದೆ ಸರ್ಕಾರವೇ ತನ್ನ ವಶದಲ್ಲಿಟ್ಟುಕೊಂಡು ರಾಜ್ಯಕ್ಕೆ ಬೆಳಕು ನೀಡುವ ನಿಟ್ಟಿನಲ್ಲಿ ಮನೆ. ಮಠ ಕಳೆದುಕೊಂಡ ಮುಳುಗಡೆ ಸಂತ್ರಸ್ಥರಿಗೆ ಉಚಿತ ವಿದ್ಯುತ್‌ ಪೂರೈಕೆ ಮಾಡಬೇಕು. ಪ್ರತಿ ತಾಲೂಕಲ್ಲಿ ಕೋಲ್ಡ್ ಸ್ಟೋರೇಜ್ ಮಾಡಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದರು.

ತೀರ್ಥಹಳ್ಳಿ ತಾಲೂಕಿನಲ್ಲಿ ಮೆಡಿಕಲ್‌ ಕಾಲೇಜ್ ಮತ್ತು ಇಂಡ್ರಸ್ಟಿಸ್ ಸ್ಥಾಪನೆ, ಏತ ನೀರಾವರಿ ಯೋಜನೆಯನ್ನು ಅನುಷ್ಟಾನಗೊಳಿಸುವ ಮೂಲಕ ಅತಿ ಹೆಚ್ಚು  ತುಂಗಾ –ಭದ್ರ,  ವರದಾ ಏತ ನೀರಾವರಿ ಯೋಜನೆಯಡಿ ಅಲ್ಲಿಲ್ಲಿ ಬ್ಯಾರೇಜ್ ನಿರ್ಮಿಸಿ ನಿರಂತರ ಶುದ್ಧ ಕುಡಿಯುವ ನೀರು ಪೂರೈಕೆಯ ಚಿಂತನೆ ಹೊಂದಿರುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಹೊಸನಗರ ತಾಲ್ಲೂಕ್ ಜೆಡಿಎಸ್ ಅಧ್ಯಕ್ಷ ಎನ್. ವರ್ತೇಶ್‌, ಜೆಡಿಎಸ್ ರಾಜ್ಯ ಮುಖಂಡ ಆರ್.ಎ.ಚಾಬುಸಾಬ್, ಮುಖಂಡರಾದ ಅರ್.ಎನ್.ಮಂಜುನಾಥ, ಜಿ.ಎಸ್.ವರದರಾಜ್, ಜಯನಗರ ವಾಸಪ್ಪಗೌಡ, ಷಣ್ಮುಖಪ್ಪ, ವಿಶ್ವನಾಥ ಕಲ್ಲುಕೊಪ್ಪ ಇನ್ನಿತರರು ಉಪಸ್ಥಿತರಿದ್ದರು.

ಯಡೂರು ರಾಜಾರಾಂ ಸಂದರ್ಶನದ ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇


Leave a Reply

Your email address will not be published. Required fields are marked *