ಬೈಂದೂರು-ರಾಣೆಬೆನ್ನೂರು ರಸ್ತೆ ಹಾಗೂ ಶಿಕಾರಿಪುರ ಪಟ್ಟಣದ ಬೈಪಾಸ್ ರಸ್ತೆ ನಿರ್ಮಾಣವಾಗಲಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಸುಮಾರು 203 ಕಿಮೀ ಉದ್ದದ ರಾಷ್ಟ್ರೀಯ ಹೆದ್ದಾರಿ 766(2) ಬೈಂದೂರು – ರಾಣೇ ಬೆನ್ನೂರು ರಸ್ತೆ ರಾಜ್ಯದ ಮಧ್ಯ ಭಾಗ ಹಾಗು ಕರಾವಳಿ ಭಾಗವನ್ನು ಸಂಪರ್ಕಿಸುವ ಏಕಪಥ ಹಾಗೂ ಮದ್ಯಂತರ ಪಥದ ರಸ್ತೆಗಳಾಗಿವೆ. ಇವುಗಳನ್ನು ದ್ವಿಪಥ ರಸ್ತೆಯನ್ನಾಗಿ ಅಭಿವೃದ್ಧಿಗೊಳಿಸಲು ಕೋರಿದ ಫಲವಾಗಿ ಕೊಲ್ಲೂರು ಪಟ್ಟಣ, ನಾಗೋಡಿ, ಜಯನಗರದಿಂದ ಹೊಸನಗರ ಬಟ್ಟೆ ಮಲ್ಲಪ್ಪದಿಂದ ಯಡೇಹಳ್ಳಿ, ಕಿಟ್ಟದ ಹಳ್ಳಿಯಿಂದ ಮಾಸೂರು ರಟ್ಟಿ ಹಳ್ಳಿ ಹಾಗೂ ಹಲಗೇರಿ ಭಾಗಗಳ ಒಟ್ಟು 27.78 ಕಿಮೀ ಉದ್ದದ ರಸ್ತೆ ಹಾಗು ಸೇತುವೆಗಳ ನಿರ್ಮಾಣ ಮತ್ತು ಅಭಿವೃದ್ಧಿ ಕೆಲಸಗಳಿಗೆ ರೂ 218.93 ಕೋಟಿಯ ಅಂದಾಜಿಗೆ ಮಂಜೂರಾತಿ ನೀಡಲಾಗಿದೆ. ಟೆಂಡರ್ ಪ್ರಕ್ರಿಯೆ ಅಂತಿಮ ಹಂತದಲಿದೆ ಎಂದಿದ್ದಾರೆ.
ಸಂಪೆಕಟ್ಟೆ – ಮಾವಿನಕೊಪ್ಪ ವೃತ್ತಕ್ಕೆ ಬೈಪಾಸ್ ರಸ್ತೆ :
ರಾಷ್ಟ್ರೀಯ ಹೆದ್ದಾರಿ 766ಸಿಯ 55.60 ರಿಂದ ಕಿಮೀ 90.70 ರವರೆಗೆ ಸಂಪಕಟ್ಟೆ ಆಡುಗೋಡಿ ಯಿಂದ ಹೊಸನಗರದ ಮಾವಿನಕೊಪ್ಪ ವೃತ್ತ ಸಂಪರ್ಕಿಸುವ 14.50ಕಿಮೀ ಉದ್ದದ ಬೈಪಾಸ್ ರಸ್ತೆ ಹಾಗೂ ಸೇತುವೆಗಳ ನಿರ್ಮಾಣ ಕಾಮಗಾರಿ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.
ಇದರಲ್ಲಿ ಸುಮಾರು 35.10 ಕಿಮೀ ಉದ್ದದ ಬಹುತೇಕ ಘಾಟಿ ರಸ್ತೆಯಾಗಿದ್ದು ಅತಿ ಅಪಾಯಕಾರಿ ಹಾಗೂ ಕ್ಲಿಷ್ಟಕರವಾದ ತಿರುವುಗಳಿಂದ ಕೂಡಿದೆ. ಇದರಲ್ಲಿ ಪ್ರಯಾಣಿಸುವುದು ದುಸ್ತರವಾಗಿದ್ದು, ಇದಕ್ಕೆ ಪರ್ಯಾಯವಾಗಿ ಕೇವಲ 14.50 ಕಿಮೀ ಉದ್ದದ ಬೈಪಾಸ್ ರಸ್ತೆಯನ್ನು ಹೊಸನಗರ ಮಾವಿನಕೊಪ್ಪ ವೃತ್ತದಿಂದ ಹೊಸನಗರ ಪಟ್ಟಣದ ಬೈಪಾಸ್ ರಸ್ತೆ ಸೇರಿದಂತೆ ಹೊಸನಗರದ ಹೋಲಿ ರಿಡೀಮರ್ ಶಾಲೆಯ ಹಿಂಭಾಗದಲ್ಲಿ ಹಾಗೂ ಬೆಕ್ಕೋಡಿ ಬಳಿ ಶರಾವತಿ ಹಿನ್ನೀರಿಗೆ 2 ಭಾರೀ ಸೇತುವೆ ಮತ್ತು ಆಡುಗೋಡಿ ಬಳಿ 2 ಸೇತುವೆಗಳ ನಿರ್ಮಾಣ ಮಾಡಲಾಗುತ್ತದೆ. ಈ ಭಾಗದ ಸುತ್ತ ಟಿಂಕೆ ಜೈಲು, ಎಲ್. ಗುಡ್ಡಕೊಪ್ಪ, ಹೆಬ್ಬುರ್ಲಿ, ಹೊಸೂರು ಗ್ರಾಮಗಳ ಮೂಲಕ ಆಡುಗೋಡಿ ಸೇರುವ ದ್ವಿಪಥದ ರಸ್ತೆಯನ್ನು 100 ಕಿಮೀ ವೇಗದಲ್ಲಿ ಸರಾಗವಾಗಿ ಚಲಿಸಲು ವಿನ್ಯಾಸಗೊಳಿಸಿ ಡಿಪಿಆರ್ ತಯಾರಿಸುವ ಕೆಲಸ ಪೂರ್ಣಗೊಂಡಿದೆ.
ಕೇಂದ್ರ ಭೂಸಾರಿಗೆ ಸಚಿವಾಲಯ 2022-23 ನೆಯ ಸಾಲಿನ ಕ್ರಿಯಾ ಯೋಜನೆಯಲ್ಲಿ 180 ಕೋಟಿ ರೂ.ಗಳ ಯೋಜನೆಗೆ ಅನುಮೋದನೆ ನೀಡಿದೆ. ಶೀಘ್ರದಲ್ಲಿ ಡಿಪಿಆರ್ ಮಂಜೂರಾತಿ ಪಡೆದು ಕಾಮಗಾರಿ ಪ್ರಾರಂಭಿಸಲು ಕ್ರಮವಹಿಸಲಾಗಿದೆ. ಈ ಬೈಪಾಸ್ ರಸ್ತೆ ನಿರ್ಮಾಣದಿಂದ ಸುರಕ್ಷಿತ ಪ್ರಯಾಣ, ಸಮಯ ಹಾಗು ಇಂದನ ವೆಚ್ಚ ಉಳಿತಾಯವಾಗುವುದರೊಂದಿಗೆ ಈ ಭಾಗದ ಹಿಂದುಳಿದ ಗ್ರಾಮಗಳ ಸಂಪರ್ಕ ಸಹ ಕಲ್ಪಿಸಬಹುದಾಗಿದೆ ಎಂದಿದ್ದಾರೆ.
ಇನ್ನು, ಈ ಯೋಜನೆಗೆ ಒಟ್ಟು 108 ಎಕರೆಯಷ್ಟು ಜಾಗದ ಅಗತ್ಯವಿದ್ದು ಇದರ ಪೈಕಿ 73 ಎಕರೆ ಜಾಗ ಕರ್ನಾಟಕ ಸರ್ಕಾರದ ಕೆಪಿಸಿ, ಅರಣ್ಯ ಮತ್ತು ಕಂದಾಯ ಇಲಾಖೆಗೆ ಸೇರಿದ್ದು ಇವುಗಳ ಬಿಡುಗಡೆಗೆ ಸಹ ಈಗಾಗಲೇ ಪ್ರಸ್ತಾವನೆ ಸಲ್ಲಿಸಿ ಅಗತ್ಯ ಕ್ರಮವಹಿಸಲಾಗಿದೆ. ಬಾಕಿ ಉಳಿದ ಭೂ ಮಾಲೀಕರ ಜಮೀನಿಗೆ ನಿಯಮಾನುಸಾರ ಪರಿಹಾರ ನೀಡಿ ಭೂಸ್ವಾಧೀನ ಮಾಡಲು ಸಹ ಅಗತ್ಯ ಕ್ರಮವಹಿಸಲಾಗಿದೆ ಎಂದಿದ್ದಾರೆ.
ಈ ಯೋಜನೆಯ ಅನುಮೋದನೆಗೆ ಸಹಕಾರ ನೀಡಿದ ಪ್ರಧಾನಿ ನರೇಂದ್ರ ಮೋದಿ, ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರುಗಳಿಗೆ ಸಂಸದರು ಧನ್ಯವಾದ ಅರ್ಪಿಸಿದ್ದಾರೆ.