ಜಮೀನು ಕೆಲಸಕ್ಕೆಂದು ಹೋದ ವ್ಯಕ್ತಿ ನಾಪತ್ತೆಯಾಗಿದ್ದ ಪ್ರಕರಣ ಹೊಸ ತಿರುವು ಪಡೆದುಕೊಂಡು ಕೊಲೆ ಪ್ರಕರಣವಾಗಿರುವ ಘಟನೆ ಸೊರಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಘಟನೆಯ ಹಿನ್ನಲೆ :
ಏ.11 ರಂದು ಮನ್ಮನೆ ನಿವಾಸಿ ಲೇಖಪ್ಪ(36) ಜಮೀನು ಕೆಲಸಕ್ಕೆಂದು ಹೋದವನು ಮನೆಗೆ ವಾಪಾಸ್ ಬಾರದ ಹಿನ್ನಲೆಯಲ್ಲಿ ಏ.14ರಂದು ಸೊರಬ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣವೊಂದು ದಾಖಲಾಗಿತ್ತು.
ಇಂದು ಕಡಸೂರು ಗ್ರಾಮದ ಹೊಳೆಯ ಸಮೀಪ ಲೇಖಪ್ಪನ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಲೇಖಪ್ಪನ ಸಹೋದರ ಗ್ರಾಮದಲ್ಲಿ ರಾಜಕೀಯ ವಿಚಾರವಾಗಿ ದ್ವೇಷ ಹೊಂದಿದ್ದ ಕೃಷ್ಣಪ್ಪ ಎಂಬ ವ್ಯಕ್ತಿ ಕೊಲೆ ಮಾಡಿರುವ ಅನುಮಾನವಿದೆ. ಇದರ ಜೊತೆಗೆ ಕೃಷ್ಣಪ್ಪ ಸಲುಗೆಯಿಂದ ಇದ್ದ ಮಹಿಳೆ ಜೊತೆ ಲೇಖಪ್ಪನು ಕೂಡಾ ಚೆನ್ಬಾಗಿದ್ದು ತನ್ನ ಅನೈತಿಕ ಸಂಬಂಧ ಬಯಲಾಗುವ ಹಿನ್ನಲೆಯಲ್ಲಿ ಲೇಖಪ್ಪನನ್ನು ಕೃಷಪ್ಪ ಕೊಲೆ ಮಾಡಿರುವ ಸಾಧ್ಯತೆ ಇದೆ ಎಂದು ದೂರು ದಾಖಲಿಸಿದ್ದಾನೆ.
ಈ ಹಿನ್ನಲೆಯಲ್ಲಿ ಸೊರಬ ಪೊಲೀಸ್ ವೃತ್ತ, ಪಿಎಸ್ಐ ಸೊರಬ ಠಾಣೆ ಮತ್ತು ಸಿಬ್ಬಂಧಿಗಳ ತಂಡವು ಈ ಪ್ರಕರಣದ ತನಿಖೆಯನ್ನು ಕೈಗೊಂಡು ಇಂದು ಆರೋಪಿತನಾದ ಮನ್ಮನೆಯ ಕೃಷ್ಣಪ್ಪ (36) ನನ್ನ ದಸ್ತಗಿರಿ ಮಾಡಿ ವಿಚಾರಣೆಗೊಳಪಡಿಸಿದೆ.
ಆರೋಪಿ ಕೃಷ್ಣಪ್ಪನು ಲೇಖಪ್ಪನ ಜೊತೆ ಇದ್ದ ರಾಜಕೀಯ ದ್ವೇಷ ಮತ್ತು ಮಹಿಳೆಯೊಂದಿಗಿನ ಸಂಬಂಧದ ಹಿನ್ನೆಲೆಯಲ್ಲಿ ಆತನನ್ನು ಕೊಲೆ ಮಾಡುವ ಉದ್ದೇಶದಿಂದ ಏ.11 ರಂದು ಬೆಳಗ್ಗೆ ಲೇಖಪ್ಪನನ್ನ ಮದುವೆಯಾಗುವ ಹುಡುಗಿಯ ಫೋಟೋ ತೋರಿಸುತ್ತೇನೆಂದು ಹೇಳಿ ತನ್ನ ಮನೆಗೆ ಕರೆಸಿಕೊಂಡು ಟವೆಲ್ ನಿಂದ ಲೇಖಪ್ಪನ ಕುತ್ತಿಗೆಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ.
ಅದೇ ದಿನ ಸಂಜೆ ಮೃತ ದೇಹವನ್ನು ಗೋಣಿ ಚೀಲದಲ್ಲಿ ತುಂಬಿ ಬೈಕ್ ನಲ್ಲಿ ತೆಗೆದುಕೊಂಡು ಹೋಗಿ ಕಡಸೂರು ಗ್ರಾಮದ ಹೊಳೆಯಲ್ಲಿ ಎಸೆದಿರುವುದು ವಿಚಾರಣೆಯಲ್ಲಿ ತಿಳಿದುಬಂದಿರುತ್ತದೆ.
ಒಟ್ಟಾರೆಯಾಗಿ ನಾಪತ್ತೆ ಪ್ರಕರಣ ಕೊಲೆ ಪ್ರಕರಣದಲ್ಲಿ ದುರಂತ ಅಂತ್ಯವಾಗಿದೆ.