ಶಾಂತ ರೀತಿಯಲ್ಲಿದ್ದ ಕರ್ನಾಟಕದಲ್ಲಿ ಗಲಭೆ,ದೊಂಬಿ ಎಬ್ಬಿಸುವ ಷಡ್ಯಂತ್ರ ನಡೆಯುತ್ತಿದೆ,ಇದು ಖಂಡನಾರ್ಹ : ಮಾಜಿ ಸಚಿವ ಕೆ ಎಸ್ ಈಶ್ವರಪ್ಪ

 ಶಾಂತಿಯಲ್ಲಿದ್ದ ರಾಜ್ಯದಲ್ಲಿ ಕೊಲೆ, ದೊಂಬಿ ಮೂಲಕ ಗಲಭೆ ನಿರ್ಮಾಣದ ಷಡ್ಯಂತ್ರ ನಡೆಯುತ್ತಿದೆ. ಇದನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ ಎಂದು ಮಾಜಿ ಸಚಿವ ಕೆ.ಎಸ್​ ಈಶ್ವರಪ್ಪ ಹೇಳಿದ್ದಾರೆ.

ಶಿವಮೊಗ್ಗದ ಖಾಸಗಿ ಹೋಟೆಲ್​ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ಒಬ್ಬ ಮೌಲ್ವಿ ಪೊಲೀಸ್ ಜೀಪ್ ಮೇಲೆ ನಿಂತು ಪ್ರಚೋದನೆ ಕೊಡುತ್ತಾನೆ.ತಲೆಗಳನ್ನು ಕತ್ತರಿಸಿ, ರುಂಡಗಳನ್ನು ಬೇರೆ ಮಾಡಿ ಎಂದು ಪ್ರಚೋಧಿಸುವ ಹೇಳಿಕೆ‌ ಕೊಡುತ್ತಾರೆ. ಕಾಂಗ್ರೆಸ್ ನಗರ ಅಧ್ಯಕ್ಷ ಅಲ್ತಾಫ್ ಹಳ್ಳೂರ್ ಮೌಲ್ವಿ ಪಕ್ಕದಲ್ಲಿ ನಿಂತು ಕಲ್ಲು ಹೊಡಿಯುವುದನ್ನು ನೋಡುತ್ತಿದ್ದಾರೆ. ಆಸ್ಪತ್ರೆ, ದೇವಾಲಯ, ಪೊಲೀಸ್ ತಲೆಗಳನ್ನು ಹುಡುಕಿ ಕಲ್ಲು ಹೊಡೆಯುತ್ತಾರೆ. ಈ ರೀತಿಯ ಕಲ್ಲು ತೂರಾಟ ಮಾಡುವ ಪುಂಡರಿಗೆ ತಕ್ಕ ಶಿಕ್ಷೆಯಾಗಬೇಕು. ಇದನ್ನು ನೇರವಾಗಿ ಎದುರಿಸುವ ಶಕ್ತಿ ಹಿಂದೂ ಸಂಘಟನೆಗಳಿಗಿದೆ. ಆದರೆ ನಾವು ಕಾನೂನು ಕೈಗೆ ತೆಗೆದುಕೊಳ್ಳಲು ಇಷ್ಟಪಡುವುದಿಲ್ಲ ಎಂದರು.

ಇನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಇವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತದೆ. ಪ್ರಚೋದನೆ ನಂತರ ಮೌಲ್ವಿ ಹೇಡಿಯ ರೀತಿ ಓಡಿ ಹೋಗಿದ್ದಾನೆ. ಗುಂಡಾಗಿರಿಗೆ ಪ್ರಚೋದನೆ ಕೊಟ್ಟು ಓಡಿಹೋದ ರಾಷ್ಟ್ರದ್ರೋಹಿ ಮೌಲ್ವಿ ಬಂಧನಕ್ಕೆ ಒತ್ತಾಯಿಸುತ್ತೇನೆ. ಕೆಜಿ ಹಳ್ಳಿ, ಡಿಜಿ ಹಳ್ಳಿ, ಹರ್ಷ, ಚಂದ್ರು ಕೊಲೆಯಾಯಿತು. ಇದೀಗ ಹುಬ್ಬಳಿ ಘಟನೆ. ಈ ರೀತಿ ಕೊಲೆ, ದೊಂಬಿ ಮಾಡುವ ವ್ಯಕ್ತಿಗಳನ್ನು ಬಿಡಬಾರದು ಸಿಸಿ ಟಿವಿ ಆಧರಿಸಿ, ಈಗಾಗಲೇ ಬಂಧನ ಮಾಡಲಾಗುತ್ತಿದೆ. ಗೂಂಡಾ ಕಾಯ್ದೆಅಡಿ ಅವರನ್ನು ಬಂಧನ ಮಾಡಿ, ಗಡಿಪಾರು ಮಾಡಬೇಕು. ಕೊಲೆ, ದೊಂಬಿ ಮಾಡುವುದು, ಬೇಲ್ ಪಡೆದು ವಾಪಸ್ ಬರೋದು ಅವರಿಗೆ ಅಭ್ಯಾಸ ಅಗಿದೆ. ಘಟನೆಗಳಿಗೆ ಕಾರಣರಾದ ವ್ಯಕ್ತಿ, ಸಂಘಟನೆ, ಪಕ್ಷದ ಬಗ್ಗೆ ಗಮನ ಹರಿಸಬೇಕು. ಬೆಂಗಳೂರು, ಹುಬ್ಬಳ್ಳಿ, ಶಿವಮೊಗ್ಗ ಆಯ್ತು. ಇನ್ನೆಲ್ಲಿ ಗಲಭೆ ಮಾಡುತ್ತಾರೋ ಗೊತ್ತಾಗಲ್ಲ, ಗಮನ ಹರಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

ಇನ್ನು ಇಷ್ಟೆಲ್ಲಾ ಘಟನೆ ನಡೆದರೂ ಕಾಂಗ್ರೆಸ್ ಖಂಡಿಸುವ ಕೆಲಸ ಮಾಡಿಲ್ಲ. ಕಲ್ಲಂಗಡಿ ಒಡೆದಾಗ ಎಲ್ಲರೂ ಬೊಬ್ಬೆ ಹಾಕಿದರು. ಪೊಲೀಸರ ತಲೆ ಒಡೆದರೂ ಇಂದು ಮಾತನಾಡುತ್ತಿಲ್ಲ. ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್, ಕುಮಾರಸ್ವಾಮಿ ಮಾತನಾಡುತ್ತಿಲ್ಲ. ಎಲ್ಲಾ ಮುಸಲ್ಮಾನರು ರಾಷ್ಟ್ರದ್ರೋಹಿಗಳು ಎಂದು ನಾನು ಹೇಳಲ್ಲ. ಇಂತಹ ಕೃತ್ಯದಲ್ಲಿ ಭಾಗವಹಿಸಿದವರು ರಾಷ್ಟ್ರದ್ರೋಹಿಗಳು. ಅಧಿಕಾರದ ಆಸೆಗಾಗಿ ಕಾಂಗ್ರೆಸ್ ಮುಸಲ್ಮಾನರ ಓಲೈಕೆ ಮಾಡುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್, ಜೆಡಿಎಸ್ ಅಧಿಕಾರದ ದಾಹಕ್ಕೆ ಕೊಲೆ, ದೊಂಬಿ ಗಳಾಗುತ್ತಿದೆ. ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಸಿಎಂ ಬೊಮ್ಮಾಯಿ ಈ ಬಗ್ಗೆ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.

Leave a Reply

Your email address will not be published. Required fields are marked *