ಯಡಿಯೂರಪ್ಪ ಅವರ ಕಣ್ಣಲ್ಲಿ ನೀರು ಹಾಕಿಸಿದ್ದು ಈಶ್ವರಪ್ಪ: ಡಿಕೆಶಿ

ಶಿವಮೊಗ್ಗ: ಸಂಗಮೇಶ್ವರ್ ಅವರಿಗೆ ಆರೋಗ್ಯ ಸರಿ ಇರಲಿಲ್ಲ. ಹೀಗಾಗಿ ಸದಸ್ಯತ್ವ ಅಭಿಯಾನಕ್ಕೆ ಹಿನ್ನೆಡೆಯಾಗಿತ್ತು. ಹೀಗಾಗಿ ನಾನೇ ಭದ್ರಾವತಿಗೆ ಬಂದು ಸದಸ್ಯತ್ವ ಅಭಿಯಾನಕ್ಕೆ ಚುರುಕು ಮುಟ್ಟಿಸಿದ್ದೇನೆ. ನಾಯಕರ ಬಳಿ ಚರ್ಚೆ ಮಾಡುವ ಉದ್ದೇಶದಿಂದ ಇಲ್ಲಿಗೆ ಬಂದಿದ್ದೇನೆ‌ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಭದ್ರಾವತಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ಎಂದರೆ‌ ನನಗೆ ಪ್ರೀತಿ ಹಾಗೂ ಶಿವಮೊಗ್ಗ ಬರಬೇಕು ಎಂಬುದು ನನ್ನ ಆಸೆ. ಕಾಂಗ್ರೆಸ್ ಪಕ್ಷದ ಆಧಾರ ಸ್ತಂಭ ಸದಸ್ಯರು. ಕಾಂಗ್ರೆಸ್ ಸದಸ್ಯರ ಸಂಖ್ಯೆಯನ್ನು ಹೆಚ್ಚಿನ‌ ಸಂಖ್ಯೆಯಲ್ಲಿ ಮಾಡಬೇಕಿದೆ. ಶಿವಮೊಗ್ಗದಿಂದ‌ ಇಡೀ ರಾಜ್ಯಕ್ಕೆ, ಸಂವಿಧಾನಕ್ಕೆ, ರಾಷ್ಟ್ರಧ್ವಜಕ್ಕೆ ಅವಮಾನವಾಗುತ್ತಿದೆ. ಯಡಿಯೂರಪ್ಪ ಜಿಲ್ಲೆಯಲ್ಲಿ ಒಂದಿಷ್ಟು ಅಭಿವೃದ್ಧಿ ಮಾಡಿದ್ದಾರೆ. ಆದರೆ, ಶಿವಮೊಗ್ಗದಲ್ಲಿ ನಡೆಯುತ್ತಿರುವ ರಾಜಕಾರಣದಿಂದ ಮುಂದಿನ ದಿನಗಳಲ್ಲಿ ಯಾವುದೇ ಉದ್ಯಮಿಗಳು ಇಲ್ಲಿ ಬಂಡವಾಳ ಹೂಡಲು ಬರುವುದಿಲ್ಲ.

ಹಿಂದೆ ಉಡುಪಿ ಮಂಗಳೂರಿನಲ್ಲೂ ಇದೇ ಸ್ಥಿತಿ ನಿರ್ಮಾಣವಾಗಿತ್ತು. ಜನರೇ ಎಚ್ಚರವಾಗಿರಿ, ನಿಮ್ಮ ಬದುಕು ಹುಷಾರು. ಬಿಜೆಪಿಯವರು ರೈತರ ಆದಾಯ ದ್ವಿಗುಣ ಮಾಡುತ್ತೇನೆ ಎಂದಿದ್ದರು, ಆದರೆ ಅದು ಆಗಲಿಲ್ಲ‌. ಈ ಕಾರಣಕ್ಕಾಗಿ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಬದಲಾವಣೆ ತರಬೇಕಿದೆ. ಬಿಜೆಪಿಯವರಿಗೆ ವೋಟು ಬೇಕು, ಸೀಟು ಬೇಕು. ಆದರೆ, ರಾಜ್ಯ ಉದ್ಧಾರವಾಗಬೇಕು ಎಂಬುದು ನಮ್ಮ ಆಸೆ. ಪ್ರತಿದಿನ ಒಂದೊಂದು ಹೊಸ ವಿಚಾರ ಮುನ್ನೆಲೆಗೆ ತಂದು ರಾಜ್ಯಕ್ಕೆ ಕಪ್ಪು ಚುಕ್ಕೆ ತರುತ್ತಿದ್ದಾರೆ. ನಮ್ಮ ಸ್ವಾಭಿಮಾನ ಕಳೆದುಕೊಳ್ಳಲು ನಾವು ತಯಾರಿಲ್ಲ. ಸ್ಥಳೀಯವಾಗಿ ಉದ್ಯೋಗಗಳು ಸೃಷ್ಟಿಯಾಗಬೇಕಿದೆ.

ಶಿವಮೊಗ್ಗದಲ್ಲಿ ಏರ್​​​​ಪೋರ್ಟ್ ಆಗುತ್ತಿದೆ. ಆದರೆ, ಇಲ್ಲಿ ದಿನ ಗಲಾಟೆ ನಡೆದು ಸೆಕ್ಷನ್ 144 ಜಾರಿಯಲ್ಲಿದ್ದರೆ ಯಾರು ಬರ್ತಾರೆ. ತಿನ್ನಲಿಕ್ಕೆ, ಉಣ್ಣಲು ನಿರ್ಬಂಧ ಹೇರುವ ಕೆಲಸ ಮಾಡಲಾಗುತ್ತಿದೆ. ಬಿಜೆಪಿ ಸರ್ಕಾರಕ್ಕೆ ಮಾನವೀಯತೆಯೇ ಇಲ್ಲ. ಇದು ಅತಿ ಭ್ರಷ್ಟ ಸರ್ಕಾರ, 40 ಪರ್ಸೆಂಟ್ ಸರ್ಕಾರ ಎಂದು ನಾವು ಆರೋಪ ಮಾಡಿಲ್ಲ. ಬದಲಿಗೆ ಕಂಟ್ರಾಕ್ಟರ್ ಅಸೋಸಿಯೇಷನ್​ನವರೇ ಹೇಳಿದ್ದಾರೆ. ಶಿವಮೊಗ್ಗ ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಆರು ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸವಿದೆ. ಇಲ್ಲಿ ವ್ಯಕ್ತಿ ಪೂಜೆಗೆ ಅವಕಾಶವಿಲ್ಲ, ಎಲ್ಲರೂ ಪಕ್ಷದ ಪೂಜೆ ಮಾಡಬೇಕು.

ಮನೆಮನೆಗೆ ಹೋಗಿ ಜನರ ಹೃದಯ ಗೆಲ್ಲುವ ಕೆಲಸ ಮಾಡಿ. ಜನರು ಈ ಭ್ರಷ್ಟ ಸರ್ಕಾರ ತೆಗೆಯಲು ನಿರ್ಧರಿಸಿದ್ದಾರೆ. ಬೆಲೆ ಏರಿಕೆ‌ ದಿನೇ ದಿನೇ ಹೆಚ್ಚುತ್ತಿದೆ. ಆದಾಯ ಪಾತಾಳಕ್ಕೆ ಹೋಗುತ್ತಿದೆ. ಆದರೆ ಖರ್ಚು ಹೆಚ್ಚಾಗುತ್ತಿದೆ. ಬಿಜೆಪಿಯಲ್ಲಿ ಭಿನ್ನಾಭಿಪ್ರಾಯ ತಾಂಡವವಾಡುತ್ತಿದೆ. ಯಡಿಯೂರಪ್ಪ ವಿರುದ್ಧ ಈಶ್ವರಪ್ಪ ಅವರೇ ರಾಜ್ಯಪಾಲರಿಗೆ ಪತ್ರ ಬರೆದಿದ್ದರು. ಸಿಎಂ ಬೊಮ್ಮಾಯಿ ಅವರನ್ನು ಕೆಳಗಿಳಿಸಿ ಮುರುಗೇಶ್ ನಿರಾಣಿಯನ್ನು ಸಿಎಂ ಮಾಡಲು ಈಶ್ವರಪ್ಪ ಪ್ರಯತ್ನಿಸುತ್ತಿದ್ದಾರೆ. ಯಡಿಯೂರಪ್ಪ ಅವರ ಕಣ್ಣಲ್ಲಿ ನೀರು ಹಾಕಿಸಿದ್ದು ಈಶ್ವರಪ್ಪ ಎಂದರು.

Leave a Reply

Your email address will not be published. Required fields are marked *