ಮಸೀದಿಗಳಲ್ಲಿ ಧ್ವನಿವರ್ಧಕ ಬಳಕೆ ಬಗ್ಗೆ ಮುಸ್ಲಿಂ ಮುಖಂಡರೇ ನಿರ್ಧರಿಸಲಿ: ಸಚಿವ ಕೆ ಎಸ್ ಈಶ್ವರಪ್ಪ

ಮಸೀದಿಯಲ್ಲಿ ಧ್ವನಿವರ್ಧಕ ತೆಗೆಸದಿದ್ದರೆ ನಾವೂ ಹನುಮಾನ್ ಚಾಳೀಸ್ ಕೇಳಿಸುತ್ತೇವೆ ಎಂದು ಕೆಲವರು ಹೇಳುತ್ತಿದ್ದಾರೆ.  ಹೀಗೆ ಬೇಕಾ ಬಿಟ್ಟಿ ಹೇಳುವದರಿಂದ ಕೋಮು ಸಂಘರ್ಷವಾಗಬಹುದು. ಧ್ವನಿವರ್ಧಕ ಬಳಸುವ ಬಗ್ಗೆ ಮುಸ್ಲಿಂ ಮುಖಂಡರೇ ನಿರ್ಧರಿಸಬೇಕು. ದೇವಸ್ಥಾನಗಳಲ್ಲಿ, ಚರ್ಚ್‌ಗಳಲ್ಲಿ ನಡೆಯುವ ರೀತಿ ಬೇರೆಯವರಿಗೆ ತೊಂದರೆಯಾಗದಂತೆ ಮಸೀದಿಯೊಳಗೇ ಧ್ವನಿವರ್ಧಕ ಬಳಸುವುದು ಸೂಕ್ತ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.

ಕಾಂಗ್ರೆಸ್ ನವರು ಅಲ್ಲಾಹುವನ್ನು ಮರೆತರು. ಏಸುಕ್ರಿಸ್ತನನ್ನೂ ಮರೆತರು. ಬುದ್ಧ, ಬಸವ, ಅಂಬೇಡ್ಕರ್ ನೆಪ ಶುರು ಮಾಡಿದ್ದಾರೆ. ಭಗವಂತ ಅವರಿಗೆ ಒಳ್ಳೆಯದು ಮಾಡಲಿ. ಈ ನೆಪದಲ್ಲಾದರೂ ಅವರ ತತ್ವಗಳನ್ನು ಮೈಗೂಡಿಸಿಕೊಳ್ಳಲಿ ಎಂದರು.


ಕುಮಟಾ ತಾಲ್ಲೂಕಿನ ಗೋಕರ್ಣ ಬಳಿಯ ಮಾದನಗೇರಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ  ಮಾತನಾಡಿದ ಅವರು, ‘ಇದು ನನ್ನ ವೈಯಕ್ತಿಕ ಅಭಿಪ್ರಾಯ. ಮಸೀದಿಗಳಲ್ಲಿ ಬೆಳಿಗ್ಗೆ, ಸಂಜೆ ಧ್ವನಿವರ್ಧಕಗಳನ್ನು ಬಳಸುವುದರಿಂದ ಓದುವ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ ಎಂದು ಹಲವು ವರ್ಷಗಳಿಂದ ಅಭಿಪ್ರಾಯಗಳಿವೆ. ಈ ಬಗ್ಗೆ ಮುಸ್ಲಿಂ ಮುಖಂಡರ ಮನವೊಲಿಸಿ ನಿರ್ಧಾರ ತೆಗೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಅಮಿತ್ ಶಾ ರಾಜ್ಯ ಪ್ರವಾಸ ಮಾಡಿದ‌್ದಾರೆ. ಅದರ ಪರಿಣಾಮವನ್ನು ಸ್ವಲ್ಪ ಕಾದು ನೋಡಿ. ‘ರಾಹುಲ್ ಗಾಂಧಿ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೂ ಬರಬೇಕು. ಅವರು ಎಲ್ಲೆಲ್ಲಿ ಕಾಲಿಟ್ಟಿದ್ದಾರೋ ಅಲ್ಲೆಲ್ಲ ಕಾಂಗ್ರೆಸ್ ನಿರ್ನಾಮವಾಗಿದೆ. ರಾಜ್ಯದ ಎಲ್ಲ ಕ್ಷೇತ್ರಗಳಿಗೆ ಅವರು ಬರುವುದಾದರೆ ಅದರ ಖರ್ಚನ್ನು ನಾನು ವಹಿಸಿಕೊಳ್ಳುತ್ತೇನೆ’ ಎಂದು ವ್ಯಂಗ್ಯವಾಡಿದರು.

Leave a Reply

Your email address will not be published. Required fields are marked *